ಕೆಪಿಎಲ್ ಟೂರ್ನಿ: ಬಳ್ಳಾರಿಗೆ ಸುಲಭ ತುತ್ತಾದ ರಾಕ್‌ಸ್ಟಾರ್ಸ್
ಹುಬ್ಬಳ್ಳಿ, ಸೆ.23: ಇಲ್ಲಿ ನಡೆಯುತ್ತಿರುವ ಕೆಪಿಎಲ್‌ನ 14ನೆ ಪಂದ್ಯದಲ್ಲಿ ಬಳ್ಳಾರಿ ಟಸ್ಕರ್ಸ್ ತಂಡ ರಾಕ್‌ಸ್ಟಾರ್ಸ್ ತಂಡದ ವಿರುದ್ಧ 8 ವಿಕೆಟ್‌ಗಳ ಅಂತರದಿಂದ ಸುಲಭ ಜಯ ದಾಖಲಿಸಿದೆ.
ಇಲ್ಲಿನ ಕೆಎಸ್‌ಸಿಎ ರಾಜ್‌ನಗರ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಾಕ್‌ಸ್ಟಾರ್ಸ್ ತಂಡ ಬಳ್ಳಾರಿ ತಂಡದ ಶಿಸ್ತುಬದ್ಧ ಬೌಲಿಂಗ್‌ಗೆ ತತ್ತರಿಸಿ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ ಕೇವಲ 97 ರನ್ ಗಳಿಸಲಷ್ಟೇ ಶಕ್ತವಾಯಿತು.
ಗೆಲ್ಲಲು ಸುಲಭ ಗುರಿ ಪಡೆದ ಬಳ್ಳಾರಿ ತಂಡ 11.2 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 98 ರನ್ ಗಳಿಸಿತು. ಆರಂಭಿಕ ಆಟಗಾರರಾದ ಆರ್‌ಪಿ ಕದಮ್(40 ರನ್, 32 ಎಸೆತ, 7 ಬೌಂಡರಿ) ಹಾಗೂ ಕೆಬಿ ಪವನ್(ಔಟಾಗದೆ 40 ರನ್, 27 ಎಸೆತ, 4 ಬೌಂಡರಿ, 2 ಸಿಕ್ಸರ್) ಮೊದಲ ವಿಕೆಟ್‌ಗೆ 62 ರನ್ ಗಳಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು.
ಕದಮ್ 40 ರನ್ ಗಳಿಸಿ ರಾಜು ಭಟ್ಕಳ್‌ಗೆ ವಿಕೆಟ್ ಒಪ್ಪಿಸಿದರು. ಮಂಜುನಾಥ್‌ರೊಂದಿಗೆ 3ನೆ ವಿಕೆಟ್‌ಗೆ 28 ರನ್ ಸೇರಿಸಿದ ಪವನ್ ಇನ್ನೂ 52 ಎಸೆತಗಳು ಬಾಕಿ ಇರುವಾಗಲೇ ತಂಡವನ್ನು ಗೆಲುವಿನ ದಡ ಸೇರಿಸಿದರು.
ರಾಕ್‌ಸ್ಟಾರ್ಸ್ ತಂಡವನ್ನು ಕನಿಷ್ಠ ಮೊತ್ತಕ್ಕೆ ಕಟ್ಟಿಹಾಕಿದ ಅನಿಲ್(3-15) ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಬಳ್ಳಾರಿ ತಂಡದ ಬೌಲರ್ ಅನಿಲ್‌ಗೆ ಬಿ. ಅಖಿಲ್(2-15) ಹಾಗೂ ಪ್ರಸಿದ್ಧ್ ಕೃಷ್ಣ(1-21) ಉತ್ತಮ ಸಾಥ್ ನೀಡಿದರು.
ಸಂಕ್ಷಿಪ್ತ ಸ್ಕೋರ್
ರಾಕ್‌ಸ್ಟಾರ್ಸ್: 20 ಓವರ್‌ಗಳಲ್ಲಿ 97/7
(ಶರತ್ 23, ಅಕ್ಷಯ್ 20, ಅನಿಲ್ 3-15, ಅಖಿಲ್ 2-15)
ಬಳ್ಳಾರಿ ಟಸ್ಕರ್ಸ್: 11.2 ಓವರ್‌ಗಳಲ್ಲಿ 98/2
(ಕದಮ್ 40, ಪವನ್ ಔಟಾಗದೆ 40, ಆರ್. ಗೌಡ 1-22)
ಪಂದ್ಯಶ್ರೇಷ್ಠ: ಐಜಿ ಅನಿಲ್(ಬಳ್ಳಾರಿ ಟಸ್ಕರ್ಸ್).