×
Ad

ಪ್ಯಾರಾಲಿಂಪಿಕ್ಸ್ ಪದಕ ವಿಜೇತರು ಪದ್ಮ ಪ್ರಶಸ್ತಿಗೆ ಶಿಫಾರಸು: ಕ್ರೀಡಾ ಸಚಿವಾಲಯ

Update: 2016-09-23 23:49 IST

ಹೊಸದಿಲ್ಲಿ, ಸೆ.23: ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಜಯಿಸಿರುವ ಅಥ್ಲೀಟ್‌ಗಳ ಸಾಧನೆಯನ್ನು ಗುರುತಿಸುವ ಉದ್ದೇಶದಿಂದ ಪದಕ ವಿಜೇತ ಪ್ಯಾರಾಥ್ಲೀಟ್‌ಗಳನ್ನು ಈ ವರ್ಷದ ಪದ್ಮ ಪ್ರಶಸ್ತಿಗೆ ಶಿಫಾರಸು ಮಾಡಲಾಗುವುದು ಎಂದು ಕ್ರೀಡಾ ಸಚಿವಾಲಯ ತಿಳಿಸಿದೆ.

ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳಿಗೆ ನಮ್ಮ ಸ್ಟಾರ್ ಪ್ಯಾರಾಲಿಂಪಿಯನ್‌ಗಳ ಹೆಸರುಗಳನ್ನು ಗೃಹ ವ್ಯವಹಾರ ಸಚಿವಾಲಯಕ್ಕೆ ಕ್ರೀಡಾ ಸಚಿವಾಲಯ ಶಿಫಾರಸು ಮಾಡಲಿದೆ ಎಂದು ಕ್ರೀಡಾ ಸಚಿವ ವಿಜಯ್ ಗೋಯೆಲ್ ಟ್ವಿಟರ್ ಪೇಜ್‌ನಲ್ಲಿ ಪ್ರಕಟಿಸಿದ್ದಾರೆ.

ಈ ತಿಂಗಳಾರಂಭದಲ್ಲಿ ಬ್ರೆಝಿಲ್‌ನಲ್ಲಿ ನಡೆದ ಪ್ಯಾರಾಲಿಂಪಿಕ್ ಗೇಮ್ಸ್‌ನಲ್ಲಿ ಭಾರತ ಎರಡು ಚಿನ್ನ, ತಲಾ 1 ಬೆಳ್ಳಿ ಹಾಗೂ ಕಂಚು ಸಹಿತ ಒಟ್ಟು 4 ಪದಕಗಳನ್ನು ಜಯಿಸಿತ್ತು. ತಂಗವೇಲು ಮಾರಿಯಪ್ಪನ್(ಹೈಜಂಪ್) ಹಾಗೂ ದೇವೇಂದ್ರ ಜಜಾರಿಯಾ(ಜಾವೆಲಿನ್ ಎಸೆತ) ಚಿನ್ನದ ಪದಕವನ್ನು, ದೀಪಾ ಮಲಿಕ್(ಶಾಟ್‌ಪುಟ್) ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದರು. ಇನ್ನೋರ್ವ ಜಾವೆಲಿನ್ ಎಸೆತಗಾರ ವರುಣ್ ಸಿಂಗ್ ಭಾಟಿ ಕಂಚಿನ ಪದಕ ಜಯಿಸಿದರು.

ರಿಯೋದಿಂದ ಸ್ವದೇಶಕ್ಕೆ ವಾಪಸಾದ ಪ್ಯಾರಾಥ್ಲೀಟ್‌ಗಳಿಗೆ ಭವ್ಯ ಸ್ವಾಗತ ನೀಡಲಾಗಿದ್ದು, ಗುರುವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ನಿವಾಸದಲ್ಲಿ ಪ್ಯಾರಾಥ್ಲೀಟ್‌ಗಳನ್ನು ಭೇಟಿಯಾಗಿ, ಅವರ ಸಾಧನೆಯನ್ನು ಶ್ಲಾಘಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News