ನ್ಯೂಝಿಲೆಂಡ್ ವಿರುದ್ಧ ಡೇವಿಸ್ ಕಪ್‌ಗೆ ಭಾರತ ಆತಿಥ್ಯ

Update: 2016-09-23 18:24 GMT

 ಹೊಸದಿಲ್ಲಿ, ಸೆ.23: ಮುಂಬರುವ ಸ್ವದೇಶದಲ್ಲಿ ನಡೆಯಲಿರುವ ಡೇವಿಸ್ ಕಪ್ ಏಷ್ಯಾ/ಒಶಿಯಾನಿಯ ಗ್ರೂಪ್-1ರಲ್ಲಿ ಭಾರತ ತಂಡ ನ್ಯೂಝಿಲೆಂಡ್‌ನ್ನು ಎದುರಿಸಲಿದೆ. ಟೂರ್ನಿಯು ಫೆ.3 ರಿಂದ 5ರ ತನಕ ನಡೆಯಲಿದೆ.

2015ರಲ್ಲಿ ವಿದೇಶದಲ್ಲಿ ನಡೆದ ಪಂದ್ಯದಲ್ಲಿ ನ್ಯೂಝಿಲೆಂಡ್‌ನ್ನು ಮಣಿಸಿದ್ದ ಭಾರತ ವರ್ಲ್ಡ್ ಗ್ರೂಪ್ ಪ್ಲೇ-ಆಫ್‌ಗೆ ಅರ್ಹತೆ ಪಡೆದುಕೊಂಡಿತ್ತು.

ಇತ್ತೀಚೆಗೆ ಐದು ಬಾರಿಯ ಚಾಂಪಿಯನ್ ಸ್ಪೇನ್ ವಿರುದ್ಧ ವರ್ಲ್ಡ್ ಗ್ರೂಪ್ ಪ್ಲೇ-ಆಫ್ ಟೂರ್ನಿಯಲ್ಲಿ 5-0 ಅಂತರದಿಂದ ಹೀನಾಯವಾಗಿ ಸೋತಿರುವ ಭಾರತ ಹಿನ್ನಡೆ ಅನುಭವಿಸಿತ್ತು.

‘‘ಗಾಯದ ಸಮಸ್ಯೆಯಿಂದಾಗಿ ಕಳೆದ ಎರಡು ಟೂರ್ನಿಗಳಿಂದ ಹೊರಗುಳಿದಿದ್ದ ಭಾರತದ ಇಬ್ಬರು ಸಿಂಗಲ್ಸ್ ಆಟಗಾರರಾದ ಯೂಕಿ ಭಾಂಬ್ರಿ ಹಾಗೂ ಸೋಮ್‌ದೇವ್ ದೇವ್‌ರಾಮನ್ ತಂಡಕ್ಕೆ ವಾಪಸಾಗುವ ವಿಶ್ವಾಸವಿದೆ. ಟೂರ್ನಿಗೆ ಇನ್ನೂ ಕೆಲವು ತಿಂಗಳು ಬಾಕಿಯಿದೆ. ಟೂರ್ನಿ ನಡೆಯುವ ಸ್ಥಳದ ಬಗ್ಗೆ ಎಐಟಿಎ ಬಳಿ ಚರ್ಚೆ ನಡೆಸುವೆ’’ ಎಂದು ಭಾರತದ ನಾಯಕ ಆನಂದ್ ಅಮೃತ್‌ರಾಜ್ ತಿಳಿಸಿದ್ದಾರೆ.

ಇದೇ ವೇಳೆ, ಮಹಾರಾಷ್ಟ್ರ ರಾಜ್ಯ ಲಾನ್ ಟೆನಿಸ್ ಅಸೋಸಿಯೇಶನ್ ಡೇವಿಸ್ ಕಪ್ ಆತಿಥ್ಯದ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದೆ. ಅದು ಎಐಟಿಎಗೆ ಪತ್ರ ಕಳುಹಿಸಿಕೊಡುವ ಸಾಧ್ಯತೆಯಿದೆ. ಎಐಟಿಎ ಇದಕ್ಕೆ ಸಮ್ಮತಿಸಿದರೆ, ಪುಣೆ ಪಂದ್ಯದ ಆತಿಥ್ಯವಹಿಸಿಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News