ವಿಲಿಯಮ್ಸನ್ ವಿಕೆಟ್ ಮೇಲುಗೈ ಒದಗಿಸಿತು: ಜಡೇಜ
Update: 2016-09-24 23:12 IST
ಕಾನ್ಪುರ, ಸೆ.24: ‘‘ನ್ಯೂಝಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಆರ್. ಅಶ್ವಿನ್‌ಗೆ ಔಟಾದ ಬಳಿಕ ಪಂದ್ಯದ ಚಿತ್ರಣ ಬದಲಾಯಿತು’’ ಎಂದು ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಅಭಿಪ್ರಾಯಪಟ್ಟಿದ್ದಾರೆ.
3ನೆ ದಿನದಾಟವಾದ ಶನಿವಾರ 152 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಕಿವೀಸ್ ತಂಡ ನಾಯಕ ವಿಲಿಯಮ್ಸನ್‌ರನ್ನು ಕಳೆದುಕೊಂಡ ಬಳಿಕ ದಿಢೀರ್ ಕುಸಿತ ಕಂಡಿತು.
‘‘ಕೇನ್ ದೀರ್ಘಕಾಲ ಬ್ಯಾಟಿಂಗ್ ಮಾಡಬಲ್ಲ ಕಿವೀಸ್ ಬ್ಯಾಟ್ಸ್‌ಮನ್ ಆಗಿದ್ದಾರೆ. ನಾವು ಅವರನ್ನು ಬೇಗನೆ ಔಟ್ ಮಾಡುವ ಯೋಜನೆ ಹಾಕಿಕೊಂಡಿದ್ದೆವು. ನಾವು ಬೆಳಗ್ಗಿನ ಆಟದಲ್ಲಿ 4 ವಿಕೆಟ್ ಕಬಳಿಸಿದ್ದೆವು. ಅದು ಪಂದ್ಯದ ಚಿತ್ರಣವನ್ನು ಬದಲಿಸಿತು’’ ಎಂದು ಪಂದ್ಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಡೇಜ ಅಭಿಪ್ರಾಯಪಟ್ಟರು.
ಪಂದ್ಯ ಆರಂಭಕ್ಕೆ ಮೊದಲು ಕೋಚ್ ಅನಿಲ್ ಕುಂಬ್ಳೆ ಅವರಿಂದ ಸಲಹೆ ಪಡೆದಿದ್ದ ಜಡೇಜ, ‘‘ಕುಂಬ್ಳೆ ಅವರು ನನಗೆ ಹೇಗೆ ಬೌಲಿಂಗ್ ಮಾಡಬೇಕೆಂದು ಸಲಹೆ ನೀಡಿದರು’’ ಎಂದು 73 ರನ್‌ಗೆ 5 ವಿಕೆಟ್ ಕಬಳಿಸಿದ್ದ ಜಡೇಜ ಹೇಳಿದ್ದಾರೆ.