ಮಾರಿಯಪ್ಪನ್ ತಂಗವೇಲುಗೆ ಚೆನ್ನೈನಲ್ಲಿ ಭವ್ಯ ಸ್ವಾಗತ
ಚೆನ್ನೈ, ಸೆ.24: ಬ್ರೆಝಿಲ್‌ನಲ್ಲಿ ಇತ್ತೀಚೆಗೆ ಕೊನೆಗೊಂಡ ರಿಯೋ ಪ್ಯಾರಾಲಿಂಪಿಕ್ ಗೇಮ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಹೈಜಂಪ್ ತಾರೆ ಮಾರಿಯಪ್ಪನ್ ತಂಗವೇಲು ಶುಕ್ರವಾರ ತಡರಾತ್ರಿ ಏರ್‌ಇಂಡಿಯಾ ವಿಮಾನದಲ್ಲಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂದಿಳಿದರು.
ರಾಜ್ಯ ಸರಕಾರದ ಪರವಾಗಿ ಕ್ರೀಡಾ ಸಚಿವ ಕೆ. ಪಾಂಡಿಯರಾಜನ್, ಗ್ರಾಮೀಣಾಭಿವೃದ್ದಿ ಸಚಿವ ಪಿ. ಬೆಂಜಮಿನ್ ಹಾಗೂ ಕ್ರೀಡಾ ಕಾರ್ಯದರ್ಶಿ ರಾಜೇಂದ್ರ ಕುಮಾರ್ ತಂಗವೇಲು ಅವರನ್ನು ಬರಮಾಡಿಕೊಂಡರು.
ಸುದ್ದಿಗಾರರೊಂದಿಗೆ ಮಾತನಾಡಿದ ತಂಗವೇಲು, ನಗದು ಬಹುಮಾನ ಘೋಷಿಸಿ, ರೈಲ್ವೆಯಲ್ಲಿ ಕೆಲಸ ನೀಡಿರುವ ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ತಾನು ಗೆದ್ದಂತಹ ಪದಕ ಸಾಧನೆಗೆ ದೈಹಿಕ ನ್ಯೂನತೆ ಅಡ್ಡಿಯಾಗದು ಎನ್ನುವುದಕ್ಕೆ ಸಾಕ್ಷಿಯಾಗಿದೆ. 2020ರ ಪ್ಯಾರಾಲಿಂಪಿಕ್ಸ್‌ನಲ್ಲೂ ಉತ್ತಮ ಪ್ರದರ್ಶನ ನೀಡಲು ಕಠಿಣ ಶ್ರಮ ಹಾಕುವೆ ಎಂದು ಹೇಳಿದ್ದಾರೆ.
‘‘ಸೇಲಂ ಜಿಲ್ಲೆಯ ‘ಗೋಲ್ಡನ್ ಬಾಯ್’ ತಂಗವೇಲು ಹಾಗೂ ಅವರ ಕುಟುಂಬ ಸದಸ್ಯರಿಗೆ ಎಲ್ಲ ನೆರವು ನೀಡಲು ರಾಜ್ಯ ಹಾಗೂ ಸರಕಾರ ಹೆಮ್ಮೆ ಪಡುತ್ತಿದೆ’’ ಎಂದು ಪಾಂಡಿಯಾರಾಜನ್ ಹೇಳಿದ್ದಾರೆ.