ಕೆಪಿಎಲ್ ಟೂನಿ: ಸೆಮಿ ಫೈನಲ್‌ನತ್ತ ಹುಬ್ಬಳ್ಳಿ ಟೈಗರ್ಸ್‌

Update: 2016-09-25 18:10 GMT

 ಹುಬ್ಬಳ್ಳಿ, ಸೆ.25: ಐದನೆ ಆವೃತ್ತಿಯ ಕೆಪಿಎಲ್ ಟೂರ್ನಿಯಲ್ಲಿ ಆತಿಥೇಯ ಹುಬ್ಬಳ್ಳಿ ಟೈಗರ್ಸ್‌ ತಂಡ ಮಂಗಳೂರು ಯುನೈಟೆಡ್ ವಿರುದ್ಧ 5 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದೆ.

ರವಿವಾರ ಇಲ್ಲಿನ ಕೆಎಸ್‌ಸಿಎ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ನಾಯಕ ಕುನಾಲ್ ಕಪೂರ್(64) ಹಾಗೂ ದಿಕ್ಷಾಂಶು ನೇಗಿ(ಔಟಾಗದೆ 53) ಹುಬ್ಬಳ್ಳಿ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದರು. ಮಂಗಳೂರು ತಂಡ ಹುಬ್ಬಳ್ಳಿ ಗೆಲುವಿಗೆ 174 ರನ್ ಕಠಿಣ ಗುರಿ ನೀಡಿತ್ತು. ದಿಟ್ಟ ಉತ್ತರ ನೀಡಿದ ಹುಬ್ಬಳ್ಳಿ ಇನ್ನೂ 2 ಎಸೆತಗಳು ಬಾಕಿ ಇರುವಾಗಲೇ 5 ವಿಕೆಟ್‌ಗಳ ನಷ್ಟಕ್ಕೆ 175 ರನ್ ಗಳಿಸಿ ಜಯಭೇರಿ ಬಾರಿಸಿತು.

ಹುಬ್ಬಳ್ಳಿ ತಂಡ ಸ್ಫೋಟಕ ಆರಂಭಿಕ ಆಟಗಾರ ಮುಹಮ್ಮದ್ ತಾಹರನ್ನು ಇನಿಂಗ್ಸ್‌ನ 2ನೆ ಓವರ್‌ನಲ್ಲಿ ಕಳೆದುಕೊಂಡಿತ್ತು. ಆಗ 2ನೆ ವಿಕೆಟ್‌ಗೆ 69 ರನ್ ಜೊತೆಯಾಟ ನಡೆಸಿದ ಮಂಜೇಶ್ ರೆಡ್ಡಿ(30ರನ, 22 ಎಸೆತ, 1 ಸಿಕ್ಸರ್, 4 ಬೌಂಡರಿ) ಹಾಗೂ ಕಪೂರ್(64 ರನ್, 46 ಎಸೆತ, 1 ಸಿಕ್ಸರ್, 7 ಬೌಂಡರಿ) ತಂಡಕ್ಕೆ ಉತ್ತಮ ಆರಂಭ ನೀಡಿದರು. ಕಪೂರ್ 3ನೆ ವಿಕೆಟ್‌ಗೆ ನೇಗಿಯೊಂದಿಗೆ 51 ರನ್ ಸೇರಿಸಿದರು. ಔಟಾಗದೆ 53 ರನ್(33 ಎಸೆತ, 2 ಸಿಕ್ಸರ್, 3 ಬೌಂಡರಿ) ಗಳಿಸಿದ್ದ ನೇಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದರು. ಈ ಗೆಲುವಿನ ಮೂಲಕ ಹುಬ್ಬಳ್ಳಿ ಸೆಮಿ ಫೈನಲ್ ಹಂತಕ್ಕೇರುವ ವಿಶ್ವಾಸ ಹೆಚ್ಚಿಸಿಕೊಂಡಿತು.

ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ್ದ ಮಂಗಳೂರು ತಂಡಕ್ಕೆ ಎಂ. ವಿಶ್ವನಾಥನ್(45ರನ್, 35 ಎಸೆತ) ಹಾಗೂ ಎಂ.ನಿದೇಶ್(41), ನಾಯಕ ಕರುಣ್ ನಾಯರ್(24), ಎನ್‌ಪಿ ಭರತ್(22) ಹಾಗೂ ಶಿಶಿರ್ ಭವಾನೆ(20) ಉಪಯಕ್ತ ಕಾಣಿಕೆಯ ನೆರವಿನಿಂದ ಸ್ಪರ್ಧಾತ್ಮಕ 173 ರನ್ ದಾಖಲಿಸಿತ್ತು. ಸಂಕ್ಷಿಪ್ತ ಸ್ಕೋರ್

 ಮಂಗಳೂರು ಯುನೈಟೆಡ್: 20 ಓವರ್‌ಗಳಲ್ಲಿ 173/7(ಎಂ.ವಿಶ್ವನಾಥನ್ 45, ಎಂ. ನಿದೇಶ್ 41, ಕರುಣ್ ನಾಯರ್ 24, ಎನ್‌ಪಿ ಭರತ್ 22, ಶಿಶಿರ್ 20, ಸ್ಟಾಲಿನ್ ಹೂವರ್ 3-15, ಸರ್ಫರಾಝ್ ಅಶ್ರಫ್ 2-32)

ಹುಬ್ಬಳ್ಳಿ ಟೈಗರ್ಸ್‌: 19.4 ಓವರ್‌ಗಳಲ್ಲಿ 175/5(ಕುನಾಲ್ ಕಪೂರ್ 64, ದಿಕ್ಷಾಂಶು ನೇಗಿ ಔಟಾಗದೆ 53, ಮಂಜೇಶ್ ರೆಡ್ಡಿ 30, ಮಿತ್ರಕಾಂತ್ ಸಿಂಗ್ 3-25)

ನಮ್ಮ ಶಿವಮೊಗ್ಗಕ್ಕೆ ರೋಚಕ ಜಯ

ಹುಬ್ಬಳ್ಳಿ, ಸೆ.25: ಕೆಪಿಎಲ್‌ನ 20ನೆ ಪಂದ್ಯದಲ್ಲಿ ನಮ್ಮ ಶಿವಮೊಗ್ಗ ತಂಡ ರಾಕ್‌ಸ್ಟಾರ್ಸ್‌ ತಂಡದ ವಿರುದ್ಧ 17 ರನ್‌ಗಳ ಅಂತರದ ರೋಚಕ ಜಯ ದಾಖಲಿಸಿದೆ. ಗೆಲ್ಲಲು 194 ರನ್ ಗುರಿ ಪಡೆದಿದ್ದ ರಾಕ್‌ಸ್ಟಾರ್ಸ್‌ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 176 ರನ್ ಗಳಿಸಿತು. ಎಂ.ಮೋಹನ್(57), ಶರತ್(40) ಹಾಗೂ ರಾಜು ಭಟ್ಕಳ(40) ಹೋರಾಟ ಫಲ ನೀಡಲಿಲ್ಲ. ಎಸ್.ಗೋಪಾಲ್(2-39) ರಾಕ್‌ಸ್ಟಾರ್ಸ್‌ಗೆ ಕಡಿವಾಣ ಹಾಕಿದರು.

 ಇದಕ್ಕೆ ಮೊದಲು ಶಿವಮೊಗ್ಗ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 193 ರನ್ ಗಳಿಸಿತು. ಆರಂಭಿಕ ಆಟಗಾರ ನಿಶ್ಚಲ್(65, 46 ಎಸೆತ, 6 ಬೌಂಡರಿ, 1 ಸಿಕ್ಸರ್) ಹಾಗೂ ನಾಯಕ ಸ್ಟುವರ್ಟ್ ಬಿನ್ನಿ(ಔಟಾಗದೆ 50, 20 ಎಸೆತ, 3 ಬೌಂಡರಿ, 4 ಸಿಕ್ಸರ್) ಶಿವಮೊಗ್ಗ ಬೃಹತ್ ಮೊತ್ತ ಗಳಿಸಲು ಪ್ರಮುಖ ಕಾಣಿಕೆ ನೀಡಿದರು. ಶರತ್(28) ಹಾಗೂ ಶ್ರೇಯಸ್ ಗೋಪಾಲ್(27) ತಂಡದ ಮೊತ್ತ 190ರ ಗಡಿ ದಾಟಲು ನೆರವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News