ಕಿವೀಸ್ ಸ್ಪಿನ್ನರ್ ಕ್ರೆಗ್ ಟೆಸ್ಟ್ ಸರಣಿಯಿಂದ ಔಟ್

Update: 2016-09-26 17:29 GMT

ಕಾನ್ಪುರ, ಸೆ.26: ಭಾರತ ವಿರುದ್ಧ ಟೆಸ್ಟ್ ಸರಣಿಯಲ್ಲಿ ನ್ಯೂಝಿಲೆಂಡ್‌ನ ಮರು ಹೋರಾಟದ ಅವಕಾಶಕ್ಕೆ ತೀವ್ರ ಹಿನ್ನಡೆಯಾಗಿದೆ. ತಂಡದ ಆಫ್ ಸ್ಪಿನ್ನರ್ ಮಾರ್ಕ್ ಕ್ರೆಗ್ ಗಾಯದ ಸಮಸ್ಯೆಯಿಂದಾಗಿ ಸರಣಿಯ ಉಳಿದೆರಡು ಪಂದ್ಯಗಳಿಂದ ಹೊರಗುಳಿದಿದ್ದಾರೆ.

ಕ್ರೆಗ್ ಬದಲಿಗೆ ಭಾರತ ಮೂಲದ ಜೀತನ್ ಪಟೇಲ್ ಆಡಲಿದ್ದಾರೆ. ಪಟೇಲ್ 2013ರ ಜನವರಿಯಲ್ಲಿ ನ್ಯೂಝಿಲೆಂಡ್‌ನ ಪರ ಕೊನೆಯ ಬಾರಿ ಟೆಸ್ಟ್ ಪಂದ್ಯ ಆಡಿದ್ದರು.

ಕಿವೀಸ್‌ನ ಶ್ರೇಷ್ಠ ಸ್ಪಿನ್ನರ್ ಕ್ರೆಗ್ ಕಾನ್ಪುರ ಟೆಸ್ಟ್‌ನಲ್ಲಿ 139 ರನ್ ನೀಡಿ 2 ವಿಕೆಟ್ ಕಬಳಿಸಿದ್ದರು. ಇತ್ತೀಚೆಗೆ ಆಸ್ಟ್ರೇಲಿಯ ಪ್ರವಾಸದಿಂದ ವಂಚಿತರಾಗಿದ್ದ ಕ್ರೆಗ್ ಇತ್ತೀಚೆಗಷ್ಟೇ ಕಿವೀಸ್ ತಂಡಕ್ಕೆ ವಾಪಸಾಗಿದ್ದರು.

 ಸರಣಿಯ ತಯಾರಿಗಾಗಿ ಸಾಕಷ್ಟು ಶ್ರಮವಹಿಸಿದ್ದ ಮಾರ್ಕ್ ಸರಣಿಯಿಂದ ಹೊರಗುಳಿಯುತ್ತಿರುವುದು ತುಂಬಾ ಬೇಸರದ ವಿಷಯ. ಭಾರತ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ ಅವರು ಉತ್ತಮ ಆರಂಭ ಪಡೆದಿದ್ದರು. ಈ ವೇಳೆ ಅವರಿಗೆ ಸ್ನಾಯು ಸೆಳೆತ ಕಾಣಿಸಿಕೊಂಡಿದೆ ಎಂದು ನ್ಯೂಝಿಲೆಂಡ್ ಕೋಚ್ ಮೈಕ್ ಹೆಸನ್ ಹೇಳಿದ್ದಾರೆ.

ಪಟೇಲ್ ಟೆಸ್ಟ್ ಕ್ರಿಕೆಟ್‌ನಲ್ಲಿ 48.46ರ ಸರಾಸರಿ ಹೊಂದಿದ್ದು, 2016ರ ಇಂಗ್ಲೀಷ್ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ವಾವ್ರಿಕ್‌ಶೈರ್ ಪರ 69 ವಿಕೆಟ್‌ಗಳನ್ನು ಕಬಳಿಸಿ ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಿದ್ದರು.

ಕ್ರೆಗ್‌ಗೆ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ನಾಲ್ಕು ವಾರಗಳ ಅಗತ್ಯವಿದೆ. ಪ್ರವಾಸಿ ಕಿವೀಸ್ ತಂಡ ಭಾರತಕ್ಕೆ ಬಂದ ಬಳಿಕ ಮೂರನೆ ಬಾರಿ ಆಟಗಾರರ ಗಾಯದ ಸಮಸ್ಯೆ ಎದುರಿಸುತ್ತಿದೆ. ಬೌಲರ್ ಟಿಮ್ ಸೌಥಿ ಹಾಗೂ ಆಲ್‌ರೌಂಡರ್ ಜಿಮ್ಮಿ ನೀಶಾಮ್ ಗಾಯದ ಸಮಸ್ಯೆಯಿಂದಾಗಿ ಭಾರತ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News