ಇಂಡಿಯಾ ಡ್ರೀಮ್ ಟೆಸ್ಟ್ ಇಲೆವೆನ್‌ನಲ್ಲಿ ಯುವರಾಜ್

Update: 2016-09-26 17:57 GMT

ಹೊಸದಿಲ್ಲಿ, ಸೆ.26: ಬಿಸಿಸಿಐ ಬಯಕೆಯಂತೆ ಕ್ರಿಕೆಟ್ ಅಭಿಮಾನಿಗಳು ಆಯ್ಕೆ ಮಾಡಿರುವ ಡ್ರೀಮ್ ಟೆಸ್ಟ್ ಇಲೆವೆನ್‌ನಲ್ಲಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡದ ಯುವರಾಜ್ ಸಿಂಗ್ ಸ್ಥಾನ ಪಡೆದಿದ್ದಾರೆ. ಆದರೆ, ಹಾಲಿ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಹಾಗೂ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ಸೌರವ್ ಗಂಗುಲಿಗೆ ಸ್ಥಾನ ನೀಡಲಾಗಿಲ್ಲ.

ಭಾರತ ಕ್ರಿಕೆಟ್ ತಂಡ ಕಾನ್ಪುರದಲ್ಲಿ ಐತಿಹಾಸಿಕ 500ನೆ ಟೆಸ್ಟ್ ಪಂದ್ಯ ಆಡಿದ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ಮಂಡಳಿ(ಬಿಸಿಸಿಐ) ಕ್ರಿಕೆಟ್ ಅಭಿಮಾನಿಗಳಿಂದ ಆನ್‌ಲೈನ್ ಮೂಲಕ ಶ್ರೇಷ್ಠ ಟೆಸ್ಟ್ ತಂಡವನ್ನು ಆಯ್ಕೆ ಮಾಡುವಂತೆ ವಿನಂತಿಸಿತ್ತು. ಅಭಿಮಾನಿಗಳ ಶ್ರೇಷ್ಠ ಟೆಸ್ಟ್ ತಂಡ ಸೋಮವಾರ ಬಹಿರಂಗವಾಗಿದೆ. ತಂಡದಲ್ಲಿ 80ರ ದಶಕದ ಕೇವಲ ಇಬ್ಬರು ಆಟಗಾರರಾದ ಸುನೀಲ್ ಗವಾಸ್ಕರ್ ಹಾಗೂ ಕಪಿಲ್‌ದೇವ್ ಸ್ಥಾನ ಪಡೆದಿದ್ದಾರೆ.

ಗ್ರೀನ್‌ಪಾರ್ಕ್ ಸ್ಟೇಡಿಯಂನಲ್ಲಿ ಸೋಮವಾರ ಭಾರತ ತಂಡ ನ್ಯೂಝಿಲೆಂಡ್‌ನ್ನು 197 ರನ್‌ಗಳ ಅಂತರದಿಂದ ಮಣಿಸಿತ್ತು. ಕಾನ್ಪುರ ಟೆಸ್ಟ್ ಪಂದ್ಯದ ಹೀರೊ ಆಫ್ ಸ್ಪಿನ್ನರ್ ಆರ್.ಅಶ್ವಿನ್ ಡ್ರೀಮ್ ಇಲೆವೆನ್‌ನಲ್ಲಿ ಸ್ಥಾನ ಪಡೆದಿದ್ದಾರೆ.

ರಾಹುಲ್ ದ್ರಾವಿಡ್ (90 ಶೇ.) ಗರಿಷ್ಠ ಮತಗಳನ್ನು ಪಡೆದಿದ್ದಾರೆ. ಆ ಬಳಿಕ ಅನಿಲ್ ಕುಂಬ್ಳೆ (92ಶೇ.), ಕಪಿಲ್‌ದೇವ್(91ಶೇ.) ಹಾಗೂ ಎಂಎಸ್ ಧೋನಿ(90 ಶೇ.) ಅವರಿದ್ದಾರೆ. ಕನಸಿನ ತಂಡಕ್ಕೆ ಧೋನಿ ನಾಯಕನಾಗಿ ಆಯ್ಕೆಯಾಗಿದ್ದಾರೆ. ಸಚಿನ್ ತೆಂಡುಲ್ಕರ್ 73 ಶೇ. ಮತ ಪಡೆದಿದ್ದಾರೆ.

 2012ರ ಡಿಸೆಂಬರ್‌ನಲ್ಲಿ ಕೊನೆಯ ಬಾರಿ ಟೆಸ್ಟ್ ಪಂದ್ಯ ಆಡಿರುವ ಯುವರಾಜ್ ಸಿಂಗ್ ತಂಡದ 12ನೆ ಆಟಗಾರನಾಗಿದ್ದಾರೆ. ಯುವರಾಜ್ ಟೆಸ್ಟ್ ಬ್ಯಾಟಿಂಗ್ ಸರಾಸರಿ 33.92. ಏಕದಿನ ಸರಾಸರಿ 36.37. ಕೊಹ್ಲಿ ಟೆಸ್ಟ್ ಬ್ಯಾಟಿಂಗ್ ಸರಾಸರಿ 45.06 ಹಾಗು ಏಕದಿನ ಬ್ಯಾಟಿಂಗ್ ಸರಾಸರಿ 51.05.

ಅಭಿಮಾನಿಗಳ ಆನ್‌ಲೈನ್ ವೋಟಿಂಗ್‌ನ ಮಾದರಿ ಯಾವುದು ಎಂದು ಗೊತ್ತಾಗಿಲ್ಲ.

ಇಂಡಿಯಾ ಡ್ರೀಮ್ ಟೆಸ್ಟ್ ಇಲೆವೆನ್:(ಅಭಿಮಾನಿಗಳ ಮತಗಳ ಪ್ರಕಾರ)

ಸುನೀಲ್ ಗವಾಸ್ಕರ್, ವೀರೇಂದ್ರ ಸೆಹ್ವಾಗ್, ರಾಹುಲ್ ದ್ರಾವಿಡ್, ಸಚಿನ್ ತೆಂಡುಲ್ಕರ್, ವಿವಿಎಸ್ ಲಕ್ಷ್ಮಣ್, ಕಪಿಲ್‌ದೇವ್, ಎಂಎಸ್ ಧೋನಿ, ರವಿಚಂದ್ರನ್ ಅಶ್ವಿನ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ಝಹೀರ್ ಖಾನ್ ಹಾಗೂ ಯುವರಾಜ್ ಸಿಂಗ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News