ವಿಶ್ವ ಟೆನಿಸ್: ನಂ.1 ಸ್ಥಾನ ಕಾಯ್ದುಕೊಂಡ ಸಾನಿಯಾ

Update: 2016-09-26 17:59 GMT

 ದುಬೈ, ಸೆ.26: ವಿಶ್ವ ಟೆನಿಸ್ ಅಸೋಸಿಯೇಶನ್‌ನ ಮಹಿಳೆಯರ ಡಬಲ್ಸ್ ರ್ಯಾಂಕಿಂಗ್‌ನಲ್ಲಿ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಝಾ ಅಗ್ರ ಸ್ಥಾನದಲ್ಲಿ ಮುಂದುವರಿಯುವ ಮೂಲಕ ತನ್ನ ಪ್ರಾಬಲ್ಯ ಉಳಿಸಿಕೊಂಡಿದ್ದಾರೆ.

ಕಳೆದ ತಿಂಗಳು ಸಿನ್ಸಿನಾಟಿ ಓಪನ್ ಪ್ರಶಸ್ತಿ ಜಯಿಸಿರುವ ಸಾನಿಯಾ ಹಾಗೂ ಝೆಕ್‌ನ ಬಾರ್ಬೊರಾ ಸ್ಟ್ರೈಕೋವಾ ಇತ್ತೀಚೆಗಷ್ಟೇ ಟೋಕಿಯೊದಲ್ಲಿ ಪಾನ್ ಪೆಸಿಫಿಕ್ ಓಪನ್ ಪ್ರಶಸ್ತಿಯನ್ನು ಜಯಿಸಿದ್ದರು. ಈ ಹಿನ್ನೆಲೆಯಲ್ಲಿ ಸಾನಿಯಾ ಅವರು ತಮ್ಮ ಮಾಜಿ ಜೊತೆಗಾರ್ತಿ, ಸ್ವಿಸ್‌ನ ಮಾರ್ಟಿನಾ ಹಿಂಗಿಸ್‌ಗಿಂತ 5 ಅಂಕ ಮುಂದಿದ್ದಾರೆ.

ಸಿನ್ಸಿನಾಟಿ ಓಪನ್ ಟೂರ್ನಿಯ ಬಳಿಕ ಒಂದಾಗಿ ಆಡುತ್ತಿರುವ ಸಾನಿಯಾ ಹಾಗೂ ಸ್ಟ್ರೈಕೋವಾ ಕೇವಲ ಒಂದು ಬಾರಿ ಸೋತಿದ್ದಾರೆ. ಯುಎಸ್ ಓಪನ್‌ನಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದ ಈ ಜೋಡಿ ಪಾನ್ ಪೆಸಿಫಿಕ್ ಓಪನ್ ಫೈನಲ್‌ನಲ್ಲಿ ಜಯಶಾಲಿಯಾಗುವ ಮೂಲಕ ಎರಡನೆ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

ಭಾರತೀಯ ಪುರುಷರ ಪೈಕಿ ಸಾಕೇತ್ ಮೈನೇನಿ ಅಗ್ರ ರ್ಯಾಂಕಿನ ಸಿಂಗಲ್ಸ್ ಆಟಗಾರನಾಗಿದ್ದಾರೆ. ಯುಎಸ್ ಓಪನ್‌ನಲ್ಲಿ ಅರ್ಹತಾ ಸುತ್ತಿನಲ್ಲಿ ಮೂರು ಪಂದ್ಯಗಳನ್ನು ಜಯಿಸಿದ್ದ ಮೈನೇನಿ ಮುಖ್ಯ ಸುತ್ತಿಗೆ ತೇರ್ಗಡೆಯಾಗಿದ್ದರು. ಇದೀಗ ಸಿಂಗಲ್ಸ್ ರ್ಯಾಂಕಿಂಗ್‌ನಲ್ಲಿ 138ನೆ ಸ್ಥಾನದಲ್ಲಿದ್ದಾರೆ.

ಪುರುಷರ ಡಬಲ್ಸ್‌ನಲ್ಲಿ ರೋಹನ್ ಬೋಪಣ್ಣ 18ನೆ ಸ್ಥಾನದಲ್ಲಿದ್ದಾರೆ. ಹಿರಿಯ ಟೆನಿಸ್‌ಪಟು ಲಿಯಾಂಡರ್ ಪೇಸ್ 4 ಸ್ಥಾನ ಪಡೆದು 138ನೆ ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News