ಕೊರಿಯಾ ಓಪನ್: ಭಾರತಕ್ಕೆ ಶ್ರೀಕಾಂತ್ ಸಾರಥ್ಯ

Update: 2016-09-26 18:00 GMT

ಸಿಯೊಲ್(ಕೊರಿಯಾ), ಸೆ.26: ಕಳೆದ ವಾರ ಜಪಾನ್ ಓಪನ್‌ನಲ್ಲಿ ಕ್ವಾರ್ಟರ್‌ಫೈನಲ್‌ಗೆ ತಲುಪಿದ್ದ ಕೆ.ಶ್ರೀಕಾಂತ್ ಮಂಗಳವಾರ ಇಲ್ಲಿ ಆರಂಭವಾಗಲಿರುವ ಕೊರಿಯಾ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ.

ರಿಯೋ ಒಲಿಂಪಿಕ್ಸ್ ಬಳಿಕ ಜಪಾನ್ ಓಪನ್‌ನಲ್ಲಿ ಆಡಿದ್ದ ಶ್ರೀಕಾಂತ್ ಕ್ವಾರ್ಟರ್ ಫೈನಲ್ ತಲುಪಿದ್ದರೂ ವಿಶ್ವದ ನಂ.15ನೆ ಆಟಗಾರ ಮಾರ್ಕ್ ಝ್ವೆಬ್ಲೆರ್‌ಗೆ ಸೋತಿದ್ದರು. ಬುಧವಾರ ನಡೆಯಲಿರುವ ಮೊದಲ ಸುತ್ತಿನ ಪಂದ್ಯದಲ್ಲಿ ಹಾಂಕಾಂಗ್‌ನ ವಾಂಗ್ ವಿಂಗ್ ಕಿ ವಿನ್ಸೆಂಟ್‌ರನ್ನು ಎದುರಿಸಲಿದ್ದಾರೆ.

 ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಪಿ.ಕಶ್ಯಪ್ ಮಲೇಷ್ಯಾದ ಗೊಸುನ್‌ಹುಯಾಟ್‌ರನ್ನು ಎದುರಿಸಲಿದ್ದಾರೆ. ಜಪಾನ್ ಓಪನ್‌ನಲ್ಲಿ ಶ್ರೀಕಾಂತ್ ವಿರುದ್ಧ ಆಡುವಾಗಲೇ ಗಾಯಗೊಂಡಿದ್ದ ಅಜಯ್ ಜಯರಾಮ್ ಇದೀಗ ಚೇತರಿಸಿಕೊಂಡಿದ್ದು, ಕೂಟದ ಮೊದಲ ಪಂದ್ಯದಲ್ಲಿ ಕೊರಿಯಾದ ಜಿಯೊನ್ ಹಿಯೊಕ್‌ರನ್ನು ಎದುರಿಸಲಿದ್ದಾರೆ.

ಸ್ವಿಸ್ ಓಪನ್ ಚಾಂಪಿಯನ್ ಎಚ್‌ಎಸ್ ಪ್ರಣಯ್ ಚೈನೀಸ್ ತೈಪೆಯ ಝು ವೀ ವಾಂಗ್‌ರನ್ನು ಕೆನಡಾ ಓಪನ್ ವಿನ್ನರ್ ಬಿ. ಸಾಯಿ ಪ್ರಣೀತ್ ಚೈನೀಸ್ ತೈಪೆಯ ಇನ್ನೋರ್ವ ಆಟಗಾರ ಸು ಜೆನ್ ಹಾವೊರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News