ಟೀಮ್ ಇಂಡಿಯಾಕ್ಕೆ ಗೌತಮ್ ಗಂಭೀರ್ ವಾಪಸ್

Update: 2016-09-27 18:10 GMT

ಕೋಲ್ಕತಾ, ಸೆ.27: ಹಿರಿಯ ಆರಂಭಿಕ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಎರಡು ವರ್ಷಗಳ ಬಳಿಕ ಭಾರತದ ಟೆಸ್ಟ್ ತಂಡಕ್ಕೆ ವಾಪಸಾಗಿದ್ದಾರೆ. ಇನ್ನೋರ್ವ ಆರಂಭಿಕ ದಾಂಡಿಗ ಕೆಎಲ್ ರಾಹುಲ್ ಸ್ನಾಯು ಸೆಳೆತದಿಂದಾಗಿ ಸರಣಿಯ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ.

ಶುಕ್ರವಾರದಿಂದ ಈಡನ್‌ಗಾರ್ಡನ್ಸ್‌ನಲ್ಲಿ ಆರಂಭವಾಗಲಿರುವ ನ್ಯೂಝಿಲೆಂಡ್ ವಿರುದ್ಧದ 2ನೆ ಟೆಸ್ಟ್‌ಗೆ ಗಾಯಗೊಂಡಿರುವ ಕೆಎಲ್ ರಾಹುಲ್ ಬದಲಿಗನಾಗಿ ಗಂಭೀರ್ ಆಯ್ಕೆಯಾಗಿದ್ದಾರೆ.

ಕಾನ್ಪುರದಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನ ಎರಡನೆ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್‌ನ ವೇಳೆ ರಾಹುಲ್‌ಗೆ ಸ್ನಾಯು ಸೆಳೆತ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಅವರು ನ್ಯೂಝಿಲೆಂಡ್‌ನ ದ್ವಿತೀಯ ಇನಿಂಗ್ಸ್ ವೇಳೆ ಫೀಲ್ಡಿಂಗ್ ನಡೆಸದೇ ಪೆವಿಲಿಯನ್‌ನಲ್ಲಿ ಉಳಿದಿದ್ದರು.

ಇತ್ತೀಚೆಗೆ ನಡೆದ ದುಲೀಪ್ ಟ್ರೋಫಿಯಲ್ಲಿ 5 ಇನಿಂಗ್ಸ್‌ಗಳಲ್ಲಿ ಸತತ ನಾಲ್ಕು ಅರ್ಧಶತಕಗಳ ಸಹಿತ ಒಟ್ಟು 356 ರನ್‌ಗಳಿಸಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಗಂಭೀರ್ ಕೊನೆಗೂ ಭಾರತ ತಂಡಕ್ಕೆ ವಾಪಸಾಗಿದ್ದಾರೆ.

ಮೊದಲ ಟೆಸ್ಟ್‌ಗೆ ಆಯ್ಕೆಯಾಗಿದ್ದ ಶಿಖರ್ ಧವನ್ ಭಾರತದ ಟೆಸ್ಟ್ ತಂಡದ ಮೂರನೆ ಆರಂಭಿಕ ಆಟಗಾರನಾಗಿದ್ದಾರೆ. ಅವರು ಮುಂದಿನ ಪಂದ್ಯದಲ್ಲಿ ಮುರಳಿ ವಿಜಯ್‌ರೊಂದಿಗೆ ಇನಿಂಗ್ಸ್ ಆರಂಭಿಸಬಹುದು.

  ಸ್ವದೇಶದಲ್ಲಿ ನಡೆಯಲಿರುವ ಸತತ 4 ಸರಣಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಗಂಭೀರ್,ಯುವರಾಜ್ ಸಿಂಗ್, ಜಸ್‌ಪ್ರೀತ್ ಬುಮ್ರಾ ಹಾಗೂ ಬರಿಂದರ್ ಸ್ರಾನ್‌ರನ್ನು ಬಿಸಿಸಿಐ ಫಿಟ್‌ನೆಸ್ ಟೆಸ್ಟ್‌ಗೆ ಒಳಪಡಿಸಿದ್ದು, ಮಂಗಳವಾರ ಎನ್‌ಸಿಎಯಲ್ಲಿ ನಡೆದ ಪರೀಕ್ಷೆಯಲ್ಲಿ ಈ ನಾಲ್ವರು ಆಟಗಾರರು ಪಾಸಾಗಿದ್ದಾರೆ.

34ರ ಪ್ರಾಯದ ಗಂಭೀರ್ ಭಾರತದ ಪರ 56 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 2014ರಲ್ಲಿ ಇಂಗ್ಲೆಂಡ್ ಪ್ರವಾಸದ ವೇಳೆ ಭಾರತದ ಪರ ಕೊನೆಯ ಪಂದ್ಯ ಆಡಿದ್ದರು. ಟೆಸ್ಟ್‌ನಲ್ಲಿ 4,046 ರನ್ ಗಳಿಸಿರುವ ಗಂಭೀರ್ ಈ ಹಿಂದೆ ತಂಡದ ಖಾಯಂ ಸದಸ್ಯರಾಗಿದ್ದರು. 2011ರಲ್ಲಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನಕ್ಕೇರಿದ್ದರು. 2012ರಲ್ಲಿ ಇಂಗ್ಲೆಂಡ್ ಪ್ರವಾಸದ ವೇಳೆ ಭಾರತ 2-1 ರಿಂದ ಸರಣಿ ಸೋತ ಬಳಿಕ ರನ್ ಬರ ಎದುರಿಸುತ್ತಿದ್ದ ಗಂಭೀರ್‌ಗೆ ನಿರ್ಗಮನ ಹಾದಿ ತೋರಿಸಲಾಗಿತ್ತು.

 ಚಿಕುನ್‌ಗುನ್ಯಾದಿಂದ ಬಳಲುತ್ತಿರುವ ವೇಗದ ಬೌಲರ್ ಇಶಾಂತ್ ಶರ್ಮ ಎರಡನೆ ಟೆಸ್ಟ್‌ನಿಂದಲೂ ಹೊರಗುಳಿದಿದ್ದು, ಇಶಾಂತ್ ಬದಲಿಗೆ ಆಫ್-ಸ್ಪಿನ್ನರ್ ಜಯಂತ್ ಯಾದವ್‌ಗೆ ಕರೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News