ಆಯ್ಕೆ ಸಮಿತಿಯ ರಹಸ್ಯ ಬಿಚ್ಚಿಟ್ಟ ಸಂದೀಪ್ ಪಾಟೀಲ್ ವಿರುದ್ಧ ಠಾಕೂರ್ ಗರಂ
ಹೊಸದಿಲ್ಲಿ, ಸೆ.27: ಇತ್ತೀಚೆಗೆ ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ಸಂದೀಪ್ ಪಾಟೀಲ್ ಅವರು ಸಚಿನ್ ತೆಂಡುಲ್ಕರ್, ಎಂಎಸ್ ಧೋನಿ ಹಾಗೂ ಇತರ ಕ್ರಿಕೆಟಿಗರ ಬಗ್ಗೆ ನಿರ್ದಿಷ್ಟ ಗೌಪ್ಯ ವಿವರಗಳನ್ನು ಬಹಿರಂಗಪಡಿಸಿರುವುದು ‘ಅನೈತಿಕ’ ಎಂದು ಬಿಸಿಸಿಐ ಮುಖ್ಯಸ್ಥ ಅನುರಾಗ್ ಠಾಕೂರ್ ಕಿಡಿಕಾರಿದ್ದಾರೆ.
‘‘ಟಿವಿ ವಾಹಿನಿಗಳಲ್ಲಿ ಪಾಟೀಲ್ ನೀಡಿರುವ ಹೇಳಿಕೆಗಳು ವಿವಾದವನ್ನು ಸೃಷ್ಟಿಸಿದ್ದು, ಬಿಸಿಸಿಐನ ಸರಿಯಾದ ವ್ಯಕ್ತಿ ಪಾಟೀಲ್ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಿದ್ದಾರೆ’’ ಎಂದು ಅವರು ಹೇಳಿದ್ದಾರೆ.
ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟಿಗ ಪಾಟೀಲ್ ಇತ್ತೀಚೆಗೆ ಆಯ್ಕೆ ಸಮಿತಿಯ ಅಧ್ಯಕ್ಷ ಅವಧಿಯನ್ನು ಪೂರ್ಣಗೊಳಿಸಿದ ಬಳಿಕ ಮಾಧ್ಯಮಗಳಿಗೆ ನೀಡಿರುವ ಸಂದರ್ಶನದಲ್ಲಿ ‘‘ಸಚಿನ್ ತೆಂಡುಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗದೇ ಇರುತ್ತಿದ್ದರೆ, ಅವರನ್ನು ತಂಡದಿಂದ ಕೈಬಿಡುವ ಬಗ್ಗೆ ಆಯ್ಕೆ ಸಮಿತಿ ಯೋಚಿಸಿತ್ತು. 2015ರ ಏಕದಿನ ವಿಶ್ವಕಪ್‌ಗೆ ಮೊದಲು ಎಂಎಸ್ ಧೋನಿಯನ್ನು ನಾಯಕತ್ವದಿಂದ ಕಿತ್ತೊಗೆಯಲು ನಿರ್ಧರಿಸಲಾಗಿತ್ತು’’ಎಂದು ಹೇಳಿದ್ದರು.
‘‘ಸಂದೀಪ್ ಆಯ್ಕೆ ಸಮಿತಿಯ ಮಾಜಿ ಮುಖ್ಯಸ್ಥರು. ಅವರು ಇಂತಹ ಹೇಳಿಕೆಗಳನ್ನು ನೀಡಬಾರದಿತ್ತು. ಅವರು ಚೇರ್ಮನ್ ಆಗಿದ್ದಾಗ ಇದೇ ಪ್ರಶ್ನೆಗೆ ವಿಭಿನ್ನ ಉತ್ತರ ನೀಡುತ್ತಿದ್ದರು. ಆದರೆ, ಅವರ ಅಧಿಕಾರದ ಅವಧಿ ಮುಗಿದ ತಕ್ಷಣ ಅವರ ಮಾತಿನ ವರಸೆ ಬೇರೆಯಾಗಿದೆ. ಅವರ ವರ್ತನೆ ಸಂಪೂರ್ಣವಾಗಿ ಅನೈತಿಕವಾಗಿದೆ’’ ಎಂದು ಠಾಕೂರ್ ತಿಳಿಸಿದ್ದಾರೆ.
‘‘ಆಯ್ಕೆ ವಿಷಯಕ್ಕೆ ಸಂಬಂಧಿಸಿ ಯಾರೂ ಕೂಡ ಇಂತಹ ಅನೈತಿಕ ಹೇಳಿಕೆ ನೀಡಬಾರದು. ಅವರು ಸಾಕಷ್ಟು ಕ್ರಿಕೆಟ್ ಆಡಿದ್ದು, ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ನಂಬಿಕೆ ಉಳಿಸಿಕೊಳ್ಳಬೇಕಾಗಿದೆ. ಅವರೊಂದಿಗೆ ಇನ್ನು ನಾಲ್ವರು ಆಯ್ಕೆಗಾರರು ಕೆಲಸ ಮಾಡಿದ್ದಾರೆ. ಅವರು ಆಯ್ಕೆ ವಿಷಯದ ಬಗ್ಗೆ ಏನೂ ಹೇಳಿಲ್ಲ. ಅವರು(ಪಾಟೀಲ್) ಇಂತಹ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು’’ ಎಂದು ಠಾಕೂರ್ ತಿಳಿಸಿದ್ದಾರೆ.