ಕೋಲ್ಕತಾದ ಈಡನ್ ಟೆಸ್ಟ್‌ನಲ್ಲಿ ಬೆಲ್ ಬಾರಿಸಲಿರುವ ಕಪಿಲ್‌ದೇವ್

Update: 2016-09-27 18:20 GMT

ಕೋಲ್ಕತಾ, ಸೆ.27: ನ್ಯೂಝಿಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್‌ನ ಮೊದಲ ದಿನ ಈಡನ್‌ಗಾರ್ಡನ್ಸ್‌ನಲ್ಲಿ ಅಳವಡಿಸಲಾಗಿರುವ ದೊಡ್ಡ ಗಾತ್ರದ ಗಂಟೆಯನ್ನು ಭಾರತದ ಪರ ಮೊದಲ ವಿಶ್ವಕಪ್ ವಿಜೇತ ನಾಯಕ ಕಪಿಲ್‌ದೇವ್ ಬಾರಿಸಲಿದ್ದಾರೆ ಎಂದು ಬಂಗಾಳ ಕ್ರಿಕೆಟ್ ಸಂಸ್ಥೆ(ಸಿಎಬಿ) ಅಧ್ಯಕ್ಷ ಸೌರವ್ ಗಂಗುಲಿ ತಿಳಿಸಿದ್ದಾರೆ.

ಕಿವೀಸ್ ವಿರುದ್ಧದ ಈ ಪಂದ್ಯ ತವರು ಮೈದಾನದಲ್ಲಿ ಭಾರತ ಆಡಲಿರುವ 250ನೆ ಪಂದ್ಯವಾಗಿದೆ.

‘‘ಕಪಿಲ್‌ದೇವ್ ಈಡನ್‌ಗಾರ್ಡನ್ಸ್‌ನಲ್ಲಿ ಅಳವಡಿಸಲಾಗುವ ಬೆಲ್‌ನ್ನು ಬಾರಿಸಲಿದ್ದಾರೆ’’ ಎಂದು ಭಾರತದ ಮಾಜಿ ನಾಯಕ ಗಂಗುಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇಂಗ್ಲೆಂಡ್‌ನ ಐತಿಹಾಸಿಕ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ದೊಡ್ಡ ಗಾತ್ರದ ಗಂಟೆಯಿದೆ. ಲಾರ್ಡ್ಸ್‌ನ ಗಂಟೆಯಂತೆಯೇ ಬೆಳ್ಳಿ ಲೇಪಿತ ಗಂಟೆಯನ್ನು ಚಂಡೀಗಢದಲ್ಲಿ ತಯಾರಿಸಿ ಇಲ್ಲಿಗೆ ತರಲಾಗಿದ್ದು, ಗಂಟೆಯನ್ನು ಐತಿಹಾಸಿಕ ಈಡನ್‌ಗಾರ್ಡನ್ಸ್‌ಲ್ಲಿ ಮಂಗಳವಾರ ಅಳವಡಿಸುವ ಸಾಧ್ಯತೆಯಿದೆ.

‘‘ಟಾಸ್‌ನ ವೇಳೆ ಚಿನ್ನದ ನಾಣ್ಯವನ್ನು ಬಳಸಲಾಗುತ್ತದೆ. ಇನ್ನು ಮುಂದೆ ಇದೇ ನಾಣ್ಯವನ್ನು ಈಡನ್‌ಗಾರ್ಡನ್ಸ್‌ನಲ್ಲಿ ನಡೆಯಲಿರುವ ಎಲ್ಲ ಪಂದ್ಯಗಳ ಟಾಸ್ ವೇಳೆ ಬಳಸಲಾಗುತ್ತದೆ’’ ಎಂದು ಗಂಗುಲಿ ಮಾಹಿತಿ ನೀಡಿದರು.

ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಪಂದ್ಯದ ಎರಡನೆ ದಿನವಾದ ಅ.1 ರಂದು ನಗರಕ್ಕೆ ಆಗಮಿಸಲಿದ್ದು, ಮೂರನೆ ದಿನದಾಟದ ವೇಳೆ ವಿಶೇಷವಾಗಿ ನಿರ್ಮಿಸಲ್ಪಟ್ಟಿರುವ 250 ಎಂದು ಬರೆದಿರುವ ಬೆಳ್ಳಿ ನಾಣ್ಯಗಳನ್ನು ಬಂಗಾಳದ ಮಾಜಿ ಕ್ರಿಕೆಟ್ ನಾಯಕರಿಗೆ ಹಸ್ತಾಂತರಿಸಲಿದ್ದಾರೆ ಎಂದು ಗಂಗುಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News