ಪ್ರಧಾನ ಸುತ್ತಿಗೆ ಕಶ್ಯಪ್ ತೇರ್ಗಡೆ
ಸಿಯೊಲ್, ಸೆ.27: ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಪಾರುಪಲ್ಲಿ ಕಶ್ಯಪ್ 600,000 ಯುಎಸ್ ಡಾಲರ್ ಬಹುಮಾನ ಮೊತ್ತದ ಕೊರಿಯಾ ಸೂಪರ್ ಸರಣಿಯಲ್ಲಿ ಸತತ ಗೆಲುವು ಸಾಧಿಸಿ ಮುಖ್ಯ ಸುತ್ತಿಗೆ ತೇರ್ಗಡೆಯಾಗಿದ್ದಾರೆ.
ಮಂಗಳವಾರ ಇಲ್ಲಿನ ಒಳಾಂಗಣ ಸ್ಟೇಡಿಯಂನಲ್ಲಿ ನಡೆದ ಎರಡು ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಕಶ್ಯಪ್ ಸುಲಭ ಜಯ ಸಾಧಿಸಿದರು. ಬುಧವಾರ ನಡೆಯಲಿರುವ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಚೀನಾದ ನಾಲ್ಕನೆ ಶ್ರೇಯಾಂಕದ ಟಿಯಾನ್ ಹೌವಿ ಅವರನ್ನು ಎದುರಿಸಲಿದ್ದಾರೆ.
ದಿನದ ಮೊದಲ ಪಂದ್ಯದಲ್ಲಿ ಕಶ್ಯಪ್ ಕೊರಿಯಾದ ಕೊ ಜಿಯಂಗ್ ಬೊರನ್ನು 15-21, 23-21, 21-19 ಗೇಮ್‌ಗಳ ಅಂತರದಿಂದ ಮಣಿಸಿದರು. 55 ನಿಮಿಷಗಳ ಕಾಲ ನಡೆದ ಎರಡನೆ ಪಂದ್ಯದಲ್ಲಿ ಥಾಯ್ಲೆಂಡ್‌ನ ಪನ್ನಾವಿಟ್ ಘಾಂಗನುಯಮ್‌ರನ್ನು 15-21, 21-16, 21-15 ಗೇಮ್‌ಗಳ ಅಂತರದಿಂದ ಸೋಲಿಸಿದ್ದಾರೆ.
ದೀರ್ಘಕಾಲದ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ಗೆ ವಾಪಸಾಗಿರುವ 30ರ ಪ್ರಾಯದ ಹೈದರಾಬಾದ್‌ನ ಶಟ್ಲರ್ ಕಶ್ಯಪ್ ಈತನಕ ಚೀನಾದ ಟಿಯಾನ್ ವಿರುದ್ಧ ಎರಡು ಬಾರಿ ಆಡಿದ್ದಾರೆ. 2014ರ ಫ್ರೆಂಚ್ ಓಪನ್‌ನಲ್ಲಿ ಟಿಯಾನ್‌ರನ್ನು ಸೋಲಿಸಿದ್ದಾರೆ.
ಕೆ.ಶ್ರೀಕಾಂತ್, ಅಜಯ್ ಜಯರಾಮ್, ಎಚ್.ಎಸ್. ಪ್ರಣಯ್ ಹಾಗೂ ಬಿ.ಸಾಯಿ ಪ್ರಣೀತ್ ಪುರುಷರ ಸಿಂಗಲ್ಸ್‌ನಲ್ಲಿ ತನ್ನ ಅಭಿಯಾನ ಆರಂಭಿಸಲಿದ್ದಾರೆ. ಮಹಿಳೆಯರ ಸಿಂಗಲ್ಸ್‌ನಲ್ಲಿ ತನ್ವಿ ಲಾಡ್ ಮಾತ್ರ ಸ್ಪರ್ಧಿಸುತ್ತಿದ್ದಾರೆ.