ಏಕದಿನ: ಬಾಂಗ್ಲಾಕ್ಕೆ ಅಫ್ಘಾನ್ ಆಘಾತ
ಮೀರ್ಪುರ, ಸೆ.28: ಮುಹಮ್ಮದ್ ನಬಿ ಆಲ್‌ರೌಂಡ್ ಆಟದ ಸಹಾಯದಿಂದ ಅಫ್ಘಾನಿಸ್ತಾನ ತಂಡ ಬಾಂಗ್ಲಾದೇಶ ವಿರುದ್ಧದ 2ನೆ ಏಕದಿನ ಪಂದ್ಯವನ್ನು 2 ವಿಕೆಟ್‌ಗಳ ಅಂತರದಿಂದ ರೋಚಕವಾಗಿ ಗೆದ್ದುಕೊಂಡಿದೆ. ಈ ಮೂಲಕ 3 ಪಂದ್ಯಗಳ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದೆ.
ಬುಧವಾರ ಇಲ್ಲಿ ಗೆಲ್ಲಲು 209 ರನ್ ಗುರಿ ಪಡೆದ ಅಫ್ಘಾನ್ ನಾಯಕ ಅಸ್ಘರ್ ಸ್ಟಾನಿಕ್‌ಝೈ(57), ನಬಿ(49) ಹಾಗೂ ಮುಹಮ್ಮದ್ ಶಹಝಾದ್(35) 49.4 ಓವರ್‌ಗಳಲ್ಲಿ 212 ರನ್ ಗಳಿಸಲು ಕಾರಣರಾದರು. ಶಾಕಿಬ್ ಅಲ್ ಹಸನ್(4-47) ಪ್ರಯತ್ನ ವ್ಯರ್ಥವಾಯಿತು.
ಬೌಲಿಂಗ್‌ನಲ್ಲಿ 16 ರನ್‌ಗೆ 2 ವಿಕೆಟ್ ಕಬಳಿಸಿದ್ದ ನಬಿ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು.
ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ್ದ ಬಾಂಗ್ಲಾ ತಂಡ ರಶೀದ್ ಖಾನ್(3-35), ನಬಿ(2-16) ಹಾಗೂ ಮಿರ್ವೈಸ್ ಅಶ್ರಫ್(2-23) ದಾಳಿಗೆ ತತ್ತರಿಸಿ 49.2 ಓವರ್‌ಗಳಲ್ಲಿ ಕೇವಲ 208 ರನ್‌ಗೆ ಆಲೌಟಾಯಿತು.
ಚೊಚ್ಚಲ ಪಂದ್ಯ ಆಡಿದ ಮೂಸಾಡೆಕ್ ಹುಸೈನ್(ಔಟಾಗದೆ 45)ಸರ್ವಾಧಿಕ ರನ್ ಬಾರಿಸಿದರು. ಬೌಲಿಂಗ್‌ನಲ್ಲಿ 2 ವಿಕೆಟ್ ಪಡೆದರು. ಮುಶ್ಫಿಕುರ್ರಹೀಂ(38) ಹಾಗೂ ಮಹ್ಮೂದುಲ್ಲಾ(25) ಬಾಂಗ್ಲಾದ ಪರ ಎರಡಂಕೆ ಸ್ಕೋರ್ ದಾಖಲಿಸಿದರು.