ಆಸ್ಟ್ರೇಲಿಯ ಮಾಜಿ ಟೆಸ್ಟ್ ಕ್ರಿಕೆಟಿಗ ಮ್ಯಾಕ್ಸ್ ವಾಕರ್ ನಿಧನ
ಮೆಲ್ಬೋರ್ನ್, ಸೆ.28: ಆಸ್ಟ್ರೇಲಿಯದ ಮಾಜಿ ಟೆಸ್ಟ್ ಕ್ರಿಕೆಟಿಗ ಹಾಗೂ ಖ್ಯಾತ ವೀಕ್ಷಕವಿವರಣೆಗಾರ ಮ್ಯಾಕ್ಸ್ ವಾಕರ್(68 ವರ್ಷ) ಬುಧವಾರ ನಿಧನರಾಗಿದ್ದಾರೆ. ಮೃತರು ಕಳೆದ ಎರಡು ವರ್ಷಗಳಿಂದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು.
‘‘ಮ್ಯಾಕ್ಸ್ ನಮ್ಮನ್ನು ಅಗಲಿರುವ ಸುದ್ದಿ ಕೇಳಿ ತುಂಬಾ ಬೇಸರವಾಯಿತು. ವಾಕರ್ ಕುಟುಂಬ ವರ್ಗ ಹಾಗೂ ಸ್ನೇಹಿತರಿಗೆ ನಾವು ಸಾಂತ್ವಾನ ಹೇಳುವೆವು. 70ರ ದಶಕದ ಜಂಟಲ್‌ಮ್ಯಾನ್ ಕ್ರಿಕೆಟಿಗನಾಗಿದ್ದ ಮ್ಯಾಕ್ಸ್ ಕ್ರಿಕೆಟ್ ಚರಿತ್ರೆಯ ಮರೆಯಲಾರದ ಕ್ಷಣಕ್ಕೂ ಸಾಕ್ಷಿಯಾಗಿದ್ದರು. ಅವರು ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ’’ ಎಂದು ಕ್ರಿಕೆಟ್ ವಿಕ್ಟೋರಿಯಾ ಮುಖ್ಯಸ್ಥ ಟೋನಿ ತಿಳಿಸಿದ್ದಾರೆ.
1973ರಲ್ಲಿ ಟೆಸ್ಟ್ ಕ್ರಿಕೆಟಿಗೆ ಕಾಲಿಟ್ಟಿದ್ದ ವಾಕರ್ ಮಧ್ಯಮ ವೇಗದ ಬೌಲಿಂಗ್‌ನ ಮೂಲಕ 34 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 138 ವಿಕೆಟ್‌ಗಳನ್ನು ಉರುಳಿಸಿದ್ದರು. 1970ರಲ್ಲಿ ಆಸ್ಟ್ರೇಲಿಯ ಯಶಸ್ವಿ ಕ್ರಿಕೆಟ್ ತಂಡವಾಗಿ ಹೊರಹೊಮ್ಮಲು ಪ್ರಮುಖ ಪಾತ್ರವಹಿಸಿದ್ದರು.
ಆಸ್ಟ್ರೇಲಿಯ ತಂಡ 1972-73ರಲ್ಲಿ ವೆಸ್ಟ್‌ಇಂಡೀಸ್ ಪ್ರವಾಸ ಕೈಗೊಂಡಿದ್ದಾಗ 26 ವಿಕೆಟ್‌ಗಳನ್ನು ಕಬಳಿಸಿದ್ದ ವಾಕರ್ ತಂಡ 2-0 ಅಂತರದಿಂದ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
1974-75ರಲ್ಲಿ ಮೆಲ್ಬೋರ್ನ್‌ನಲ್ಲಿ ನಡೆದ ಆ್ಯಶಸ್ ಟೆಸ್ಟ್ ಸರಣಿಯಲ್ಲಿ 143 ರನ್‌ಗೆ 8 ವಿಕೆಟ್ ಪಡೆದಿದ್ದರು. ಇದು ಅವರ ವೃತ್ತಿಜೀವನದ ಶ್ರೇಷ್ಠ ಪ್ರದರ್ಶನವಾಗಿತ್ತು.
ವಾಕರ್ ನಿವೃತ್ತಿಯ ಬಳಿಕ ಕ್ರಿಕೆಟ್ ವೀಕ್ಷಕವಿವರಣೆಗಾರರಾಗಿದ್ದರು. 1986 ಹಾಗೂ 1991ರ ನಡುವೆ ನೈನ್ ನೆಟ್‌ವರ್ಕ್ ವೀಕ್ಷಕವಿವರಣೆಗಾರರ ತಂಡದ ಸದಸ್ಯರಾಗಿದ್ದರು. 1999ರ ತನಕ ನೆಟ್‌ವರ್ಕ್‌ನಲ್ಲಿ ಕೆಲಸ ಮಾಡಿದ್ದರು.