ಕೆಪಿಎಲ್: ಮೈಸೂರಿನ ಅಜೇಯ ಓಟ ಅಬಾಧಿತ
ಹುಬ್ಬಳ್ಳಿ, ಸೆ.30: ಐದನೆ ಆವೃತ್ತಿಯ ಕೆಪಿಎಲ್ ಟೂರ್ನಿಯಲ್ಲಿ ಮಳೆ ಬಾಧಿತ 27ನೆ ಪಂದ್ಯದಲ್ಲಿ ನಮ್ಮ ಶಿವಮೊಗ್ಗ ತಂಡದ ವಿರುದ್ಧ ವಿಜೆಡಿ ನಿಯಮದ ಪ್ರಕಾರ 33 ರನ್‌ಗಳಿಂದ ಜಯ ಸಾಧಿಸಿದ ಮೈಸೂರು ವಾರಿಯರ್ಸ್ ಅಜೇಯ ಓಟವನ್ನು ಮುಂದುವರಿಸಿದೆ.
ಇಲ್ಲಿನ ಕೆಎಸ್‌ಸಿಎ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯಕ್ಕೂ ಮಳೆ ಅಡ್ಡಿಪಡಿಸಿತು. ಗೆಲ್ಲಲು 125 ರನ್ ಗುರಿ ಪಡೆದಿದ್ದ ಮೈಸೂರು ಭಾರೀ ಮಳೆಯಿಂದಾಗಿ ಪಂದ್ಯ ನಿಂತಾಗ 16.3 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿತ್ತು. ಗೆಲ್ಲಲು ಒಂದು ರನ್ ಅಗತ್ಯವಿದ್ದಾಗ ಭಾರೀ ಮಳೆ ಸುರಿಯಿತು. ಆಗ ವಿಜೆಡಿ ನಿಯಮದ ಪ್ರಕಾರ ಮೈಸೂರು 33 ರನ್ ಅಂತರದಿಂದ ಪಂದ್ಯ ಗೆದ್ದುಕೊಂಡಿತು.
ಆರಂಭಿಕ ಬ್ಯಾಟ್ಸ್‌ಮನ್ ರಾಜು ಭಟ್ಕಳ್(ಔಟಾಗದೆ 83 ರನ್, 68 ಎಸೆತ, 10 ಬೌಂಡರಿ, 2 ಸಿಕ್ಸರ್) ಹಾಗು ಜೋಶಿ(ಔಟಾಗದೆ 31) 3ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 68 ರನ್ ಸೇರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
ಟೂರ್ನಿಯಲ್ಲಿ ಆಡಿದ ಏಳನೆ ಪಂದ್ಯದಲ್ಲಿ ಏಳನೆ ಜಯ ಸಾಧಿಸಿದ ಮೈಸೂರು ಒಟ್ಟು 14 ಅಂಕ ಗಳಿಸಿ ಸೆಮಿ ಫೈನಲ್‌ಗೆ ತನ್ನ ಸ್ಥಾನ ಖಚಿತಪಡಿಸಿಕೊಂಡಿತು.
ಶಿವಮೊಗ್ಗ 125/7: ಇದಕ್ಕೆ ಮೊದಲು ನಡೆದ ಪಂದ್ಯದಲ್ಲಿ ನಮ್ಮ ಶಿವಮೊಗ್ಗ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 125 ರನ್ ಗಳಿಸಲಷ್ಟೇ ಶಕ್ತವಾಯಿತು.
ಶಿವಮೊಗ್ಗದ ಪರ ಆರಂಭಿಕ ಆಟಗಾರ ಗಂಗಾಧರ್(25),ಕೆಳ ಕ್ರಮಾಂಕದ ಮಥಾಯಿಸ್(ಔಟಾಗದೆ 26), ಕಾಝಿ(23) ಹಾಗೂ ನಿಕಿನ್ ಜೋಸ್(17) ಎರಡಂಕೆಯ ಸ್ಕೋರ್ ದಾಖಲಿಸಿದರು.
ಜಗದೀಶ್ ಸುಚಿತ್(2-15) ಹಾಗೂ ಕೆ. ಗೌತಮ್(2-12) ಶಿವಮೊಗ್ಗಕ್ಕೆ ಕಡಿವಾಣ ಹಾಕಿದರು.
ಸಂಕ್ಷಿಪ್ತ ಸ್ಕೋರ್
ನಮ್ಮ ಶಿವಮೊಗ್ಗ: 20 ಓವರ್‌ಗಳಲ್ಲಿ 125/7
(ಗಂಗಾಧರ 25, ಮಥಾಯಿಸ್ ಔಟಾಗದೆ 26, ಕಾಝಿ 23, ನಿಕಿನ್ ಜೋಸ್ 17, ಸುಚಿತ್ 2-15, ಗೌತಮ್ 2-12)
ಮೈಸೂರು ವಾರಿಯರ್ಸ್: 16.3 ಓವರ್‌ಗಳಲ್ಲಿ 125/2
(ರಾಜು ಭಟ್ಕಳ್ ಔಟಾಗದೆ 8, ಜೋಶಿ ಔಟಾಗದೆ 31)
ವಿಜೆಡಿ ನಿಯಮದ ಪ್ರಕಾರ ಮೈಸೂರಿಗೆ 33 ರನ್ ಜಯ