ಬಳ್ಳಾರಿ ಟಸ್ಕರ್ಸ್‌ ಕೆಪಿಎಲ್ ಚೊಚ್ಚಲ ಚಾಂಪಿಯನ್

Update: 2016-10-02 17:10 GMT

ಹುಬ್ಬಳ್ಳಿ, ಅ.2: ಬಳ್ಳಾರಿ ಟಸ್ಕರ್ಸ್‌ ತಂಡ ಇಲ್ಲಿ ನಡೆದ ಆರನೆ ಆವೃತ್ತಿಯ ಕೆಪಿಎಲ್ ಟ್ವೆಂಟಿ-20 ಟೂರ್ನಿಯ ಫೈನಲ್‌ನಲ್ಲಿ ಇಂದು ಹುಬ್ಬಳ್ಳಿ ಟೈಗರ್ಸ್‌ ವಿರುದ್ಧ 35 ರನ್‌ಗಳ ಜಯ ಗಳಿಸುವ ಮೂಲಕ ಮೊದಲ ಬಾರಿ ಕೆಪಿಎಲ್ ಕಿರೀಟ ಧರಿಸಿದೆ.

ಹುಬ್ಬಳ್ಳಿಯ ಕೆಎಸ್‌ಸಿಎ ರಾಜ್‌ನಗರ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 190 ರನ್‌ಗಳ ಕಠಿಣ ಸವಾಲನ್ನು ಪಡೆದಿದ್ದ ಹುಬ್ಬಳ್ಳಿ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 154 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ತವರಿನಲ್ಲಿ ಪ್ರಶಸ್ತಿ ಎತ್ತುವ ಅವಕಾಶವನ್ನು ಹುಬ್ಬಳ್ಳಿ ಕಳೆದುಕೊಂಡಿತು.

ಬಳ್ಳಾರಿ ತಂಡದ ಸಂಘಟಿತ ದಾಳಿಯ ಮುಂದೆ ಹುಬ್ಬಳ್ಳಿಯ ದಾಂಡಿಗರು ರನ್ ಗಳಿಸಲು ಪರದಾಡಿದರು. ಮುಹಮ್ಮದ್ ತಾಹ (36), ಡಿ. ನೇಗಿ (39), ನಯಕ ಕಪೂರ್(27), ಎಸ್. ಅರವಿಂದ್(ಔಟಾಗದೆ 11) ಎರಡಂಕೆಯ ಸ್ಕೋರ್ ದಾಖಲಿಸಿದರು.
ಬಳ್ಳಾರಿ ತಂಡದ ಲಾಝಾರುಸ್ 21ಕ್ಕೆ 3 ವಿಕೆಟ್, ಅಮಿತ್ ವರ್ಮ 38ಕ್ಕೆ 2, ಎಂಪಿ ಕೃಷ್ಣ, ಅಖಿಲ್, ಅನಿಲ್, ಎಸ್‌ಎನ್ ರಾಜು ತಲಾ 1 ವಿಕೆಟ್ ಹಂಚಿಕೊಂಡರು.

ಬಳ್ಳಾರಿ ಟಸ್ಕರ್ಸ್‌ 189/5ಬಳ್ಳಾರಿ ಟಸ್ಕರ್ಸ್‌ ತಂಡ ಕೆಪಿಎಲ್ ಟ್ವೆಂಟಿ-20 ಟೂರ್ನಿಯ ಫೈನಲ್ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್‌ ವಿರುದ್ಧ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 189 ರನ್ ಗಳಿಸಿತ್ತು. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಬಳ್ಳಾರಿ ತಂಡಕ್ಕೆ ಆರಂಭಿಕ ದಾಂಡಿಗ ಆರ್‌ಪಿ ಕದಮ್ ಮತ್ತು ಬಿ.ಅಖಿಲ್ ಅವರ ಅರ್ಧಶತಕಗಳ ಕೊಡುಗೆ ನೀಡಿದರು.

ತಂಡದ ಸ್ಕೋರ್ 1.2 ಓವರ್‌ಗಳಲ್ಲಿ 7 ಆಗಿದ್ದಾಗ ತಂಡದ ಮೊದಲ ವಿಕೆಟ್ ಉರುಳಿತು. ಆರಂಭಿಕ ದಾಂಡಿಗ ಕೆ.ಬಿ ಪವನ್ (1) ಅವರು ರನೌಟಾದರು.
 
ಎರಡನೆ ವಿಕೆಟ್‌ಗೆ ಕದಮ್ ಮತ್ತು ಎಸ್‌ಎನ್ ರಾಜು ಜೊತೆಯಾದರು. ಇವರು ಎರಡನೆ ವಿಕೆಟ್‌ಗೆ ಜೊತೆಯಾಟದಲ್ಲಿ 83 ರನ್ ಸೇರಿಸಿದರು. ರಾಜು 36 ರನ್ (27ಎ, 3ಬೌ, 2ಸಿ) ಗಳಿಸಿದರು. ಕದಮ್ ತಂಡದ ಸ್ಕೋರ್ 113 ತಲುಪುವ ತನಕ ಕ್ರೀಸ್‌ನಲ್ಲಿ ನಿಂತರು. 40 ಎಸೆತಗಳನ್ನು ಎದುರಿಸಿದ ಅವರು 8 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 61 ರನ್ ಜಮೆ ಮಾಡಿದರು. ನಾಯಕ ಅಮಿತ್ ವರ್ಮ 15 ರನ್ ಗಳಿಸಿ ನಿರ್ಗಮಿಸಿದರು.

ಬಿ. ಅಖಿಲ್ ಅವರು 24 ಎಸೆತಗಳನ್ನು ಎದುರಿಸಿ 5 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಮದ ವೇಗದ ಅರ್ಧಶತಕ ದಾಖಲಿಸಿ ಹೂವೆರ ಎಸೆತದಲ್ಲಿ ವಿಕೆಟ್ ಕೀಪರ್ ಭರತ್‌ಗೆ ಕ್ಯಾಚ್ ನೀಡಿದರು. ಆಗ ತಂಡದ ಸ್ಕೋರ್ 16.4 ಓವರ್‌ಗಳಲ್ಲಿ 160ಕ್ಕೆ ತಲುಪಿತ್ತು.

ಎಸ್‌ಪಿ ಮಂಜುನಾಥ್ ಔಟಾಗದೆ 12 ರನ್ ಮತ್ತು ಲಾಝಾರುಸ್ ಔಟಾಗದೆ 10 ರನ್ ಗಳಿಸಿದರು.

ಹುಬ್ಬಳ್ಳಿ ತಂಡದ ಕೌಶಿಕ್ 18ಕ್ಕೆ 2 ವಿಕೆಟ್, ಎಸ್.ಅರವಿಂದ್ ಮತ್ತು ಹೂವೆರ್ ತಲಾ 1 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್ ವಿವರ

ಬಳ್ಳಾರಿ ಟಸ್ಕರ್ಸ್‌ 20 ಓವರ್‌ಗಳಲ್ಲಿ 189/5(ಕದಮ್ 61, ಅಖಿಲ್ 50, ರಾಜು 36; ಕೌಶಿಕ್ 18ಕ್ಕೆ 2).

ಹುಬ್ಬಳ್ಳಿ ಟೈಗರ್ಸ್‌ 20 ಓವರ್‌ಗಳಲ್ಲಿ 154/9( ನೇಗಿ 39,ತಾಹ 36, ಕಪೂರ್ 27; ಲಾಝಾರುಸ್ 21ಕ್ಕೆ 3, ಅಮಿತ್ ಅರ್ಮ 38ಕ್ಕೆ 2).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News