ಶರಪೋವಾ ನಿಷೇಧ 9 ತಿಂಗಳಿಗೆ ಕಡಿತ
ಲಾಸನ್ನೆ, ಅ.4: ಡೋಪಿಂಗ್ ಆರೋಪದಲ್ಲಿ ಎರಡು ವರ್ಷಗಳ ನಿಷೇಧ ಎದುರಿಸುತ್ತಿದ್ದ ರಶ್ಯದ ಮಹಿಳಾ ಟೆನಿಸ್ ತಾರೆ ಶರಪೋವಾ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ(ಸಿಎಎಸ್) ಅವರಿಗೆ ನಿಷೇಧದಲ್ಲಿ 9 ತಿಂಗಳು ಕಡಿತಗೊಳಿಸಿದೆ.
ತನ್ನ ವಿರುದ್ಧದ ನಿಷೇಧವನ್ನು ಪ್ರಶ್ನಿಸಿ ಶರಪೋವಾ ಅವರು ಸಿಎಎಸ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಅವರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಅವರ ನಿಷೇಧವನ್ನು 24 ತಿಂಗಳಿನಿಂದ 15 ತಿಂಗಳಿಗೆ ತಿಂಗಳಷ್ಟು ಕಡಿಮೆ ಮಾಡಿದೆ. ಅವರು ಎಪ್ರಿಲ್ 2017ರ ವೇಳೆಗೆ ಮತ್ತೆ ಅಂತಾರಾಷ್ಟ್ರೀಯ ಟೆನಿಸ್ ರಂಗಕ್ಕೆ ವಾಪಸಾಗಬಹುದಾಗಿದೆ. ಮುಂದಿನ ವರ್ಷದ ಫ್ರೆಂಚ್ ಓಪನ್‌ನಲ್ಲಿ ಅವರಿಗೆ ಆಡಬಹುದಾಗಿದೆ.
29ರ ಹರೆಯದ ಶರಪೋವಾ ಅವರು ಕಳೆದ ಜನವರಿಯಲ್ಲಿ ಆಸ್ಟ್ರೇಲಿಯನ್ ಟೆನಿಸ್ ಟೂರ್ನಮೆಂಟ್ ವೇಳೆ ನಿಷೇಧಿತ ಮೆಲ್ಡೋನಿಯಂ ಪದಾರ್ಥ ಸೇವಿಸಿರುವುದು ಪತ್ತೆಯಾಗಿತ್ತು. ಸಾರ್ವಜನಿಕವಾಗಿ ಇದನ್ನು ಅವರು ಒಪ್ಪಿಕೊಂಡಿದ್ದರು. ಈ ಕಾರಣದಿಂದಾಗಿ ಅವರಿಗೆ ಎರಡು ವರ್ಷಗಳ ನಿಷೇಧ ವಿಧಿಸಲಾಗಿತ್ತು.
ಶರಪೋವಾ ತಾನು ಮೆಲ್ಡೋನಿಯಂನ್ನು ಹೃದಯ ಸಂಬಂಧಿ ಕಾಯಿಲೆ ಮತ್ತು ದೇಹದಲ್ಲಿರುವ ಮೆಗ್ನೀಸಿಯಂ ಕೊರತೆ ನೀಗಿಸಲು ಕಳೆದ ಹತ್ತು ವರ್ಷಗಳಿಂದ ಸೇವಿಸುತ್ತಿರುವುದಾಗಿ ತಿಳಿಸಿದ್ದರು.
ಕಳೆದ ಜನವರಿ1ರಿಂದ ವಿಶ್ವ ಉದ್ದೀಪನಾ ಮದ್ದು ನಿಗ್ರಹ ಘಟಕ(ವಾಡಾ) ಮೆಲ್ಡೋನಿಯಂ ಅಂಶವನ್ನು ನಿಷೇಧಿತ ಪಟ್ಟಿಗೆ ಸೇರಿಸಿ ಆದೇಶ ಹೊರಡಿಸಿತ್ತು.