×
Ad

ನ್ಯೂಝಿಲೆಂಡ್ ವಿರುದ್ಧ ಏಕದಿನ ಸರಣಿ: ಭಾರತ ತಂಡ ಪ್ರಕಟ

Update: 2016-10-06 18:53 IST

  ಹೊಸದಿಲ್ಲಿ, ಅ.6: ಮುಂಬರುವ ನ್ಯೂಝಿಲೆಂಡ್ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯ ಮೊದಲ ಮೂರು ಪಂದ್ಯಗಳಿಗೆ ಭಾರತೀಯ ಕ್ರಿಕೆಟ್ ತಂಡವನ್ನು ಗುರುವಾರ ಇಲ್ಲಿ ಪ್ರಕಟಿಸಲಾಗಿದ್ದು, ಎಡಗೈ ಬ್ಯಾಟ್ಸ್‌ಮನ್ ಸುರೇಶ್ ರೈನಾ ಹಾಗೂ ಸ್ಪಿನ್ನರ್ ಅಮಿತ್ ಮಿಶ್ರಾ ತಂಡಕ್ಕೆ ವಾಪಸಾಗಿದ್ದಾರೆ.

 ಈ ಇಬ್ಬರು ಕ್ರಿಕೆಟಿಗರು 2015ರ ಅಕ್ಟೋಬರ್‌ನಲ್ಲಿ ಸ್ವದೇಶದಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕ ವಿರುದ್ಧದ ಏಕದಿನ ಸರಣಿಯಲ್ಲಿ ಕೊನೆಯ ಬಾರಿ ಆಡಿದ್ದರು.

ಶಿಖರ್ ಧವನ್ ಹಾಗೂ ಕೆಎಲ್ ರಾಹುಲ್ ಗಾಯದ ಸಮಸ್ಯೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಎಂ.ಎಸ್.ಕೆ. ಪ್ರಸಾದ್ ಅಧ್ಯಕ್ಷತೆಯ ನೂತನ ಆಯ್ಕೆ ಸಮಿತಿ ರೋಹಿತ್ ಶರ್ಮರ ಆರಂಭಿಕ ಜೊತೆಗಾರನಾಗಿ ಮನ್‌ದೀಪ್ ಸಿಂಗ್‌ರನ್ನು ಆಯ್ಕೆ ಮಾಡಿದ್ದಾರೆ. ಬರೋಡಾದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಗೆ ಕರೆ ನೀಡಲಾಗಿದೆ.

 ಮುಂದಿನ 5 ತಿಂಗಳ ಕಾಲ ನಡೆಯಲಿರುವ ಇಂಗ್ಲೆಂಡ್, ಬಾಂಗ್ಲಾದೇಶ ಹಾಗೂ ಆಸ್ಟ್ರೇಲಿಯ ವಿರುದ್ಧದ ಸ್ವದೇಶಿ ಟೆಸ್ಟ್ ಸರಣಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಆರ್.ಅಶ್ವಿನ್, ರವೀಂದ್ರ ಜಡೇಜ ಹಾಗೂ ಮುಹಮ್ಮದ್ ಶಮಿ ಅವರಿಗೆ ವಿಶ್ರಾಂತಿ ನೀಡಲಾಗಿದೆ.

ಭುವನೇಶ್ವರ್ ಕುಮಾರ್ ಬೆನ್ನುನೋವಿನಿಂದಾಗಿ ಕಿವೀಸ್ ವಿರುದ್ಧದ 3ನೆ ಟೆಸ್ಟ್‌ನಿಂದ ಹೊರಗುಳಿದ ಕಾರಣ 15 ಸದಸ್ಯರುಗಳಿರುವ ತಂಡದಲ್ಲಿ ಮುಂಬೈ ವೇಗಿ ಧವಳ್ ಕುಲಕರ್ಣಿಗೆ ಅವಕಾಶ ನೀಡಲಾಗಿದೆ.

 ಜೂನ್‌ನಲ್ಲಿ ಝಿಂಬಾಬ್ವೆ ಪ್ರವಾಸ ಕೈಗೊಂಡಿದ್ದ ತಂಡದಲ್ಲಿದ್ದ ಅಂಬಟಿ ರಾಯುಡು, ಫೈಝ್ ಫಝಲ್, ರಿಶಿ ಧವನ್, ಬಿರೇಂದರ್ ಸ್ರಾನ್, ಜೈದೇವ್ ಉನದ್ಕಟ್, ಯುಝ್ವೇಂದ್ರ ಚಾಹಲ್ ಹಾಗೂ ಕರುಣ್ ನಾಯರ್‌ರನ್ನು ಕೈಬಿಡಲಾಗಿದ್ದು, ಕೇದಾರ್ ಜಾಧವ್, ಮನೀಶ್ ಪಾಂಡೆ, ಅಕ್ಷರ್ ಪಟೇಲ್, ಜಯಂತ್ ಯಾದವ್, ಧವಳ್ ಕುಲಕರ್ಣಿ ಹಾಗೂ ಜಸ್‌ಪ್ರಿತ್ ಬುಮ್ರಾರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ.

ಮನ್‌ದೀಪ್ 2ನೆ ಬಾರಿ ತಂಡಕ್ಕೆ ವಾಪಸಾಗಿದ್ದಾರೆ. ಈ ಹಿಂದೆ ಝಿಂಬಾಬ್ವೆ ವಿರುದ್ಧ 3 ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದ ಮನ್‌ದೀಪ್ ಗರಿಷ್ಠ 52 ರನ್ ಗಳಿಸಿದ್ದರು.

ಇತ್ತೀಚೆಗೆ ರಾಹುಲ್ ಬದಲಿಗೆ ಟೆಸ್ಟ್ ತಂಡವನ್ನು ಸೇರ್ಪಡೆಯಾಗಿದ್ದ ಗೌತಮ್ ಗಂಭೀರ್ ಹಾಗೂ ಫಿಟ್‌ನೆಸ್ ಟೆಸ್ಟ್ ಪಾಸಾಗಿದ್ದ ಯುವರಾಜ್ ಸಿಂಗ್ ಏಕದಿನ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ವಿಫಲರಾಗಿದ್ದಾರೆ.

 ಭಾರತ-ಕಿವೀಸ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಅ.16 ರಂದು ಧರ್ಮಶಾಲಾದಲ್ಲಿ ನಡೆಯಲಿದೆ. ಆ ಬಳಿಕ ದಿಲ್ಲಿ(ಅ.20), ಮೊಹಾಲಿ(ಅ.23), ರಾಂಚಿ(ಅ.26) ಹಾಗೂ ವಿಶಾಖಪಟ್ಟಣಂ(ಅ.29)ನಲ್ಲಿ ನಡೆಯಲಿದೆ.

ಬೌಲಿಂಗ್ ವಿಭಾಗದಲ್ಲಿ ಸಮ್ಮಿಶ್ರಣ:

ಬೌಲಿಂಗ್‌ನಲ್ಲಿ ಹಿರಿಯ-ಕಿರಿಯ ಆಟಗಾರರ ಸಮ್ಮಿಶ್ರಣವಿದೆ. ಸ್ಪಿನ್ ವಿಭಾಗದ ನೇತೃತ್ವವನ್ನು ಮಿಶ್ರಾ ಹಾಗೂ ಅಕ್ಷರ್ ಪಟೇಲ್ ವಹಿಸಿಕೊಂಡಿದ್ದಾರೆ. ಹರ್ಯಾಣದ ಆಲ್‌ರೌಂಡರ್ ಜಯಂತ್ ಯಾದವ್ ಹೊಸ ಮುಖ. ಭುವನೇಶ್ವರ್, ಇಶಾಂತ್ ಶರ್ಮ ಹಾಗೂ ಶಮಿಯ ಅನುಪಸ್ಥಿತಿಯಲ್ಲಿ ಉಮೇಶ್ ಯಾದವ್, ಬುಮ್ರಾ ಹಾಗೂ ಕುಲಕರ್ಣಿ ವೇಗದ ಬೌಲಿಂಗ್‌ನ್ನು ಮುನ್ನಡೆಸಲಿದ್ದಾರೆ.

ಭಾರತದ ಏಕದಿನ ತಂಡ: ಎಂ.ಎಸ್. ಧೋನಿ(ನಾಯಕ), ರೋಹಿತ್ ಶರ್ಮ, ಅಜಿಂಕ್ಯ ರಹಾನೆ, ವಿರಾಟ್ ಕೊಹ್ಲಿ, ಮನೀಷ್ ಪಾಂಡೆ, ಸುರೇಶ್ ರೈನಾ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಜಯಂತ್ ಯಾದವ್, ಅಮಿತ್ ಮಿಶ್ರಾ, ಜಸ್‌ಪ್ರಿತ್ ಬುಮ್ರಾ, ಧವಳ್ ಕುಲಕರ್ಣಿ, ಉಮೇಶ್ ಯಾದವ್, ಮನ್‌ದೀಪ್ ಸಿಂಗ್, ಕೇದಾರ್ ಜಾಧವ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News