ಕಬಡ್ಡಿ ವಿಶ್ವಕಪ್: ಭಾರತಕ್ಕೆ ಕೊರಿಯಾ ಆಘಾತ

Update: 2016-10-07 18:14 GMT

   ಅಹ್ಮದಾಬಾದ್, ಅ.7: ಕಬಡ್ಡಿ ವಿಶ್ವಕಪ್‌ನ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಭಾರತ ತಂಡ ದಕ್ಷಿಣ ಕೊರಿಯಾ ತಂಡದ ವಿರುದ್ಧ 32-34 ಅಂಕಗಳ ಅಂತರದಿಂದ ಸೋತು ನೀರಸ ಆರಂಭ ಪಡೆದಿದೆ.

ಇಲ್ಲಿ ಶುಕ್ರವಾರ ನಡೆದ ಕೂಟದ ಮೊದಲ ಪಂದ್ಯದಲ್ಲಿ ಕೊನೆಯ ಕ್ಷಣದ ತನಕ ಉಭಯ ತಂಡಗಳ ನಡುವೆ ತೀವ್ರ ಪೈಪೋಟಿ ಕಂಡು ಬಂದಿತ್ತು. ಕೊರಿಯಾ ತಂಡ ಒಂದು ಹಂತದಲ್ಲಿ ಏಳು ಅಂಕಗಳ ಹಿನ್ನಡೆಯಲ್ಲಿತ್ತು. ಅಂತಿಮ ಕ್ಷಣದಲ್ಲಿ ಭಾರತ ಮಾಡಿದ ಕೆಲವು ತಪ್ಪುಗಳ ಲಾಭ ಪಡೆದ ಕೊರಿಯಾ ಪಂದ್ಯದಲ್ಲಿ ತಿರುಗೇಟು ನೀಡಿತು.

ಕೊನೆಯ ಎರಡು ನಿಮಿಷಗಳ ಅವಧಿಯಲ್ಲಿ ಗೆಲುವಿನ ಅಂಕ ದಾಖಲಿಸಿತು. ರೈಡರ್‌ಗಳ ವೈಫಲ್ಯ ಭಾರತಕ್ಕೆ ದುಬಾರಿಯಾಗಿ ಪರಿಣಮಿಸಿತು.

 ಜಾನ ಕ್ಯೂನ್ ಲೀ ಕೊನೆಯ 2 ನಿಮಿಷಗಳ ಆಟದಲ್ಲಿ ಪಂದ್ಯವನ್ನು ತನ್ನ ತಂಡದತ್ತ ವಾಲುವಂತೆ ಮಾಡಿದರು. ಭಾರತ ಕೈಯಿಂದ ಗೆಲುವನ್ನು ಕಸಿದುಕೊಂಡರು. ದ್ವಿತೀಯಾರ್ಧದಲ್ಲಿ ಹಿನ್ನಡೆಯಲ್ಲಿದ್ದ ಕೊರಿಯಾ ಕೊನೆಯ ಕ್ಷಣದಲ್ಲಿ ಚೇತರಿಕೆಯ ಪ್ರದರ್ಶನ ನೀಡಿ ಭಾರತದ ವಿರುದ್ಧ ಮೊತ್ತ ಮೊದಲ ಬಾರಿ ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿತು.

ನಾಯಕ ಅನೂಪ್‌ಕುಮಾರ್ ಎಂಟು ಅಂಕವನ್ನು ಗಳಿಸಿದರು. ಆದರೆ, ಇದು ತಂಡದ ಗೆಲುವಿಗೆ ಸಾಕಾಗಲಿಲ್ಲ. ಮೊದಲ ಮೂರು ನಿಮಿಷಗಳಲ್ಲಿ ಉಭಯ ತಂಡಗಳಿಂದ ಅಂಕ ದಾಖಲಾಗಲಿಲ್ಲ. ಆ ನಂತರ ಉತ್ತಮ ಪ್ರದರ್ಶನ ನೀಡಿದ ಭಾರತ ಮೊದಲಾರ್ಧದಲ್ಲಿ 18-13 ಅಂಕದಿಂದ ಮುನ್ನಡೆ ಸಾಧಿಸಿತು.

ದಕ್ಷಿಣ ಕೊರಿಯಾ ದ್ವಿತೀಯಾರ್ಧದಲ್ಲಿ 3 ನಿಮಿಷಗಳ ಅಂತರದಲ್ಲಿ 2 ಅಂಕ ಗಳಿಸಿ ತಿರುಗೇಟು ನೀಡಿತು. 39ನೆ ನಿಮಿಷದಲ್ಲಿ ಸೂಪರ್ ರೈಡ್ ನಡೆಸಿದ ಜಾಂಗ್ ಕ್ಯೂನ್ ಲೀ ಪಂದ್ಯವನ್ನು 30-30 ರಿಂದ ಸಮಬಲಗೊಳಿಸಿದರು. ಅನೂಪ್ ಕುಮಾರ್ ಕೊನೆಯ ಕ್ಷಣದಲ್ಲಿ ದಾಳಿ ನಡೆಸಿ ಅಂಕ ಕಲೆಹಾಕಿದರು. ಆದರೆ, ಜಾಂಗ್ ಲೀ ಇನ್ನೆರಡು ಅಂಕ ಗಳಿಸಿ 32-31 ಮುನ್ನಡೆ ಒದಗಿಸಿಕೊಟ್ಟರು. ಕೊನೆಯ ನಿಮಿಷದಲ್ಲಿ ಮತ್ತೆರಡು ಅಂಕ ಗಳಿಸಿದ ಕೊರಿಯಾ 34-32 ಅಂತರದಿಂದ ಜಯ ಸಾಧಿಸಿತು.

 ಇದಕ್ಕೆ ಮೊದಲು ಕಬಡ್ಡಿ ವಿಶ್ವಕಪ್‌ಗೆ ಅದ್ದೂರಿ ಚಾಲನೆ ನೀಡಲಾಯಿತು. ಅ.22ರ ತನಕ ನಡೆಯಲಿರುವ ಟೂರ್ನಿಯಲ್ಲಿ ಆತಿಥೇಯ ಭಾರತ ಸೇರಿದಂತೆ ಒಟ್ಟು 12 ತಂಡಗಳು ಭಾಗವಹಿಸುತ್ತಿವೆ.

ಟೂರ್ನಿಯಲ್ಲಿ ಆತಿಥೇಯ ಭಾರತವಲ್ಲದೆ ಕೊರಿಯಾ, ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯ, ಇರಾನ್, ಪೊಲೆಂಡ್, ಬಾಂಗ್ಲಾ, ದ.ಕೊರಿಯಾ, ಜಪಾನ್, ಅರ್ಜೆಂಟೀನ ಹಾಗೂ ಕೆನಡಾ ತಂಡಗಳು ಭಾಗವಹಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News