ಛತ್ತೀಸ್‌ಗಡ ಐತಿಹಾಸಿಕ ಸಾಧನೆ, ಮುಂಬೈಗೆ ಪ್ರಯಾಸದ ಗೆಲುವು

Update: 2016-10-08 18:01 GMT

 ರಾಂಚಿ, ಅ.8: ಚೊಚ್ಚಲ ರಣಜಿ ಟ್ರೋಫಿ ಆಡುತ್ತಿರುವ ಛತ್ತೀಸ್‌ಗಡ ತಂಡ ತ್ರಿಪುರಾದ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಿದೆ.

  ಮೂರನೆ ದಿನದಾಟವಾದ ಶನಿವಾರ ಉತ್ತಮ ದಾಳಿ ಸಂಘಟಿಸಿದ ಎಡಗೈ ಸ್ಪಿನ್ನರ್ ಅಜಯ್ ಮಂಡಳ್(4-55) ತ್ರಿಪುರಾ ತಂಡವನ್ನು ಎರಡನೆ ಇನಿಂಗ್ಸ್‌ನಲ್ಲಿ ಕೇವಲ 149 ರನ್‌ಗೆ ಆಲೌಟ್ ಮಾಡಿದರು. ಗೆಲ್ಲಲು 13 ರನ್ ಗುರಿ ಪಡೆದ ಛತ್ತೀಸ್‌ಗಡ 9 ವಿಕೆಟ್‌ಗಳ ಜಯ ದಾಖಲಿಸಿತು.

  ಛತ್ತೀಸ್‌ಗಡ ತಂಡ ಅಶುತೋಷ್ ಸಿಂಗ್ ಬಾರಿಸಿದ ಆಕರ್ಷಕ ಶತಕದ(140)ನೆರವಿನಿಂದ ಮೊದಲ ಇನಿಂಗ್ಸ್‌ನಲ್ಲಿ 137 ರನ್ ಮುನ್ನಡೆ ಸಾಧಿಸಿತ್ತು. ಛತ್ತೀಸ್‌ಗಡ 2ನೆ ಇನಿಂಗ್ಸ್‌ನ 2ನೆ ಓವರ್‌ನಲ್ಲಿ ರಾಣಾ ದತ್ತ ವಿಕೆಟ್ ಕಳೆದುಕೊಂಡ ಕಾರಣ ಬೋನಸ್ ಅಂಕ ಪಡೆಯುವುದರಿಂದ ವಂಚಿತವಾಯಿತು.

   ಮೊದಲ ಇನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾಗಿದ್ದ ಸಾಹಿಲ್ ಗುಪ್ತಾ ಹಾಗೂ ಅಮನ್‌ದೀಪ್ ಖರೆ ನಾಲ್ಕನೆ ಓವರ್‌ನಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟರು. 2ನೆ ಇನಿಂಗ್ಸ್‌ನಲ್ಲಿ 4 ವಿಕೆಟ್ ಪಡೆದ ಛತ್ತೀಸ್‌ಗಡದ ಸ್ಪಿನ್ನರ್ ಮಂಡಳ್ ಒಟ್ಟು 96 ರನ್‌ಗೆ 7 ವಿಕೆಟ್ ಗಳನ್ನು ಪಡೆದರು.

ಈ ಹಿಂದೆ ಪಂಜಾಬ್ ತಂಡ 1968-69ರ ಋತುವಿನಲ್ಲಿ ಆಡಿದ ತನ್ನ ಚೊಚ್ಚಲ ರಣಜಿ ಪಂದ್ಯದಲ್ಲಿ ಜಯ ಸಾಧಿಸಿತ್ತು.

ಮುಂಬೈಗೆ ಕುಲಕರ್ಣಿ, ನಾಯರ್ ಆಸರೆ

ರೋಹ್ಟಕ್, ಅ.8: ವೇಗದ ಬೌಲರ್ ಧವಳ್ ಕುಲಕರ್ಣಿ ಅಮೋಘ ಬೌಲಿಂಗ್ (6-47)ಹಾಗೂ ಅಭಿಷೇಕ್ ನಾಯರ್(ಔಟಾಗದೆ 45) ಪ್ರಯತ್ನದ ನೆರವಿನಿಂದ ಹಾಲಿ ಚಾಂಪಿಯನ್ ಮುಂಬೈ ತಂಡ ತಮಿಳುನಾಡು ವಿರುದ್ಧ ರಣಜಿ ಟ್ರೋಫಿಯ ತನ್ನ ಮೊದಲ ಪಂದ್ಯದಲ್ಲಿ ಪ್ರಯಾಸದ ಗೆಲುವು ದಾಖಲಿಸಿದೆ.

3ನೆ ದಿನದಾಟವಾದ ಶನಿವಾರ ತಮಿಳುನಾಡು ತಂಡವನ್ನು 2ನೆ ಇನಿಂಗ್ಸ್‌ನಲ್ಲಿ 185 ರನ್‌ಗೆ ಆಲೌಟ್ ಮಾಡಿದ ಮುಂಬೈ ಗೆಲುವಿಗೆ 97 ರನ್ ಗುರಿ ಪಡೆದಿತ್ತು. ಆದರೆ, ಒಂದು ಹಂತದಲ್ಲಿ 35 ರನ್‌ಗೆ 5 ವಿಕೆಟ್ ಕಳೆದುಕೊಂಡು ಸೋಲಿನ ಭೀತಿಯಲ್ಲಿತ್ತು. ಆಗ 5ನೆ ಕ್ರಮಾಂಕದಲ್ಲಿ ಭಡ್ತಿ ಪಡೆದು ಬಂದಿದ್ದ ನಾಯರ್ ಬಲ್ವಿಂದರ್ ಸಿಂಗ್ ಸಂಧು ಅವರೊಂದಿಗೆ 8ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 30 ರನ್ ಸೇರಿಸಿ 2 ವಿಕೆಟ್ ಅಂತರದ ಗೆಲುವು ತಂದುಕೊಟ್ಟರು.

6ಕ್ಕೆ 153 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ತಮಿಳುನಾಡು ನಿನ್ನೆಯ ಮೊತ್ತಕ್ಕೆ 32 ರನ್ ಸೇರಿಸಲಷ್ಟೇ ಶಕ್ತವಾಯಿತು. ಕುಲಕರ್ಣಿ ತಮಿಳುನಾಡಿನ ಬಾಲ ಕತ್ತರಿಸಿದರು. ಎರಡನೆ ಇನಿಂಗ್ಸ್‌ನಲ್ಲಿ 47 ರನ್‌ಗೆ 6 ವಿಕೆಟ್ ಕಬಳಿಸಿದ ಕುಲಕರ್ಣಿ ಮೊದಲ ಇನಿಂಗ್ಸ್‌ನಲ್ಲಿ 31 ರನ್‌ಗೆ 4 ವಿಕೆಟ್ ಪಡೆದಿದ್ದರು. ರಣಜಿ ಪಂದ್ಯದಲ್ಲಿ ಮೊದಲ ಬಾರಿ 10 ವಿಕೆಟ್‌ಗಳ ಗೊಂಚಲು ಪಡೆದರು.

ಗೆಲುವಿನ ಹಾದಿಯಲ್ಲಿ ಜಾರ್ಖಂಡ್: ರಣಜಿ ಟ್ರೋಫಿಯ ಬಿ ಗುಂಪಿನ ಪಂದ್ಯದಲ್ಲಿ ಜಾರ್ಖಂಡ್ ತಂಡ ಮಹಾರಾಷ್ಟ್ರದ ವಿರುದ್ಧ ಗೆಲುವಿನ ಹಾದಿಯಲ್ಲಿದೆ. ಗೆಲ್ಲಲು 93 ರನ್ ಸವಾಲು ಪಡೆದಿದ್ದ ಜಾರ್ಖಂಡ್ ರವಿವಾರ 6 ವಿಕೆಟ್‌ಗಳ ನೆರವಿನಿಂದ ಇನ್ನು 37 ರನ್ ಗಳಿಸಬೇಕಾಗಿದೆ.

ದಿಲ್ಲಿಯ ಮೂವರು ಆಟಗಾರರಿಂದ ಶತಕ

ವಡೋದರ, ಅ.8: ದಿಲ್ಲಿ ತಂಡದ ಮೂವರು ದಾಂಡಿಗರು ಅಸ್ಸಾಂನ ವಿರುದ್ಧ ಶತಕ ಬಾರಿಸಿದ್ದಾರೆ. ಈ ಮೂಲಕ ದಿಲಿ 396 ರನ್ ಮುನ್ನಡೆ ಸಾಧಿಸಿದೆ.

3ಕ್ಕೆ 241 ರನ್‌ನಿಂದ ಆಟ ಮುಂದುವರಿಸಿದ ದಿಲ್ಲಿ ತಂಡದ ಪರ ರಿಷಭ್ ಪಂತ್ ಹಾಗೂ ನಿತಿಶ್ ರಾಣಾ 220 ರನ್ ಜೊತೆಯಾಟ ನಡೆಸಿದರು. ಪಂತ್ ಚೊಚ್ಚಲ ಶತಕ ಸಿಡಿಸಿದರೆ, ರಾಣಾ 2ನೆ ಶತಕ ಬಾರಿಸಿದರು. ಇಬ್ಬರು ಆಟಗಾರರು ತಲಾ 146 ರನ್ ಗಳಿಸಿದರು.

ರಣಜಿ ಟ್ರೋಫಿ 3ನೆ ದಿನದ ಫಲಿತಾಂಶ

 ಭುವನೇಶ್ವರ: ಹಿಮಾಚಲ ಪ್ರದೇಶ 357, ಆಂಧ್ರ 47/1

ವಡೋದರ: ದಿಲ್ಲಿ 589/8 ಡಿಕ್ಲೇರ್ , ಅಸ್ಸಾಂ 193, 100/3

ಜೈಪುರ: ಬರೋಡ 544/8 ಡಿಕ್ಲೇರ್, ಗುಜರಾತ್ 277/4

ರಾಂಚಿ: ತ್ರಿಪುರಾ ವಿರುದ್ಧ ಛತ್ತೀಸ್‌ಗಡಕ್ಕೆ 9ವಿಕೆಟ್ ಜಯ

ನಾಗ್ಪುರ: ಗೋವಾ 164, 5/0, ಹೈದರಾಬಾದ್ 388

  ಮುಂಬೈ: ಹರ್ಯಾಣ 248, ಸರ್ವಿಸಸ್ 197, 148/2

ದಿಲ್ಲಿ: ಮಹಾರಾಷ್ಟ್ರ 210, 188/9, ಜಾರ್ಖಂಡ್ 306, 56/4

ಕಲ್ಯಾಣಿ: ಕೇರಳ 306, ಜಮ್ಮು-ಕಾಶ್ಮೀರ 106/5

  ಹೈದರಾಬಾದ್: ಮಧ್ಯ ಪ್ರದೇಶ 465, ಉತ್ತರಪ್ರದೇಶ 176, 118/2

  ರೋಹ್ಟಕ್: ತಮಿಳುನಾಡು ವಿರುದ್ಧ ಮುಂಬೈಗೆ 2 ವಿಕೆಟ್ ಜಯ

ವಿಶಾಖಪಟ್ಟಣ: ವಿದರ್ಭ 272/6 ಡಿಕ್ಲೇರ್, ಒಡಿಶಾ 150, 74/0.

 ದಿಲ್ಲಿ: ಪಂಜಾಬ್ 215, ರೈಲ್ವೇಸ್ 331, 180/2

ವಿಝಿಯನಗರಂ: ರಾಜಸ್ಥಾನ 62/1, ಸೌರಾಷ್ಟ್ರ 430

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News