×
Ad

ವಿರಾಟ ವಿಜಯ ದಶಮಿ

Update: 2016-10-11 16:55 IST

 ಇಂದೋರ್, ಅ.11: ನ್ಯೂಝಿಲೆಂಡ್ ವಿರುದ್ಧದ ಮೂರನೆ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಭಾರತ ಇಂದು 321 ರನ್‌ಗಳ ಭರ್ಜರಿ ಜಯ ಗಳಿಸಿದ್ದು, ಮೂರು ಟೆಸ್ಟ್‌ಗಳ ಪಂದ್ಯವನ್ನು 3-0 ಅಂತರದಲ್ಲಿ ವಶಪಡಿಸಿಕೊಂಡಿದೆ.

 ಇಂದೋರ್‌ನ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಟೆಸ್ಟ್‌ನ ನಾಲ್ಕನೆ ದಿನವಾಗಿದ್ದ ಇಂದು ಎರಡನೆ ಇನಿಂಗ್ಸ್‌ನಲ್ಲಿ ಗೆಲುವಿಗೆ 475 ರನ್‌ಗಳ ಸವಾಲನ್ನು ಪಡೆದಿದ್ದ ನ್ಯೂಝಿಲೆಂಡ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ದಾಳಿಗೆ ಸಿಲುಕಿ 44.5 ಓವರ್‌ಗಳಲ್ಲಿ 153 ರನ್‌ಗಳಿಗೆ ಆಲೌಟಾಗಿದೆ.
ಭಾರತಕ್ಕೆ ಇದು ದೊಡ್ಡ ಗೆಲುವು. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ತವರಿನಲ್ಲಿ ಭಾರತ ಮೊದಲ ಬಾರಿ ಕ್ಲೀನ್ ಸ್ವೀಪ್ ಸಾಧಿಸಿದ್ದು, ಪಾಕಿಸ್ತಾನ ಕೈಯಲ್ಲಿ ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ನಂ.1 ಪಟ್ಟವನ್ನು ಮರಳಿ ಕಿತ್ತುಕೊಂಡಿದೆ.
ರವಿಚಂದ್ರನ್ ಅಶ್ವಿನ್ ಈ ಟೆಸ್ಟ್‌ನಲ್ಲಿ ಒಟ್ಟು 13 ವಿಕೆಟ್ ಉಡಾಯಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಚಿಕೊಂಡಿದ್ದಾರೆ. ಜೊತೆಗೆ ಸರಣಿಯಲ್ಲಿ 27 ವಿಕೆಟ್‌ಗಳನ್ನು ಉಡಾಯಿಸಿರುವ ಅವರು ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
ಭಾರತ 216 /3 ಡಿಕ್ಲೇರ್: ಮೂರನೆ ದಿನದಾಟದಂತ್ಯಕ್ಕೆ ಎರಡನೆ ಇನಿಂಗ್ಸ್‌ನಲ್ಲಿ ವಿಕೆಟ್ ನಷ್ಟವಿಲ್ಲದೆ 18 ರನ್ ಗಳಿಸಿದ್ದ ಭಾರತ ಇಂದು ಆಟ ಮುಂದುವರಿಸಿ 49 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 216 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು.
ತಂಡಕ್ಕೆ ಬಹಳ ಸಮಯಗಳ ಬಳಿಕ ವಾಪಸಾಗಿರುವ ದಿಲ್ಲಿಯ ಆರಂಭಿಕ ದಾಂಡಿಗ ಗೌತಮ್ ಗಂಭೀರ್ 57ನೆ ಟೆಸ್ಟ್‌ನಲ್ಲಿ 22ನೆ ಅರ್ಧಶತಕ ದಾಖಲಿಸಿದರು. ಇದೇ ವೇಳೆ ಚೇತೇಶ್ವರ ಪೂಜಾರ 8ನೆ ಟೆಸ್ಟ್ ಶತಕ ದಾಖಲಿಸಿದರು.
ನಿನ್ನೆ ಮುರಳಿ ವಿಜಯ್ ಜೊತೆ ಇನಿಂಗ್ಸ್ ಆರಂಭಿಸಿದ್ದ ಗೌತಮ್ ಗಂಭೀರ್ 6 ರನ್ ಗಳಿಸಿದ್ದಾಗ ಭುಜನೋವು ಕಾಣಿಸಿಕೊಂಡು ಕ್ರೀಸ್‌ನಿಂದ ಹೊರ ನಡೆದಿದ್ದರು. ಬಳಿಕ ಆರಂಭಿಕ ದಾಂಡಿಗ ಮುರಳಿ ವಿಜಯ್ (ಔಟಾಗದೆ 11) ಮತ್ತು ಚೇತೇಶ್ವರ ಪೂಜಾರ (ಔಟಾಗದೆ 1) ಆಟ ಮುಂದುವರಿಸಿದ್ದರು.
    ಇಂದು ಪೂಜಾರ ಮತ್ತು ವಿಜಯ್ ನಾಲ್ಕನೆ ದಿನದ ಆಟ ಆರಂಭಿಸಿ ಮೊದಲ ವಿಕೆಟ್‌ಗೆ 34 ರನ್‌ಗಳನ್ನು ಸೇರಿಸಿದರು. 13.4ನೆ ಓವರ್‌ನಲ್ಲಿ ಮುರಳಿ ವಿಜಯ್ ರನೌಟಾದರು. ವಿಜಯ್ 19 ರನ್ ಗಳಿಸಿ ಪೆವಿಲಿಯನ್ ಸೇರಿದಾಗ ಗೌತಮ್ ಗಂಭೀರ್ ಕ್ರೀಸ್‌ಗೆ ಆಗಮಿಸಿದರು.
 ಗಂಭೀರ್ ಮತ್ತು ಪೂಜಾರ ಎರಡನೆ ವಿಕೆಟ್‌ಗೆ 76 ರನ್ ಸೇರಿಸಿದರು. ಗಂಭೀರ್ 56 ಎಸೆತಗಳನ್ನು ಎದುರಿಸಿ 6 ಬೌಂಡರಿ ಇರುವ 50 ರನ್ ಗಳಿಸಿದ ಬೆನ್ನಲ್ಲೇ ಪಟೇಲ್ ಎಸೆತದಲ್ಲಿ ಗಪ್ಟಿಲ್‌ಗೆ ಕ್ಯಾಚ್ ನೀಡಿ ಹೊರ ನಡೆದರು.
ಪೂಜಾರ 8ನೆ ಶತಕ: ಅಗ್ರ ಸರದಿಯ ದಾಂಡಿಗ ಚೇತೇಶ್ವರ ಪೂಜಾರ ಅವರಿಗೆ ಎರಡನೆ ವಿಕೆಟ್‌ಗೆ ನಾಯಕ ಕೊಹ್ಲಿ ಜೊತೆಯಾದರು. ಆದರೆ ಕೊಹ್ಲಿ 17 ರನ್ ಗಳಿಸಿದ್ದಾಗ ಅವರನ್ನು ಪಟೇಲ್ ಅವರು ಅಂತಿಮ ಟೆಸ್ಟ್‌ನಲ್ಲಿ ಎರಡನೆ ಬಾರಿ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. ಮೊದಲ ಇನಿಂಗ್ಸ್‌ನಲ್ಲಿ ಕೊಹ್ಲಿ ಅವರು ದ್ವಿಶತಕ(211)ದಾಖಲಿಸಿ ಪಟೇಲ್ ಎಲ್‌ಬಿಡಬ್ಲು ಬಲೆಗೆ ಬಿದ್ದು ಪೆವಿಲಿಯನ್ ಸೇರಿದ್ದರು.
 ಮೂರನೆ ವಿಕೆಟ್‌ಗೆ ಅಜಿಂಕ್ಯ ರಹಾನೆ ಮತ್ತು ಪೂಜಾರ ಜೊತೆಯಾಟದಲ್ಲಿ 58 ರನ್ ತಂಡದ ಖಾತೆಗೆ ಸೇರ್ಪಡೆಗೊಂಡಿತು.
ನಿಶಮ್ ಎಸೆತದಲ್ಲಿ ಚೆಂಡನ್ನು ಬೌಂಡರಿ ಗೆರೆ ದಾಟಿಸಿದ ಪೂಜಾರ 8ನೆ ಶತಕ ದಾಖಲಿಸಿದರು. ಅವರು ಶತಕ ದಾಖಲಿಸಿದ ಬೆನ್ನಲ್ಲೆ ನಾಯಕ ವಿರಾಟ್ ಕೊಹ್ಲಿ ಇನಿಂಗ್ಸ್ ಡಿಕ್ಲೇರ್ ಮಾಡಿದರು.
ರಹಾನೆ ಔಟಾಗದೆ 23 ರನ್ ಗಳಿಸಿದರು. ನ್ಯೂಝಿಲೆಂಡ್‌ನ ಪಟೇಲ್ 56ಕ್ಕೆ 2 ವಿಕೆಟ್ ಪಡೆದರು.
ಅಶ್ವಿನ್ 59ಕ್ಕೆ 7: ಎರಡನೆ ಇನಿಂಗ್ಸ್ ಆರಂಭಿಸಿದ ನ್ಯೂಝಿಲೆಂಡ್ ದಾಂಡಿಗರು ಕೆಟ್ಟ ಹೊಡೆತಗಳಿಗೆ ಯತ್ನಿಸಿ ವಿಕೆಟ್ ಕೈ ಚೆಲ್ಲಿದರು. 1.4ನೆ ಓವರ್‌ನಲ್ಲಿ ಆರಂಭಿಕ ದಾಂಡಿಗ ಲಥಾಮ್ ಅವರನ್ನು ಎಲ್‌ಬಿಡಬ್ಲು ಬಲೆಗೆ ಬೀಳಿಸಿದ ವೇಗಿ ಉಮೇಶ್ ಯಾದವ್ ಅವರು ಭಾರತಕ್ಕೆ ಮೊದಲ ಯಶಸ್ಸು ತಂದು ಕೊಟ್ಟರು.
ತಂಡದ ಸ್ಕೋರ್ 42ಕ್ಕೆ ತಲುಪುವಾಗ ನಾಯಕ ವಿಲಿಯಮ್ಸನ್ (29) ಅವರು ಜಡೇಜ ಎಸೆತದಲ್ಲಿ ಎಲ್‌ಬಿಡಬ್ಲು ಬಲೆಗೆ ಬಿದ್ದರು. ಬಳಿಕ ಅಶ್ವಿನ್ ಅವರು ನ್ಯೂಝಿಲೆಂಡ್ ದಾಂಡಿಗರನ್ನು ಕಾಡಿದರು. ಟೇಲರ್ 32 ರನ್ ಗಳಿಸಿರುವುದು ತಂಡದ ಪರ ದಾಖಲಾದ ಗರಿಷ್ಠ ಸ್ಕೋರ್. ಇವರನ್ನು ಹೊರತುಪಡಿಸಿದರೆ ರೊಂಚಿ(15), ವಾಟ್ಲಿಂಗ್ (ಔಟಾಗದೆ 23) ಮತ್ತು ಜೀತನ್ ಪಟೇಲ್(14) ಎರಡಂಕೆಯ ಸ್ಕೋರ್ ದಾಖಲಿಸಿದರು.

ಸ್ಕೋರ್ ವಿವರ

ಭಾರತ ಪ್ರಥಮ ಇನಿಂಗ್ಸ್: 557/5 ಡಿಕ್ಲೇರ್

ನ್ಯೂಝಿಲೆಂಡ್: ಪ್ರಥಮ ಇನಿಂಗ್ಸ್: 299 ರನ್‌ಗೆ ಆಲೌಟ್

ಭಾರತ ದ್ವಿತೀಯ ಇನಿಂಗ್ಸ್: 49 ಓವರ್‌ಗಳಲ್ಲಿ 216/3 ಡಿಕ್ಲೇರ್

ಮುರಳಿ ವಿಜಯ್ ರನೌಟ್ 19

ಗೌತಮ್ ಗಂಭೀರ್ ಸಿ ಗಪ್ಟಿಲ್ ಬಿ ಪಟೇಲ್ 50

ಚೇತೇಶ್ವರ ಪೂಜಾರ ಔಟಾಗದೆ 101

ವಿರಾಟ್ ಕೊಹ್ಲಿ ಎಲ್‌ಬಿಡಬ್ಲು ಪಟೇಲ್ 17

ಅಜಿಂಕ್ಯ ರಹಾನೆ ಔಟಾಗದೆ 23

ಇತರ 06

ವಿಕೆಟ್ ಪತನ: 0-11, 1-34, 2-110, 3-158.

ಬೌಲಿಂಗ್ ವಿವರ:

ಟಿಮ್ ಬೌಲ್ಟ್ 7-0-35-0

ಜೀತನ್ ಪಟೇಲ್ 14-0-56-2

ಸ್ಯಾಂಟ್ನರ್ 17-1-71-0

ಹೆನ್ರಿ 7-1-22-0

ನೀಶಾಮ್ 4-0-27-0

ನ್ಯೂಝಿಲೆಂಡ್ ದ್ವಿತೀಯ ಇನಿಂಗ್ಸ್: 44.5 ಓವರ್‌ಗಳಲ್ಲಿ 153 ರನ್‌ಗೆ ಆಲೌಟ್

ಗಪ್ಟಿಲ್ ಎಲ್‌ಬಿಡಬ್ಲು ಜಡೇಜ 29

ಲಥಾಮ್ ಎಲ್‌ಬಿಡಬ್ಲು ಯಾದವ್ 06

ವಿಲಿಯಮ್ಸನ್ ಎಲ್‌ಬಿಡಬ್ಲು ಅಶ್ವಿನ್ 27

ರಾಸ್ ಟೇಲರ್ ಬಿ ಅಶ್ವಿನ್ 32

ರೊಂಚಿ ಬಿ ಅಶ್ವಿನ್ 15

ನಿಶಾಮ್ ಸಿ ಕೊಹ್ಲಿ ಬಿ ಜಡೇಜ 00

ವಾಟ್ಲಿಂಗ್ ಔಟಾಗದೆ 23

ಸ್ಯಾಂಟ್ನರ್ ಬಿ ಅಶ್ವಿನ್ 14

ಜೀತನ್ ಪಟೇಲ್ ಬಿ ಅಶ್ವಿನ್ 00

ಹೆನ್ರಿ ಸಿ ಶಮಿ ಬಿ ಅಶ್ವಿನ್ 00

ಟಿಮ್ ಬೌಲ್ಟ್ ಸಿ ಮತ್ತು ಬಿ ಅಶ್ವಿನ್ 04

ಇತರ 03

ವಿಕೆಟ್ ಪತನ: 1-7, 2-42, 3-80, 4-102, 5-103, 6-112, 7-136, 8-138, 9-138, 10-153.

ಬೌಲಿಂಗ್ ವಿವರ

ಮುಹಮ್ಮದ್ ಶಮಿ 7-0-34-0

ಉಮೇಶ್ ಯಾದವ್ 8-4-13-1

ಆರ್.ಅಶ್ವಿನ್ 13.5-2-59-7

ರವೀಂದ್ರ ಜಡೇಜ 16-3-45-2

ಪಂದ್ಯಶ್ರೇಷ್ಠ: ಆರ್.ಅಶ್ವಿನ್

ಸರಣಿಶ್ರೇಷ್ಠ: ಆರ್.ಅಶ್ವಿನ್.

ಅಂಕಿ-ಅಂಶ

 321: ಭಾರತ ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡನೆ ಅತ್ಯಂತ ದೊಡ್ಡ ಅಂತರದ ರನ್‌ಗಳಿಂದ(321) ಜಯ ಸಾಧಿಸಿದೆ. ಕಳೆದ ವರ್ಷ ದಿಲ್ಲಿಯಲ್ಲಿ ದಕ್ಷಿಣ ಆಫ್ರಿಕದ ವಿರುದ್ಧ 339ರನ್‌ಗಳ ಅಂತರದ ಜಯ ಸಾಧಿಸಿತ್ತು. ನ್ಯೂಝಿಲೆಂಡ್ 2ನೆ ಬಾರಿ ಭಾರೀ ರನ್‌ಗಳ ಅಂತರದಿಂದ ಸೋತಿದೆ.

4: ಭಾರತ ನಾಲ್ಕನೆ ಬಾರಿ ಮೂರು ಹಾಗೂ ಅದಕ್ಕಿಂತ ಹೆಚ್ಚು ಪಂದ್ಯಗಳ ಅಂತರದಿಂದ ಕ್ಲೀನ್‌ಸ್ವೀಪ್ ಸಾಧಿಸಿದೆ. 2012-13ರಲ್ಲಿ ಆಸ್ಟ್ರೇಲಿಯದ ವಿರುದ್ಧ 4-0, 1993-94ರಲ್ಲಿ ಇಂಗ್ಲೆಂಡ್ ಹಾಗು ಶ್ರೀಲಂಕಾದ ವಿರುದ್ಧ ಕ್ರಮವಾಗಿ 3-0 ಅಂತರದಿಂದ ಸರಣಿ ಜಯಿಸಿತ್ತು.

2004: ಕಿವೀಸ್ ತಂಡ ಇಂಗ್ಲೆಂಡ್‌ನಲ್ಲಿ 2004ರಲ್ಲಿ ಕೊನೆಯ ಬಾರಿ ಸರಣಿಯಲ್ಲಿ 3 ಹಾಗೂ ಅದಕ್ಕಿಂತ ಹೆಚ್ಚು ಪಂದ್ಯಗಳನ್ನು ಸೋತಿತ್ತು. ಇದೀಗ ಏಳನೆ ಬಾರಿ ಭಾರತ ವಿರುದ್ಧ ಕ್ಲೀನ್‌ಸ್ವೀಪ್‌ಗೆ ಒಳಗಾಗಿದೆ.

3: ಸತತ ನಾಲ್ಕು ಟೆಸ್ಟ್ ಸರಣಿಗಳಲ್ಲಿ ಮೂವರು ಆಟಗಾರರು ಸರಣಿಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ್ದಾರೆ. ಅಶ್ವಿನ್ ಈ ಸಾಧನೆ ಮಾಡಿದ ವಿಶ್ವದ 3ನೆ ಆಟಗಾರ. ಅಶ್ವಿನ್‌ಗೆ ಮೊದಲು ಇಮ್ರಾನ್ ಖಾನ್ ಹಾಗೂ ಮಾಲ್ಕಂ ಮಾರ್ಷಲ್ ಈ ಸಾಧನೆ ಮಾಡಿದ್ದರು.

13/140: ಅಶ್ವಿನ್ ಪ್ರಸ್ತುತ ಕಿವೀಸ್ ವಿರುದ್ಧದ 3ನೆ ಟೆಸ್ಟ್‌ನಲ್ಲಿ 141 ರನ್‌ಗೆ 13 ವಿಕೆಟ್ ಉರುಳಿಸಿದರು. ಇದು ಅವರ ಜೀವನಶ್ರೇಷ್ಠ ಸಾಧನೆ. 2012ರಲ್ಲಿ ಕಿವೀಸ್ ವಿರುದ್ಧವೇ 85 ರನ್‌ಗೆ 12 ವಿಕೆಟ್‌ಗಳನ್ನು ಪಡೆದಿದ್ದರು. ಅಶ್ವಿನ್ ಕಿವೀಸ್ ವಿರುದ್ಧ 3ನೆ ಬಾರಿ 10 ವಿಕೆಟ್‌ಗಳ ಗೊಂಚಲು ಪಡೆದಿದ್ದಾರೆ.

4: ಅಶ್ವಿನ್ 4ನೆ ಬಾರಿ 12 ವಿಕೆಟ್‌ಗಳ ಗೊಂಚಲು ಪಡೆದಿದ್ದಾರೆ. ಮುತ್ತಯ್ಯ ಮುರಳಿಧರನ್ ಅತ್ಯಂತ ಹೆಚ್ಚು ಬಾರಿ(6) 12 ವಿಕೆಟ್ ಗೊಂಚಲು ಪಡೆದಿದ್ದಾರೆ.

27: ಕಿವೀಸ್ ವಿರುದ್ಧದ ಸರಣಿಯಲ್ಲಿ ಅಶ್ವಿನ್ ಒಟ್ಟು 27 ವಿಕೆಟ್‌ಗಳನ್ನು ಉರುಳಿಸಿದರು. 3 ಪಂದ್ಯಗಳ ಸರಣಿಯಲ್ಲಿ ಶ್ರೇಷ್ಠ ಬೌಲಿಂಗ್ ಮಾಡಿದ ಭಾರತದ 2ನೆ ಬೌಲರ್ ಅಶ್ವಿನ್. ಹರ್ಭಜನ್ ಸಿಂಗ್ 2000-01ರಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಒಟ್ಟು 32 ವಿಕೆಟ್‌ಗಳನ್ನು ಕಬಳಿಸಿದ್ದರು.

05: ಕಳೆದ 7 ಪ್ರಥಮ ದರ್ಜೆ ಇನಿಂಗ್ಸ್‌ಗಳಲ್ಲಿ ಗೌತಮ್ ಗಂಭೀರ್ 5ನೆ ಬಾರಿ ಅರ್ಧಶತಕ ಬಾರಿಸಿದರು. 3ನೆ ಟೆಸ್ಟ್‌ನ 2ನೆ ಇನಿಂಗ್ಸ್‌ನಲ್ಲಿ 50 ರನ್ ಗಳಿಸುವ ಮೊದಲು ಗಂಭೀರ್ ದುಲೀಪ್ ಟ್ರೋಫಿಯಲ್ಲಿ 77, 90, 59, 94 ರನ್ ಗಳಿಸಿದ್ದರು.


    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News