ಐಸಿಸಿ ನಂ.1 ಟೆಸ್ಟ್ ಗದೆ ಸ್ವೀಕರಿಸಿದ ಕೊಹ್ಲಿ ಪಡೆ
ಇಂದೋರ್, ಅ.11: ನ್ಯೂಝಿಲೆಂಡ್ ವಿರುದ್ಧ ಮೂರನೆ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನು ಇನ್ನೂ ಒಂದು ಬಾಕಿ ಇರುವಾಗ ಗೆದ್ದುಕೊಂಡಿರುವ ಭಾರತ ಅಧಿಕೃತವಾಗಿ ಐಸಿಸಿ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರಿದ್ದು, ತಂಡದ ನಾಯಕ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಗದೆಯನ್ನು ಸ್ವೀಕರಿಸಿದರು.
ಟೆಸ್ಟ್ ಸರಣಿಯ ಪ್ರಶಸ್ತಿ ಪ್ರದಾನ ಸಮಾರಂಭ ಮುಗಿದ ತಕ್ಷಣವೇ ಭಾರತದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಕೊಹ್ಲಿಗೆ ಟೆಸ್ಟ್ ಗದೆಯನ್ನು ಹಸ್ತಾತರಿಸಿದರು.
ಕಳೆದ ವಾರ ನ್ಯೂಝಿಲೆಂಡ್ ವಿರುದ್ಧ ಕೋಲ್ಕತಾದಲ್ಲಿ ಎರಡನೆ ಟೆಸ್ಟ್ ಪಂದ್ಯವನ್ನು ಜಯಿಸಿದ್ಧ ಭಾರತ ತಂಡ ವಿಶ್ವದ ನಂ.1 ಸ್ಥಾನವನ್ನು ದೃಢಪಡಿಸಿತ್ತು.
ಭಾರತ ಒಂದು ತಿಂಗಳೊಳಗೆ ಎರಡನೆ ಬಾರಿ ಟೆಸ್ಟ್ ಕ್ರಿಕೆಟ್‌ನಲ್ಲಿ ನಂ.1 ಸ್ಥಾನಕ್ಕೇರಿದೆ. ಕೊಹ್ಲಿ ನಾಯಕತ್ವದಲ್ಲಿ ಮೂರನೆ ಬಾರಿ ಈ ಸಾಧನೆ ಮಾಡಿದೆ. ಭಾರತ ತಂಡ ಜನವರಿಯಲ್ಲಿ ಬಿಡುಗಡೆಯಾಗಿದ್ದ ಐಸಿಸಿ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರಿತ್ತು. 2015ರ ಡಿಸೆಂಬರ್‌ನಲ್ಲಿ ಸ್ವದೇಶದಲ್ಲಿ ನಡೆದ ದಕ್ಷಿಣ ಆಫ್ರಿಕ ವಿರುದ್ಧ ಟೆಸ್ಟ್ ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡ ಹಿನ್ನೆಲೆಯಲ್ಲಿ ಭಾರತ ತಂಡ ಆಸ್ಟ್ರೇಲಿಯವನ್ನು ಹಿಂದಿಕ್ಕಿ ನಂ.1 ಸ್ಥಾನ ತಲುಪಿತ್ತು.
ಆಗಸ್ಟ್‌ನಲ್ಲಿ ವೆಸ್ಟ್‌ಇಂಡೀಸ್ ತಂಡವನ್ನು ಮಣಿಸಿದ ಬಳಿಕ ಮತ್ತೊಮ್ಮೆ ಐಸಿಸಿ ರ್ಯಾಂಕಿಂಗ್ ಪಟ್ಟಿಯಲ್ಲಿ ನಂ.1 ಸ್ಥಾನ ತಲುಪಿತ್ತು. ಆದರೆ, ಭಾರತ ಹೆಚ್ಚು ಸಮಯ ನಂ.1 ಸ್ಥಾನ ಉಳಿಸಿಕೊಳ್ಳಲಿಲ್ಲ. ಆಗ ಇಂಗ್ಲೆಂಡ್ ವಿರುದ್ಧ 2-2 ರಿಂದ ಡ್ರಾ ಸಾಧಿಸಿದ್ದ ಪಾಕ್ ತಂಡ ನಂ.1 ಸ್ಥಾನಕ್ಕೇರಿತ್ತು.
ಕೊಹ್ಲಿ ಪಡೆ ಪಾಕಿಸ್ತಾನದ ಕೈಯಿಂದ ನಂ.1 ಸ್ಥಾನ ಕಸಿದುಕೊಳ್ಳಲು ನ್ಯೂಝಿಲೆಂಡ್ ವಿರುದ್ಧದ 3ನೆ ಟೆಸ್ಟ್ ಪಂದ್ಯವನ್ನು ಕನಿಷ್ಠ ಡ್ರಾಗೊಳಿಸಬೇಕಾಗಿತ್ತು. ಕೊಹ್ಲಿ ಪಡೆ ಭಾರೀ ರನ್ ಅಂತರದಿಂದ ಜಯ ಸಾಧಿಸಿ ಕ್ಲೀನ್‌ಸ್ವೀಪ್ ಸಾಧಿಸಿದೆ.
ಕಿವೀಸ್ ವಿರುದ್ಧ ಜಯ ಸಾಧಿಸಿರುವ ಕೊಹ್ಲಿ ಪಡೆ ಸತತ ನಾಲ್ಕನೆ ಸರಣಿಯನ್ನು ಜಯಿಸಿದೆ. ಶ್ರೀಲಂಕಾ, ದಕ್ಷಿಣ ಆಫ್ರಿಕ ಹಾಗೂ ವೆಸ್ಟ್‌ಇಂಡೀಸ್ ವಿರುದ್ಧ ಈಗಾಗಲೇ ಸರಣಿಯನ್ನು ಜಯಿಸಿದೆ.
2014ರ ಡಿಸೆಂಬರ್‌ನಲ್ಲಿ ಎಂಎಸ್ ಧೋನಿ ನಿವೃತ್ತಿಯಾದ ಬಳಿಕ ಭಾರತದ ಟೆಸ್ಟ್ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದ ಕೊಹ್ಲಿ 10 ಪಂದ್ಯಗಳಲ್ಲಿ ಜಯ, 5ರಲ್ಲಿ ಡ್ರಾ ಹಾಗೂ ಕೇವಲ ಒಂದರಲ್ಲಿ ಸೋತಿದೆ. ಡ್ರಾಗೊಂಡ ಹೆಚ್ಚಿನ ಪಂದ್ಯಗಳಲ್ಲಿ ಮಳೆರಾಯ ಅಡ್ಡಿಯಾಗಿತ್ತು.
ಕಿವೀಸ್ ವಿರುದ್ಧ ಸರಣಿ ಕ್ಲೀನ್‌ಸ್ವೀಪ್ ಸಾಧಿಸಿರುವ ಭಾರತ ನ.9 ರಿಂದ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ.2017ರಲ್ಲಿ ಬಾಂಗ್ಲಾದೇಶ ಭಾರತದಲ್ಲಿ ಮೊದಲ ಬಾರಿ ಟೆಸ್ಟ್ ಪಂದ್ಯ ಆಡಲಿದೆ. ಆ ಬಳಿಕ ಆಸ್ಟ್ರೇಲಿಯ ತಂಡ 4 ಪಂದ್ಯಗಳ ಟೆಸ್ಟ್ ಸರಣಿ ಆಡಲು ಭಾರತಕ್ಕೆ ಬರಲಿದೆ.
"ಗರಿಷ್ಠ ಸಂಖ್ಯೆಯಲ್ಲಿ ಪಂದ್ಯ ವೀಕ್ಷಿಸಲು ಆಗಮಿಸಿರುವ ಇಂದೋರ್‌ನ ಜನತೆಗೆ ಮೊದಲಿಗೆ ಕೃತಜ್ಞತೆ ಸಲ್ಲಿಸುವೆ. ನನಗಂತೂ 90ರ ದಶಕದ ಟೆಸ್ಟ್ ಪಂದ್ಯ ನೆನಪಿಗೆ ಬಂತು. ಹೋಳ್ಕರ್ ಸ್ಟೇಡಿಯಂನ ಪಿಚ್‌ನಲ್ಲಿ ವಿಕೆಟ್ ಪಡೆಯಬೇಕಾದರೆ ಕಠಿಣ ಪರಿಶ್ರಮ ಹಾಗೂ ತಾಳ್ಮೆಯ ಅಗತ್ಯವಿದೆ. ಶಮಿ, ಭುವಿ ಹಾಗೂ ಉಮೇಶ್ ರಿವರ್ಸ್ ಸ್ವಿಂಗ್ ಮೂಲಕ ವಿಕೆಟ್ ಪಡೆದಿದ್ದಾರೆ. ಜಡ್ಡು(ಜಡೇಜ) ಅವರ ಪ್ರದರ್ಶನ ಕೂಡ ಗಮನಾರ್ಹವಾಗಿತ್ತು. ಇದೀಗ ನನ್ನ ಆತ್ಮವಿಶ್ವಾಸ ಆಕಾಶದೆತ್ತರಕ್ಕೆ ಏರಿದೆ"
ಆರ್.ಅಶ್ವಿನ್, 14 ಟೆಸ್ಟ್ ಸರಣಿಯಲ್ಲಿ ಏಳನೆ ಬಾರಿ ಸರಣಿಶ್ರೇಷ್ಠ ಪ್ರಶಸ್ತಿ ವಿಜೇತ ಭಾರತದ ಸ್ಪಿನ್ನರ್.
‘‘ಇದು ತಂಡದ ಸಾಂಘಿಕ ಸರಣಿ ಜಯ. ಈ ಗೆಲುವಿನಲ್ಲಿ ಎಲ್ಲರ ಕೊಡುಗೆಯಿದೆ. ಅಶ್ವಿನ್ ದೊಡ್ಡ ಕೊಡುಗೆ ನೀಡಿದರೆ, ಜಡೇಜ ಮೊದಲ ಪಂದ್ಯದಲ್ಲಿ ಹಾಗೂ ಸಹಾ 2ನೆ ಟೆಸ್ಟ್‌ನಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚಿದ್ದರು. ರೋಹಿತ್ ಕೂಡ ನಿರ್ಣಾಯಕ ರನ್ ದಾಖಲಿಸಿದ್ದರು. ನಾವು ಪ್ರತಿ ಟೆಸ್ಟ್ ಸರಣಿಯ ಬಳಿಕ ಅಶ್ವಿನ್ ಪಡೆದ ಸರಣಿಶ್ರೇಷ್ಠ ಪ್ರಶಸ್ತಿಯ ಬಗ್ಗೆ ಚರ್ಚಿಸುತ್ತೇವೆ. ಏಳನೆ ಬಾರಿ ಈ ಪ್ರಶಸ್ತಿ ಪಡೆದಿರುವ ಅವರಿಗೆ ಅಭಿನಂದನೆ’’
ವಿರಾಟ್ ಕೊಹ್ಲಿ, ಭಾರತದ ಟೆಸ್ಟ್ ನಾಯಕ.