×
Ad

ಪಾಕಿಸ್ತಾನದ ಮಹಿಳಾ ಫುಟ್ಬಾಲ್ ತಂಡದ ಸ್ಟ್ರೈಕರ್ ಶಹ್ಲೀಲಾ ಅಹ್ಮದ್‌ಝಾಯಿ ರಸ್ತೆ ಅಪಘಾತದಲ್ಲಿ ನಿಧನ

Update: 2016-10-13 20:16 IST

ಕರಾಚಿ, ಅ.13: ಪಾಕಿಸ್ತಾನದ ಮಹಿಳಾ ಫುಟ್ಬಾಲ್ ತಂಡದ ಉದಯೋನ್ಮುಖ ಸ್ಟ್ರೈಕರ್ ಶಹ್ಲೀಲಾ ಅಹ್ಮದ್‌ಝಾಯಿ ಬಲೂಚ್ ಗುರುವಾರ ಇಲ್ಲಿ ನಡೆದ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

 ಶಹ್ಲೀಲಾ ತನ್ನ ಅಣ್ಣನೊಂದಿಗೆ ಟೊಯೊಟಾ ವಾಹನದಲ್ಲಿ ಮನೆಗೆ ವಾಪಸಾಗುತ್ತಿದ್ದ ವೇಳೆ ಅವರು ಪ್ರಯಾಣಿಸುತ್ತಿದ್ದ ವಾಹನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಅಪಘಾತದ ವೇಳೆ ಶಹ್ಲೀಲಾ ಪ್ರಯಾಣಿಕರ ಸೀಟಿನಲ್ಲಿ ಕುಳಿತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

21ರ ಹರೆಯದ ಶಹ್ಲೀಲಾ ಪಾಕ್ ಮಹಿಳಾ ಫುಟ್ಬಾಲ್ ತಂಡದ ಅತ್ಯುತ್ತಮ ಸ್ಟ್ರೈಕರ್ ಆಗಿದ್ದು, ಇಸ್ಲಾಮಾಬಾದ್‌ನಲ್ಲಿ 2014ರಲ್ಲಿ ನಡೆದಿದ್ದ ದಕ್ಷಿಣ ಏಷ್ಯಾ ಫುಟ್ಬಾಲ್ ಫೆಡರೇಶನ್ ಮಹಿಳಾ ಪುಟ್ಬಾಲ್ ಟೂರ್ನಿಯಲ್ಲಿ ತನ್ನ ದೇಶವನ್ನು ಕೊನೆಯ ಬಾರಿ ಪ್ರತಿನಿಧಿಸಿದ್ದರು.

ಶಹ್ಲೀಲಾ ವಿದೇಶದಲ್ಲಿ ಮೂರು ಬಾರಿ ಫುಟ್ಬಾಲ್ ಕ್ಲಬ್‌ನಲ್ಲಿ ಆಡಿದ ಪಾಕ್‌ನ ಮೊದಲ ಆಟಗಾರ್ತಿಯಾಗಿದ್ದರು. ಕಳೆದ ವರ್ಷ ಅವರು ಮಾಲ್ಡೀವ್ಸ್ ಕ್ಲಬ್‌ನಲ್ಲಿ ಆಡಿದ್ದರು. 2014ರ ಸ್ಯಾಫ್ ಮಹಿಳಾ ಚಾಂಪಿಯನ್‌ಶಿಪ್‌ನಲ್ಲಿ ಗೋಲು ಬಾರಿಸಿದ್ದ ಶಹ್ಲೀಲಾ ಪಾಕ್‌ಗೆ ಭೂತಾನ್ ವಿರುದ್ಧ 4-1 ಅಂತರದ ಗೆಲುವು ತಂದುಕೊಟ್ಟಿದ್ದರು.

ಶಹ್ಲೀಲಾರ ಸಹೋದರಿ ರಹೀಲಾ ಝಮಾನ್ ಪಾಕಿಸ್ತಾನ ತಂಡದ ಮ್ಯಾನೇಜರ್ ಆಗಿದ್ದು, ತಾಯಿ ರುಬಿನಾ ಇರ್ಫಾನ್ ಪಾಕಿಸ್ತಾನ ಫುಟ್ಬಾಲ್ ಫೆಡರೇಶನ್‌ನ ಮಹಿಳಾ ತಂಡದ ಅಧ್ಯಕ್ಷೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News