ಎರಡನೆ ಟೆಸ್ಟ್: ಪಾಕಿಸ್ತಾನಕ್ಕೆ ಬೃಹತ್ ಮುನ್ನಡೆ

Update: 2016-10-23 18:21 GMT

ಅಬುಧಾಬಿ, ಅ.24: ವೆಸ್ಟ್‌ಇಂಡೀಸ್ ವಿರುದ್ಧ ಇಲ್ಲಿ ನಡೆಯುತ್ತಿರುವ ಎರಡನೆ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ಬೃಹತ್ ಮುನ್ನಡೆ ಸಾಧಿಸಿದೆ.

ಮೊದಲ ಇನಿಂಗ್ಸ್‌ನಲ್ಲಿ 228 ರನ್ ಮುನ್ನಡೆ ಸಂಪಾದಿಸಿದ್ದ ಪಾಕಿಸ್ತಾನ ತಂಡ ಎರಡನೆ ಇನಿಂಗ್ಸ್‌ನಲ್ಲಿ 1 ವಿಕೆಟ್‌ಗಳ ನಷ್ಟಕ್ಕೆ 114 ರನ್ ಗಳಿಸಿದೆ. ಒಟ್ಟು 342 ರನ್ ಮುನ್ನಡೆಯಲ್ಲಿದೆ.

ಮೂರನೆ ದಿನವಾದ ರವಿವಾರ ಆರಂಭಿಕ ಬ್ಯಾಟ್ಸ್‌ಮನ್ ಅಝರ್ ಅಲಿ(ಅಜೇಯ 52) ಹಾಗೂ ಸಮಿ ಅಸ್ಲಾಮ್(50) ಮೊದಲ ವಿಕೆಟ್‌ಗೆ 93 ರನ್ ಸೇರಿಸಿ ಉತ್ತಮ ಆರಂಭ ನೀಡಿದ್ದರು. ಅಸ್ಲಾಮ್ 50 ರನ್ ಗಳಿಸಿದ ಬೆನ್ನಿಗೇ ವೇಗದ ಬೌಲರ್ ಗ್ಯಾಬ್ರಿಯೆಲ್‌ಗೆ ವಿಕೆಟ್ ಒಪ್ಪಿಸಿದರು.

ಇದಕ್ಕೆ ಮೊದಲು 4 ವಿಕೆಟ್‌ಗಳ ನಷ್ಟಕ್ಕೆ 106 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ವೆಸ್ಟ್‌ಇಂಡೀಸ್ 94.4 ಓವರ್‌ಗಳಲ್ಲಿ ಕೇವಲ 224 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು.

ಸ್ಪಿನ್ನರ್ ಯಾಸಿರ್ ಷಾ(4-86), ವೇಗಿಗಳಾದ ರಾಹತ್ ಅಲಿ(3-45) ಹಾಗೂ ಸೊಹೈಲ್ ಖಾನ್(2-35) 9 ವಿಕೆಟ್‌ಗಳನ್ನು ಹಂಚಿಕೊಂಡರು. ವಿಂಡೀಸ್ ಪರ ಆರಂಭಿಕ ಬ್ಯಾಟ್ಸ್‌ಮನ್ ಡರೆನ್ ಬ್ರಾವೊ(43), ನಾಯಕ ಹೋಲ್ಡರ್(ಅಜೇಯ 31)ಹಾಗೂ ಸ್ಯಾಮುಯೆಲ್ಸ್(30) ಒಂದಷ್ಟು ಪ್ರತಿರೋಧ ತೋರಿದರು.

ಸಂಕ್ಷಿಪ್ತ ಸ್ಕೋರ್

ಪಾಕಿಸ್ತಾನ ಪ್ರಥಮ ಇನಿಂಗ್ಸ್: 452 ರನ್‌ಗೆ ಆಲೌಟ್

ವೆಸ್ಟ್‌ಇಂಡೀಸ್ ಪ್ರಥಮ ಇನಿಂಗ್ಸ್: 224 ರನ್‌ಗೆ ಆಲೌಟ್

ಪಾಕಿಸ್ತಾನ ದ್ವಿತೀಯ ಇನಿಂಗ್ಸ್: 39 ಓವರ್‌ಗಳಲ್ಲಿ 114/1

(ಅಸ್ಲಾಮ್ 50, ಅಝರ್ ಅಲಿ ಔಟಾಗದೆ 52, ಗ್ಯಾಬ್ರಿಯೆಲ್ 1-21)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News