ಒಂದೇ ಬಾಲಿಗೆ ಎರಡು ಕಿವೀಸ್ ವಿಕೆಟ್ ಪಡೆದ ಕೇದಾರ್ ಜಾಧವ್ !

Update: 2016-10-24 14:12 GMT

ಹೊಸದಿಲ್ಲಿ, ಅ.24: ಮೊಹಾಲಿಯಲ್ಲಿ ರವಿವಾರ ರಾತ್ರಿ ನಡೆದ ಮೂರನೆ ಏಕದಿನ ಪಂದ್ಯದಲ್ಲಿ ಭಾರತ ಏಳು ವಿಕೆಟ್‌ಗಳಿಂದ ಗೆದ್ದ ಬಳಿಕ ವಿರಾಟ್ ಕೊಹ್ಲಿ ಹಾಗೂ ಎಂಎಸ್ ಧೋನಿ ಹೆಚ್ಚು ಸುದ್ದಿ ಮಾಡಿದ್ದರು. ಆದರೆ, ಪಾರ್ಟ್‌ಟೈಮ್ ಬೌಲರ್ ಕೇದಾರ್ ಜಾಧವ್ ಒಂದೇ ಎಸೆತದಲ್ಲಿ ಕಿವೀಸ್‌ನ ಇಬ್ಬರನ್ನು ಔಟ್ ಮಾಡಿ ಗಮನ ಸೆಳೆದಿದ್ದಾರೆ.

ಜಾಧವ್ ಕಿವೀಸ್‌ನ ನಾಯಕ ಕೇನ್ ವಿಲಿಯಮ್ಸನ್‌ರನ್ನು ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. ವಿಲಿಯಮ್ಸನ್ ಔಟಾದ ತಕ್ಷಣ ವೀಕ್ಷಕವಿವರಣೆಗಾರ ಕಿವೀಸ್‌ನ ಮಾಜಿ ಕ್ರಿಕೆಟಿಗ ಸ್ಕಾಟ್ ಸ್ಟೈರಿಸ್ ಕೂಡ ಕಾಮೆಂಟ್ರಿ ಬಾಕ್ಸ್‌ನಿಂದ ಎದ್ದು ಹೊರ ನಡೆದರು. ಹೀಗಾಗಿ ಜಾಧವ್ ಒಂದೇ ಕಲ್ಲಿಗೆ ಎರಡು ಹಣ್ಣು ಉದುರಿಸಿದ್ದರು.

 ಕಿವೀಸ್‌ನ ಮಾಜಿ ಆಲ್‌ರೌಂಡರ್ ಸ್ಟೈರಿಸ್ ಭಾರತದ ಇನ್ನಿಬ್ಬರು ವೀಕ್ಷಕ ವಿವರಣೆಗಾರರಾದ ರವಿ ಶಾಸ್ತ್ರಿ ಹಾಗೂ ಸುನೀಲ್ ಗವಾಸ್ಕರ್ ಬಳಿ ಹಾಕಿದ್ದ ಪಂಥಾಹ್ವಾನವೇ ಅವರು ಕಾಮೆಂಟರಿ ಬಾಕ್ಸ್‌ನಿಂದ ಹೊರ ನಡೆಯಲು ಕಾರಣವಾಯಿತು.

ಪ್ರಸ್ತುತ ಕಿವೀಸ್ ವಿರುದ್ಧದ ಸರಣಿಯಲ್ಲಿ ಮಹಾರಾಷ್ಟ್ರದ ಆಲ್‌ರೌಂಡರ್ ಜಾಧವ್ ಆಲ್‌ರೌಂಡ್ ಪ್ರದರ್ಶನದಿಂದ ನಾಯಕ ಧೋನಿಯ ಮನ ಗೆದ್ದಿದ್ದಾರೆ. ಮೊದಲ ಪಂದ್ಯದಲ್ಲಿ ತಾನೆಸೆದಿದ್ದ ಮೊದಲ ಓವರ್‌ನಲ್ಲಿಯೇ ಜಿಮ್ಮಿ ನೀಶಮ್ ಹಾಗೂ ಮಿಚೆಲ್ ಸ್ಯಾಂಟ್ನರ್ ವಿಕೆಟ್ ಕಬಳಿಸಿದ್ದ ಜಾಧವ್ ದಿಲ್ಲಿಯಲ್ಲಿ ನಡೆದಿದ್ದ ಎರಡನೆ ಏಕದಿನದಲ್ಲೂ ಈ ಪ್ರದರ್ಶನವನ್ನು ಪುನರಾವರ್ತಿಸಿದ್ದರು.

 ಮೂರನೆ ಏಕದಿನದಲ್ಲಿ ನಾಯಕ ಧೋನಿ ಅವರು ಜಾಧವ್‌ರನ್ನು ಇನಿಂಗ್ಸ್‌ನ 10ನೆ ಓವರ್‌ನಲ್ಲಿ ದಾಳಿಗಿಳಿಸಿದ್ದರು. 3ನೆ ಪಂದ್ಯದಲ್ಲೂ ಜಾಧವ್ ವಿಕೆಟ್ ಪಡೆದರೆ ನಾನು ಕಾಮೆಂಟರಿ ಬಾಕ್ಸ್‌ನಿಂದ ಹೊರ ನಡೆಯುವೆ. ಮಾತ್ರವಲ್ಲ ಮೊದಲ ವಿಮಾನದಲ್ಲಿ ನ್ಯೂಝಿಲೆಂಡ್‌ಗೆ ತೆರಳುವೆ ಎಂದು ವೀಕ್ಷಕವಿವರಣೆ ನಡೆಸುತ್ತಿದ್ದ ಸ್ಟೈರಿಸ್ ಭಾರತದ ರವಿ ಶಾಸ್ತ್ರಿ ಹಾಗೂ ಸುನೀಲ್ ಗವಾಸ್ಕರ್‌ರಲ್ಲಿ ಚಾಲೆಂಜ್ ಹಾಕಿದ್ದರು.

 ಜಾಧವ್ ಮೊದಲಿನ ಎರಡು ಪಂದ್ಯಗಳಂತೆ ತನ್ನ ಮೊದಲ ಓವರ್‌ನಲ್ಲಿ ವಿಕೆಟ್ ಪಡೆಯಲು ವಿಫಲರಾಗಿದ್ದರು. ಆದರೆ, ತನ್ನ 2ನೆ ಓವರ್‌ನಲ್ಲಿ ವಿಲಿಯಮ್ಸನ್‌ರನ್ನು ಎಲ್‌ಬಿಡಬ್ಲು ಬಲೆಗೆ ಬೀಳಿಸಲು ಯಶಸ್ವಿಯಾದರು. ಆಗ ಚಾಲೆಂಜ್‌ನಲ್ಲಿ ಸೋತ ಸ್ಟೈರಿಸ್ ತಾನು ನುಡಿದಂತೆ ನಡೆದುಕೊಳ್ಳಲು ಕಾಮೆಂಟರಿ ಬಾಕ್ಸ್‌ನಿಂದ ಹೊರ ನಡೆದರು.

ಸ್ಟೈರಿಸ್ ಆ ನಂತರ ಕಾಮೆಂಟರಿ ಬಾಕ್ಸ್‌ಗೆ ವಾಪಸಾಗಿ ಪಂದ್ಯ ಮುಗಿಯುವ ತನಕ ವೀಕ್ಷಕ ವಿವರಣೆ ನೀಡಿದರು. ಚಾನಲ್‌ಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ವೀಕ್ಷಕವಿವರಣೆಗಾರರು ತಮ್ಮ ಕರ್ತವ್ಯವನ್ನು ಅರ್ಧದಲ್ಲೆ ತ್ಯಜಿಸಿ ಹೋಗುವಂತಿಲ್ಲ. ಸ್ಟೈರಿಸ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ಘಟನೆಯನ್ನು ಕ್ರೀಡಾದೃಷ್ಟಿಯಿಂದಲೇ ಸ್ವೀಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News