ಮಹಿಳೆಯರ ಟೆನಿಸ್ ರ್ಯಾಂಕಿಂಗ್: ಶರಪೋವಾಗೆ ಕೊಕ್

Update: 2016-10-24 17:27 GMT

 ಮಾಸ್ಕೋ, ಅ.24: ರಶ್ಯದ ಅಮಾನತುಗೊಂಡಿರುವ ಟೆನಿಸ್ ಆಟಗಾರ್ತಿ ಮರಿಯಾ ಶರಪೋವಾರನ್ನು ಮಹಿಳೆಯರ ಟೆನಿಸ್ ಅಸೋಸಿಯೇಶನ್(ಡಬ್ಲುಟಿಎ) ಸಿಂಗಲ್ಸ್ ರ್ಯಾಂಕಿಂಗ್‌ನಿಂದ ಕೊಕ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ವಾರ ಬಿಡುಗಡೆಯಾಗಿದ್ದ ಡಬ್ಲುಟಿಎ ಸಿಂಗಲ್ಸ್ ರ್ಯಾಂಕಿಂಗ್‌ನಲ್ಲಿ 29ರ ಪ್ರಾಯದ ಶರಪೋವಾ 93ನೆ ಸ್ಥಾನದಲ್ಲಿದ್ದರು.

ಉದ್ದೀಪನಾ ದ್ರವ್ಯ ನಿಷೇಧ ನಿಯಮಾವಳಿ ಉಲ್ಲಂಘಿಸಿದ ಕಾರಣದಿಂದ ಜನವರಿ 26 ರಂದು ಶರಪೋವಾಗೆ 2 ವರ್ಷಗಳ ನಿಷೇಧ ಹೇರಲಾಗಿತ್ತು. ಸ್ವಿಸ್ ಮೂಲದ ಕ್ರೀಡಾ ಪಂಚಾಯತಿ ನ್ಯಾಯಾಲಯ(ಸಿಎಎಸ್) ಅಕ್ಟೋಬರ್ 4 ರಂದು ನೀಡಿದ್ದ ತೀರ್ಪಿನಲ್ಲಿ ಶರಪೋವಾರ ಅಮಾನತು ಶಿಕ್ಷೆಯ ಅವಧಿಯನ್ನು 24 ರಿಂದ 15 ತಿಂಗಳಿಗೆ ಕಡಿತಗೊಳಿಸಿತ್ತು.

ನಿಷೇಧದ ಅವಧಿ ಕಡಿತಗೊಂಡ ಹಿನ್ನೆಲೆಯಲ್ಲಿ ವಿಶ್ವದ ಮಾಜಿ ನಂ.1 ಆಟಗಾರ್ತಿ ಶರಪೋವಾಗೆ ಮುಂದಿನ ವರ್ಷ ಎಪ್ರಿಲ್ 26ಕ್ಕೆ ಆರಂಭವಾಗಲಿರುವ ಟೂರ್ನಿಯಲ್ಲಿ ಅಧಿಕೃತವಾಗಿ ಟೆನಿಸ್‌ಗೆ ವಾಪಸಾಗಬಹುದು.

ನಿಷೇಧದ ಕಾರಣದಿಂದ ಶರಪೊವಾ ಆಗಸ್ಟ್‌ನಲ್ಲಿ ನಡೆದಿದ್ದ ರಿಯೋ ಗೇಮ್ಸ್‌ನಿಂದ ಹೊರಗುಳಿದಿದ್ದರು.

ಶರಪೋವಾ ಡಿಸೆಂಬರ್‌ನಲ್ಲಿ ಮ್ಯಾಡ್ರಿಡ್‌ನಲ್ಲಿ ನಡೆಯಲಿರುವ ಸೌಹಾರ್ದ ಪಂದ್ಯದಲ್ಲಿ ಫ್ರೆಂಚ್ ಓಪನ್ ಚಾಂಪಿಯನ್ ಸ್ಪೇನ್‌ನ ಗಾರ್ಬೈನ್ ಮುಗುರುಝರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News