ಅಂಡರ್-17 ವಿಶ್ವಕಪ್ ಆತಿಥ್ಯದ ಐದನೆ ತಾಣ ಗುವಾಹಟಿ ಆಯ್ಕೆ
ಗುವಾಹಟಿ, ಅ.24: ಮುಂದಿನ ವರ್ಷ ನಡೆಯಲಿರುವ ಅಂಡರ್-17 ಫುಟ್ಬಾಲ್ ವಿಶ್ವಕಪ್ ಆತಿಥ್ಯಕ್ಕೆ ಗುವಾಹಟಿ ಆಯ್ಕೆಯಾಗಿದೆ. ಫಿಫಾ ತಪಾಸಣಾ ತಂಡದಿಂದ ವಿಶ್ವಕಪ್ ಆತಿಥ್ಯಕ್ಕೆ ಆಯ್ಕೆಯಾದ ಭಾರತದ ಐದನೆ ನಗರವಾಗಿದೆ.
ಸ್ಥಳೀಯ ಸಂಘಟನಾ ಸಮಿತಿ ಸದಸ್ಯರೊಂದಿಗೆ ಗುವಾಹಟಿಯ ಫುಟ್ಬಾಲ್ ಸ್ಟೇಡಿಯಂಗೆ ಭೇಟಿ ನೀಡಿರುವ ಫಿಫಾ ನಿಯೋಗ ಸ್ಟೇಡಿಯಂ ಹಾಗೂ ತರಬೇತಿಯ ವ್ಯವಸ್ಥೆಗಳ ಬಗ್ಗೆ ತೃಪ್ತಿವ್ಯಕ್ತಪಡಿಸಿತು.
2017ರಲ್ಲಿ ಭಾರತದಲ್ಲಿ ನಡೆಯಲಿರುವ ಫಿಫಾ ಅಂಡರ್-17 ವಿಶ್ವಕಪ್ ಆಯೋಜನೆಯ ಮಹತ್ವ ಅರಿತ ಬಳಿಕ ನಮಗೆ ಸಂಪೂರ್ಣ ಬೆಂಬಲ ವ್ಯಕ್ತವಾಗಿದ್ದು, ಕಳೆದ 45 ದಿನಗಳಲ್ಲಿ ಕಾಮಗಾರಿ ಬಿರುಸಿನಿಂದ ಸಾಗಿದೆ. ಅಸ್ಸಾಂ ಮುಖ್ಯಮಂತ್ರಿಗಳು ಟೂರ್ನಿಯನ್ನು ಯಶಸ್ಸುಗೊಳಿಸುವ ಬಗ್ಗೆ ನಮಗೆ ವಿಶ್ವಾಸವಿದೆ ಎಂದು ಟೂರ್ನಮೆಂಟ್‌ನ ನಿರ್ದೇಶಕ ಜಾವಿಯೆರ್ ಸೆಪ್ಪಿ ತಿಳಿಸಿದ್ದಾರೆ.
ಫಿಫಾ ನಿಯೋಗ ಗುವಾಹಟಿಯ ವಾತಾವರಣದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದು, ನೆಹರೂ ಸ್ಟೇಡಿಯಂನ ಐಜಿಎಐ ಟ್ರೈನಿಂಗ್ ಗ್ರೌಂಡ್, ಎಲ್‌ಎನ್‌ಐಪಿಇ ಗ್ರೌಂಡ್ ಹಾಗೂ ಸಾಯ್ ರೀಜನಲ್ ಸೆಂಟರ್‌ನ ತರಬೇತಿ ವ್ಯವಸ್ಥೆ ಹಾಗೂ ಪಿಚ್‌ಗಳ ಬಗ್ಗೆ ಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೊಚ್ಚಿ, ನವಿಮುಂಬೈ, ಗೋವಾ ಹಾಗೂ ಹೊಸದಿಲ್ಲಿ ನಗರಗಳಲ್ಲಿ ಅಂಡರ್-17 ವಿಶ್ವಕಪ್ ಆಯೋಜನೆಗೆ ಫಿಫಾ ಈಗಾಗಲೇ ಹಸಿರು ನಿಶಾನೆ ತೋರಿದೆ. 23 ಸದಸ್ಯರನ್ನು ಒಳಗೊಂಡ ನಿಯೋಗ ನಾಳೆ ಕೋಲ್ಕತಾಕ್ಕೆ ಭೇಟಿ ನೀಡಲಿದೆ. ಇದು ಫಿಫಾ ನಿಯೋಗ ಭೇಟಿ ನೀಡುತ್ತಿರುವ ಕೊನೆಯ ಫುಟ್ಬಾಲ್ ತಾಣವಾಗಿದೆ.