ನಾಲ್ಕನೆ ಏಕದಿನ: ಭಾರತದ ಗೆಲುವಿಗೆ 261ರನ್‌ಗಳ ಸವಾಲು
ರಾಂಚಿ, ಅ.26: ಭಾರತ ವಿರುದ್ಧದ ನಾಲ್ಕನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟದಲ್ಲಿ 260ರನ್ ಗಳಿಸಿದೆ.
ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ನ್ಯೂಝಿಲೆಂಡ್ ತಂಡಕ್ಕೆ ಆರಂಭಿಕ ದಾಂಡಿಗರಾದ ಮಾರ್ಟಿನ್ ಗಪ್ಟಿಲ್ ಮತ್ತು ಲಥಾಮ್ ಮೊದಲ ವಿಕೆಟ್‌ಗೆ 15.3 ಓವರ್‌ಗಳಲ್ಲಿ 96 ರನ್‌ಗಳ ಜೊತೆಯಾಟ ನೀಡಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿ ಕೊಟ್ಟರು.
ನ್ಯೂಝಿಲೆಂಡ್‌ನ ಅಗ್ರ ಸರದಿಯ ಬ್ಯಾಟಿಂಗ್ ಚೆನ್ನಾಗಿತ್ತು. ಬಳಿಕ ದುರ್ಬಲಗೊಂಡಿತು. ಲಥಾಮ್ 39 ರನ್ ಗಳಿಸಿ ಅಕ್ಷರ್ ಪಟೇಲ್ ಎಸೆತದಲ್ಲಿ ರಹಾನೆಗೆ ಕ್ಯಾಚ್ ನೀಡುವ ಮೂಲಕ ನ್ಯೂಝಿಲೆಂಡ್‌ನ ಮೊದಲ ವಿಕೆಟ್ ಪತನಗೊಂಡಿತು.
ಎರಡನೆ ವಿಕೆಟ್‌ಗೆ ಗಪ್ಟಿಲ್ ಮತ್ತು ನಾಯಕ ಕೇನ್ ವಿಲಿಯಮ್ಸನ್ 42 ರನ್ ಸೇರಿಸಿದರು. ಗಪ್ಟಿಲ್ 56 ಎಸೆತಗಳಲ್ಲಿ 8 ಬೌಂಡರಿಗಳ ಸಹಾಯದಿಂದ ಅರ್ಧಶತಕ ಪೂರ್ಣಗೊಳಿಸಿದರು. ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಗಪ್ಟಿಲ್ ಅವರು ವಿಕೆಟ್ ಕೀಪರ್ ಧೋನಿಗೆ ಕ್ಯಾಚ್ ನೀಡಿ ಹೊರ ನಡೆದರು. ಔಟಾಗುವ ಮೊದಲು ಗಪ್ಟಿಲ್ 72 ರನ್(84ಎ, 12ಬೌ) ಗಳಿಸಿದರು.
ವಿಲಿಯಮ್ಸನ್ 41 ರನ್, ರಾಸ್ ಟೇಲರ್ 35 ರನ್, ನಿಶಮ್ 6 ರನ್, ವಾಟ್ಲಿಂಗ್ 14 ರನ್ , ಡೇವಿಚ್ 11ರನ್, ಸ್ಯಾಂಟ್ನೆರ್ ಔಟಾಗದೆ 17 ರನ್ ಮತ್ತು ಸೌಥಿ ಔಟಾಗದೆ 9ರನ್ ಗಳಿಸಿದರು.
ಭಾರತದ ಅಮಿತ್ ಮಿಶ್ರಾ 42ಕ್ಕೆ 2, ಉಮೇಶ್ ಯಾದವ್, ಧವಳ್ ಕುಲಕರ್ಣಿ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ತಲಾ 1 ವಿಕೆಟ್ ಹಂಚಿಕೊಂಡರು.