×
Ad

ಬಂದರು ನಗರದಲ್ಲಿ ಭಾರತ-ಕಿವೀಸ್ ಅಂತಿಮ ಹಣಾಹಣಿ

Update: 2016-10-28 23:04 IST

 ವಿಶಾಖಪಟ್ಟಣ, ಅ.28:ಭಾರತ ಮತ್ತು ನ್ಯೂಝಿಲೆಂಡ್ ತಂಡಗಳ ನಡುವೆ ಐದನೆ ಹಾಗೂ ಅಂತಿಮ ಏಕದಿನ ಅಂತಾರಾಷ್ಟ್ರೀಯ ಪಂದ್ಯ ಬಂದರು ನಗರ ವಿಶಾಖಪಟ್ಟಣದಲ್ಲಿ ಶನಿವಾರ ನಡೆಯಲಿದೆ.
ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯ ಉಭಯ ತಂಡಗಳಿಗೂ ಅತ್ಯಂತ ಮಹತ್ವದ್ದಾಗಿದೆ. ಭಾರತ ಮತ್ತು ನ್ಯೂಝಿಲೆಂಡ್ ಕಳೆದ ನಾಲ್ಕು ಪಂದ್ಯಗಳಲ್ಲಿ ತಲಾ ಎರಡು ಪಂದ್ಯಗಳನ್ನು ಗೆದ್ದುಕೊಂಡಿವೆ.
 ಕೊನೆಯ ಪಂದ್ಯದಲ್ಲಿ ಭಾರತ ಗೆಲ್ಲುವ ಸಂಕಲ್ಪ ಮಾಡಿದೆ. ಆದರೆ ನ್ಯೂಝಿಲೆಂಡ್ ಭಾರತದ ವಿರುದ್ಧ ಗೆಲ್ಲುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸುವತ್ತ ನೋಡುತ್ತಿದೆ.
ಮಹೇಂದ್ರ ಸಿಂಗ್ ಧೋನಿ ನಾಯಕತ್ವಕ್ಕೆ ಅಂತಿಮ ಪಂದ್ಯದಲ್ಲಿ ಕಠಿಣ ಸವಾಲು ಎದುರಾಗಲಿದೆ. ಈ ಪಂದ್ಯದಲ್ಲಿ ಸೋತರೆ ಕೇನ್ ವಿಲಿಯಮ್ಸನ್ ತಂಡ ಮೊದಲ ಬಾರಿ ಭಾರತದಲ್ಲಿ ಚೊಚ್ಚಲ ಸರಣಿ ಜಯಿಸಿದ ಇತಿಹಾಸ ಬರೆದಂತಾಗುತ್ತದೆ. ಈ ಕಾರಣಕ್ಕಾಗಿ ಭಾರತ ಒತ್ತಡದಲ್ಲಿ ಸಿಲುಕಿದೆ.
ನಾಯಕ ಕೇನ್ ವಿಲಿಯಮ್ಸನ್ ಮತ್ತು ಮಾರ್ಟಿನ್ ಗಪ್ಟಿಲ್ ಭರ್ಜರಿ ಬ್ಯಾಟಿಂಗ್ ನೆರವಿನಲ್ಲಿ ಕ್ರಮವಾಗಿ ದಿಲ್ಲಿ ಮತ್ತು ರಾಂಚಿಯಲ್ಲಿ ನಡೆದ ಪಂದ್ಯಗಳಲ್ಲಿ ಕಿವೀಸ್ ಜಯ ಗಳಿಸಿತ್ತು.
 ಧೋನಿ ನಾಯಕತ್ವಕ್ಕೆ ಸದ್ಯಅಪಾಯ ಇಲ್ಲ. ಆದರೆ ಪಂದ್ಯದಲ್ಲಿ ಸೋಲು ಅನುಭವಿಸಿದರೆ ಅವರ ನಾಯಕತ್ವಕ್ಕೆ ಹೊಸ ಸವಾಲ ಎದುರಾಗಲಿದೆ. ಧೋನಿ ನಾಯಕತ್ವದಲ್ಲಿ ಭಾರತ ತಂಡ ಆಡಿರುವ ಕಳೆದ ನಾಲ್ಕು ಏಕದಿನ ಸರಣಿಯಲ್ಲಿ 3ರಲ್ಲಿ ಸೋಲು ಅನುಭವಿಸಿತ್ತು. ಬಾಂಗ್ಲಾದೇಶದಲ್ಲಿ 1-2 ಅಂತರದಲ್ಲಿ ಸರಣಿ ಸೋಲು ಅನುಭವಿಸಿತ್ತು. ಆಸ್ಟ್ರೇಲಿಯ ವಿರುದ್ಧ 1-4 ಮತ್ತು ದಕ್ಷಿಣ ಆಫ್ರಿಕ ವಿರುದ್ಧ 2-3 ಅಂತರಲ್ಲಿ ಸೋಲು ಅನುಭವಿಸಿತ್ತು. ಕಳೆದ 18 ತಿಂಗಳ ಅವಧಿಯಲ್ಲಿ ಝಿಂಬಾಬ್ವೆ ವಿರುದ್ಧ ಮಾತ್ರ ಸರಣಿ ಜಯಿಸಿತ್ತು.
 ಎಸಿಎ-ವಿಡಿಸಿಎಯಲ್ಲಿ ಭಾರತ ಈ ವರೆಗೆ ನಡೆದ 5 ಪಂದ್ಯಗಳಲ್ಲಿ 4ರಲ್ಲಿ ಜಯ ಗಳಿಸಿರುವ ದಾಖಲೆ ಹೊಂದಿದೆ. ಶ್ರೀಲಂಕಾ ವಿರುದ್ಧ 2014ರ ನವೆಂಬರ್‌ನಲ್ಲಿ ಭಾರತ 5-0 ಅಂತರದಲ್ಲಿ ಸರಣಿ ಜಯಿಸಿತ್ತು. ಧೋನಿ ವೃತ್ತಿ ಬದುಕನ್ನು ಕೊನೆಗೊಳಿಸುವ ಹಾದಿಯಲ್ಲಿದ್ದಾರೆ. ಅವರು ಯಾವುದೇ ಕ್ಷಣದಲ್ಲಿ ನಿವೃತ್ತಿಯ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಆಸ್ಟ್ರೇಲಿಯದಲ್ಲಿ ಯಾವುದೇ ಸೂಚನೆ ನೀಡದೆ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಪ್ರಕಟಿಸಿದ್ದರು. ಭಾರತ ಮುಂದಿನ ವರ್ಷ ಜೂನ್‌ನಲ್ಲಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಮೊದಲು ಇಂಗ್ಲೆಂಡ್ ವಿರುದ್ಧ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ.

ವಿಶಾಖಪಟ್ಟಣದಲ್ಲಿ ಧೋನಿ: ಎಪ್ರಿಲ್ 5,2005ರಲ್ಲಿ ವಿಶಾಖಪಟ್ಟಣದಲ್ಲಿ ಮೊದಲ ಏಕದಿನ ಪಂದ್ಯ ನಡೆದಿತ್ತು. ಅಲ್ಲಿ ಧೋನಿ ಅವರು ಮೊದಲ ಏಕದಿನ ಶತಕ ದಾಖಲಿಸಿದ್ದರು. ವಿಕೆಟ್ ಕೀಪರ್ ಆಗಿದ್ದ ಧೋನಿ ಆರಂಭದ ನಾಲ್ಕು ಪಂದ್ಯಗಳಲ್ಲಿ 0, 12 ಔಟಾಗದೆ 7 ಮತ್ತು 3 ರನ್ ಗಳಿಸಿದ್ದರು.ಆದರೆ ಪಾಕಿಸ್ತಾನದ ವಿರುದ್ಧ ಪಂದ್ಯದಲ್ಲಿ 3ನೆ ಕ್ರಮಾಂಕದಲ್ಲಿ ಆಡಿದ ಧೋನಿ 123 ಎಸೆತಗಳಲ್ಲಿ 15 ಬೌಂಡರಿ ಮತ್ತು 4 ಸಿಕ್ಸರ್‌ಗಳ ನೆರವಿನಲ್ಲಿ 148 ರನ್ ಗಳಿಸಿ ವಿಶ್ವದ ಗಮನ ಸೆಳೆದಿದ್ದರು. ಭಾರತ 9 ವಿಕೆಟ್ ನಷ್ಟದಲ್ಲಿ 356 ರನ್ ಗಳಿಸಿತ್ತು.
 ವಿಶಾಖಪಟ್ಟಣದಲ್ಲಿ ಧೋನಿ ಆಡಿರುವ ಮೂರು ಪಂದ್ಯಗಳ ಪೈಕಿ 1ರಲ್ಲಿ ಸೊನ್ನೆ ಮತ್ತು ಇನ್ನೊಂದು ಪಂದ್ಯದಲ್ಲಿ 40 ಎಸೆತಗಳಲ್ಲಿ 51 ರನ್ ಸಿಡಿಸಿದ್ದರು.
ಪಂದ್ಯಕ್ಕೆ ಮಳೆಯ ಸಾಧ್ಯತೆ ಕಡಿಮೆ: ವಿಶಾಖಪಟ್ಟಣದಲ್ಲಿ ಮೋಡ ಕವಿದ ವಾತಾವರಣವಿದ್ದರೂ ಮಳೆ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.

ತಂಡದ ಸಮಾಚಾರ: ಅಂತಿಮ ಪಂದ್ಯಕ್ಕೆ ಭಾರತದ ಅಂತಿಮ ಹನ್ನೊಂದರ ಬಳಗದಲ್ಲಿ ಜಸ್‌ಪ್ರೀತ್ ಬುಮ್ರಾ ಸೇರ್ಪಡೆಗೊಳ್ಳಲಿದ್ದಾರೆ. ಧವಳ್ ಕುಲಕರ್ಣಿ ಕಳೆದ ಪಂದ್ಯದಲ್ಲಿ ಹೆಚ್ಚು ರನ್ ಬಿಟ್ಟುಕೊಟ್ಟಿದ್ದರು. ಈ ಕಾರಣದಿಂದಾಗಿ ಅವರಿಗೆ ಅಂತಿಮ ಪಂದ್ಯದಲ್ಲಿ ಆಡುವ ಅವಕಾಶ ಸಿಗುವ ಸಾಧ್ಯತೆ ಇದೆ. ರೋಹಿತ್ ಶರ್ಮ ಅಗ್ರಸರದಿಯಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಭಾರತ ಕಳೆದ ಎರಡು ಪಂದ್ಯಗಳಲ್ಲಿ ಜಯಿಸುವಲ್ಲಿ ವಿರಾಟ್ ಕೊಹ್ಲಿ ದೊಡ್ಡ ಕೊಡುಗೆ ನೀಡಿದ್ದಾರೆ. ಅವರು ವಿಫಲವಾದ ಎರಡೂ ಪಂದ್ಯಗಳಲ್ಲಿ ಭಾರತ ಸೋಲು ಅನುಭವಿಸಿದೆ.
ನ್ಯೂಝಿಲೆಂಡ್ ಎರಡನೆ ಪಂದ್ಯಗಳಲ್ಲಿ 6ರನ್ ಮತ್ತು ನಾಲ್ಕನೆ ಪಂದ್ಯದಲ್ಲಿ 19 ರನ್‌ಗಳ ಅಂತರದಲ್ಲಿ ಜಯ ಗಳಿಸಿತ್ತು. ರಾಂಚಿಯಲ್ಲಿ ನಾಯಕ ವಿಲಿಯಮ್ಸನ್ ಮೂವರು ಸ್ಪಿನ್ನರ್‌ಗಳನ್ನು ದಾಳಿಗಿಳಿಸಿ ಯಶಸ್ಸು ಗಳಿಸಿದ್ದರು. ಅಂತಿಮ ಪಂದ್ಯಕ್ಕೆ ಆಲ್‌ರೌಂಡರ್ ಕೋರಿ ಆ್ಯಂಡರ್ಸನ್ ತಂಡಕ್ಕೆ ವಾಪಸಾಗುವ ನಿರೀಕ್ಷೆ ಇದೆ.
ಸಂಭಾವ್ಯ ತಂಡ
ಭಾರತ:
ಮಹೇಂದ್ರ ಸಿಂಗ್ ಧೋನಿ(ನಾಯಕ/ವಿಕೆಟ್ ಕೀಪರ್),ಅಜಿಂಕ್ಯ ರಹಾನೆ, ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಮನೀಷ್ ಪಾಂಡೆ, ಕೇದಾರ್ ಜಾಧವ್, ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ, ಅಮಿತ್ ಮಿಶ್ರಾ, ಉಮೇಶ್ ಯಾದವ್, ಜಸ್‌ಪ್ರೀತ್ ಬುಮ್ರಾ.
ನ್ಯೂಝಿಲೆಂಡ್: ಕೇನ್ ವಿಲಿಯಮ್ಸನ್ (ನಾಯಕ), ಮಾರ್ಟಿನ್ ಗಪ್ಟಿಲ್, ಟಾಮ್ ಲಥಾಮ್, ರಾಸ್ ಟೇಲರ್, ಬಿ.ಜೆ.ವಾಟ್ಲಿಂಗ್(ವಿಕೆಟ್ ಕೀಪರ್), ಜೇಮ್ಸ್ ನಿಶಮ್, ಕೋರಿ ಆ್ಯಂಡರ್ಸನ್/ಆ್ಯಂಟನಿ ಡೇವ್‌ಸಿಚ್, ಮಿಚೆಲ್ ಸ್ಯಾಂಟ್ನೆರ್, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್, ಮ್ಯಾಟ್ ಹೆನ್ರಿ/ಐಶ್ ಸೋಧಿ.
ಹೈಲೈಟ್ಸ್
 *ವಿಶಾಖಪಟ್ಟಣದಲ್ಲಿ ನಡೆದಿರುವ ಐದು ಏಕದಿನ ಪಂದ್ಯಗಳಲ್ಲಿ ಭಾರತ ನಾಲ್ಕರಲ್ಲಿ ಜಯ ಗಳಿಸಿದೆ. ಒಂದು ಪಂದ್ಯದಲ್ಲಿ ಸೋಲು ಅನುಭವಿಸಿದೆ. *ಮಾರ್ಟಿನ್ ಗಪ್ಟಿಲ್‌ಗೆ ಏಕದಿನ ಕ್ರಿಕೆಟ್‌ನಲ್ಲಿ 5 ಸಾವಿರ ರನ್‌ಗಳ ಮೈಲುಗಲ್ಲು ಮುಟ್ಟಲು ಇನ್ನು 45 ರನ್ ಸೇರಿಸಬೇಕಾಗಿದೆ. ಅವರು ಈ ಸಾಧನೆ ಮಾಡಿರುವ ನ್ಯೂಝಿಲೆಂಡ್‌ನ ಐದನೆ ಬ್ಯಾಟ್ಸ್‌ಮನ್ ಎನಿಸಿಕೊಳ್ಳಲಿದ್ದಾರೆ.
*ಟಾಮ್ ಲಥಾಮ್‌ಗೆ ಭಾರತದಲ್ಲಿ ನಡೆದ ಸರಣಿಯಲ್ಲಿ ಗರಿಷ್ಠ ರನ್ ಗಳಿಸಿದ ಆಟಗಾರ ಎನಿಸಿಕೊಳ್ಳಲು ಇನ್ನು 10 ರನ್ ಬೇಕಾಗಿದೆ. ನಥಾಮ್ ಅಸ್ಲೆ 1999ರ ಸರಣಿಯಲ್ಲಿ 234 ರನ್ ಗಳಿಸಿದ್ದರು.
*ವಿರಾಟ್ ಕೊಹ್ಲಿಗೆ ನ್ಯೂಝಿಲೆಂಡ್ ವಿರುದ್ಧದ ಸರಣಿಯಲ್ಲಿ ಗರಿಷ್ಠ ರನ್‌ಗಳ ದಾಖಲೆ ಬರೆಯಲು 37 ರನ್ ಗಳಿಸಬೇಕಾಗಿದೆ. ದ್ವಿಪಕ್ಷೀಯ ಸರಣಿಯಲ್ಲಿ ಗೌತಮ್ ಗಂಭೀರ್ 329 ರನ್ ಗಳಿಸಿರುವ ದಾಖಲೆ ಹೊಂದಿದ್ದಾರೆ.
 *ಕೊಹ್ಲಿ ವಿಶಾಖಪಟ್ಟಣದಲ್ಲಿ ಆಡಿರುವ ಮೂರು ಏಕದಿನ ಪಂದ್ಯಗಳಲ್ಲಿ ಆಸ್ಟ್ರೇಲಿಯ ವಿರುದ್ಧ 2010ರಲ್ಲಿ 118 ರನ್, ವೆಸ್ಟ್‌ಇಂಡೀಸ್ ವಿರುದ್ಧ 2011ರಲ್ಲಿ 117ರನ್, ವೆಸ್ಟ್‌ಇಂಡೀಸ್ ವಿರುದ್ಧ 2013ರಲ್ಲಿ 99 ರನ್ ದಾಖಲಿಸಿದ್ದರು.

ಪಂದ್ಯದ ಸಮಯ: ಮಧ್ಯಾಹ್ನ 1:30ಕ್ಕೆ 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News