ರಣಜಿ: ಅಸ್ಸಾಂಗೆ ಕರ್ನಾಟಕ ದಿಟ್ಟ ಉತ್ತರ;ಉತ್ತಪ್ಪ-ನಾಯರ್ ಆಕರ್ಷಕ ಶತಕ
ಮುಂಬೈ, ಅ.28: ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ರಾಬಿನ್ ಉತ್ತಪ್ಪ ಹಾಗೂ ಕರುಣ್ ನಾಯರ್ ಅವರ ಆಕರ್ಷಕ ಅಜೇಯ ಶತಕದ ನೆರವಿನಿಂದ ಕರ್ನಾಟಕ ತಂಡ ಅಸ್ಸಾಂಗೆ ದಿಟ್ಟ ಉತ್ತರ ನೀಡಲು ಮುಂದಾಗಿದೆ.
ಇಲ್ಲಿನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿಯ ಬಿ ಗುಂಪಿನ ಪಂದ್ಯದಲ್ಲಿ ಎರಡನೆ ದಿನವಾದ ಶುಕ್ರವಾರ ಆಟ ಕೊನೆಗೊಂಡಾಗ ಕರ್ನಾಟಕ 69 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 223 ರನ್ ಗಳಿಸಿತ್ತು. ಉತ್ತಪ್ಪ(ಅಜೇಯ 108, 206 ಎಸೆತ, 12 ಬೌಂಡರಿ, 2 ಸಿಕ್ಸರ್) ಹಾಗೂ ನಾಯಕ ಕರುಣ್ ನಾಯರ್(ಅಜೇಯ 108, 198 ಎಸೆತ, 13 ಬೌಂಡರಿ) 3ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 219 ರನ್ ಸೇರಿಸಿ ತಂಡಕ್ಕೆ ಆಸರೆಯಾಗಿದ್ದಾರೆ. ಕರ್ನಾಟಕ, ಅಸ್ಸಾಂ ಇನಿಂಗ್ಸ್‌ಗಿಂತ 102 ರನ್ ಹಿನ್ನಡೆಯಲ್ಲಿದೆ.
ಕರ್ನಾಟಕ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಆರ್.ಸಮರ್ಥ್ ಹಾಗೂ ಮಾಯಾಂಕ್ ಅಗರ್‌ವಾಲ್ ಖಾತೆ ತೆರೆಯುವ ಮೊದಲೇ ಪೆವಿಲಿಯನ್‌ಗೆ ಸೇರಿದರು. ಈ ಇಬ್ಬರು ಔಟಾದಾಗ ಭಾರತ ಎಕ್ಸ್‌ಟ್ರಾ ರನ್ ನೆರವಿನಿಂದ 2 ವಿಕೆಟ್ ನಷ್ಟಕ್ಕೆ 4 ರನ್ ಗಳಿಸಿತ್ತು.
ತಂಡ ಸಂಕಷ್ಟದಲ್ಲಿದ್ದಾಗ ಜೊತೆಯಾದ ಉತ್ತಪ್ಪ-ನಾಯರ್ ಜೋಡಿ ಅಸ್ಸಾಂ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿ ಕರ್ನಾಟಕ ದಿಟ್ಟ ಉತ್ತರ ನೀಡಲು ನೆರವಾಗಿದ್ದಾರೆ. ಅಸ್ಸಾಂ 325, ಅಮಿತ್ ವರ್ಮ ಔಟಾಗದೆ 166 ರನ್
ಇದಕ್ಕೆ ಮೊದಲು 6 ವಿಕೆಟ್‌ಗಳ ನಷ್ಟಕ್ಕೆ 268 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಅಸ್ಸಾಂ ತಂಡ ನಿನ್ನೆಯ ಮೊತ್ತಕ್ಕೆ 102 ರನ್ ಸೇರಿಸುವಷ್ಟರಲ್ಲಿ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಪುರ್ಕಯಸ್ತ(59) ನಿನ್ನೆಯ ಮೊತ್ತಕ್ಕೆ 3 ರನ್ ಸೇರಿಸಿ ಸ್ಟುವರ್ಟ್ ಬಿನ್ನಿಗೆ ವಿಕೆಟ್ ಒಪ್ಪಿಸಿದರು.
ಅಜೇಯ ಶತಕ ಸಿಡಿಸಿದ ಅಮಿತ್ ವರ್ಮ(166 ರನ್, 316 ಎಸೆತ, 23 ಬೌಂಡರಿ, 3 ಸಿಕ್ಸರ್) ಏಕಾಂಗಿ ಹೋರಾಟ ನೀಡಿದರು. ಪುರ್ಕಯಸ್ತ ಔಟಾದ ಬಳಿಕ ಅವರಿಗೆ ಅಸ್ಸಾಂನ ಕೆಳ ಕ್ರಮಾಂಕದ ಉಳಿದ ಆಟಗಾರರಿಂದ ಸೂಕ್ತ ಬೆಂಬಲ ಸಿಗಲಿಲ್ಲ.
ಕರ್ನಾಟಕದ ಪರ ಶ್ರೀನಾಥ್ ಅರವಿಂದ್(5-70) ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದರು. ಸ್ಪಿನ್ನರ್ ಎಸ್.ಗೋಪಾಲ್(3-74) ಹಾಗೂ ಆಲ್‌ರೌಂಡರ್ ಸ್ಟುವರ್ಟ್ ಬಿನ್ನಿ(2-81) ಐದು ವಿಕೆಟ್‌ಗಳನ್ನು ಹಂಚಿಕೊಂಡರು.
ಸಂಕ್ಷಿಪ್ತ ಸ್ಕೋರ್
ಅಸ್ಸಾಂ ಮೊದಲ ಇನಿಂಗ್ಸ್: 325 ರನ್‌ಗೆ ಆಲೌಟ್
(ಅಮಿತ್ ವರ್ಮ ಅಜೇಯ 166, ಪುರ್ಕಯಸ್ತ 59, ಎಸ್.ಅರವಿಂದ್ 5-70, ಎಸ್.ಗೋಪಾಲ್ 3-74, ಬಿನ್ನಿ 2-81)
ಕರ್ನಾಟಕ ಪ್ರಥಮ ಇನಿಂಗ್ಸ್: 223/2
(ರಾಬಿನ್ ಉತ್ತಪ್ಪ ಅಜೇಯ 108, ಕರಣ್ ನಾಯರ್ ಅಜೇಯ 108, ಎಕೆ ದಾಸ್ 1-27, ಕೆ.ದಾಸದ್ 1-46)
ಹಿಮಾಚಲಪ್ರದೇಶ 36 ರನ್‌ಗೆ ಆಲೌಟ್, ರನ್ ನೀಡದೆ 4 ವಿಕೆಟ್ ಪಡೆದ ಆಕಾಶ್
ಗುವಾಹಟಿ, ಅ.28: ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿಯ ‘ಸಿ’ ಗುಂಪಿನ ಪಂದ್ಯ ಬೌಲರ್‌ಗಳ ಮೆರೆದಾಟಕ್ಕೆ ಸಾಕ್ಷಿಯಾಗಿದ್ದು, ಒಂದೇ ದಿನ 15 ವಿಕೆಟ್‌ಗಳು ಪತನಗೊಂಡಿವೆ.
ಶುಕ್ರವಾರ ಇಲ್ಲಿ ನಡೆದ 2ನೆ ದಿನದಾಟದಲ್ಲಿ 2 ವಿಕೆಟ್‌ಗೆ 8 ರನ್‌ನಿಂದ ಮೊದಲ ದಿನದಾಟ ಮುಂದುವರಿಸಿದ ಹಿಮಾಚಲ ಪ್ರದೇಶ ತಂಡ ಕೇವಲ 36 ರನ್‌ಗೆ ಆಲೌಟಾಯಿತು. ಇದು 2000ರ ಬಳಿಕ ರಣಜಿಯಲ್ಲಿ ದಾಖಲಾದ 4ನೆ ಕನಿಷ್ಠ ಸ್ಕೋರ್.
ಇದಕ್ಕೆ ಉತ್ತರವಾಗಿ ಹೈದರಾಬಾದ್ 99 ರನ್‌ಗೆ 7 ವಿಕೆಟ್‌ಗಳನ್ನು ಕಳೆದುಕೊಂಡಿದ್ದು, ಕೇವಲ 63 ರನ್ ಮುನ್ನಡೆಯಲ್ಲಿದೆ. ಹಿಮಾಚಲ ಪ್ರದೇಶದ ವೇಗಿ ರಿಷಿ ಧವನ್(6-35) ಆರು ವಿಕೆಟ್‌ಗಳನ್ನು ಕಬಳಿಸಿ ಹೈದರಾಬಾದ್‌ಗೆ ಕಡಿವಾಣ ಹಾಕಿದ್ದಾರೆ.
ಇದಕ್ಕೆ ಮೊದಲು ಹೈದರಾಬಾದ್‌ನ ಸ್ಪಿನ್ನರ್ ಆಕಾಶ್ ಭಂಡಾರಿ(4-0), ವೇಗಿಗಳಾದ ರವಿ ಕಿರಣ್(3-12) ಹಾಗೂ ಚಾಮ ಮಿಲಿಂದ್(2-15) ದಾಳಿಗೆ ತತ್ತರಿಸಿದ ಹಿಮಾಚಲ ಪ್ರದೇಶ 25 ಓವರ್‌ಗಳಲ್ಲಿ ಗಂಟುಮೂಟೆ ಕಟ್ಟಿತು.
ಆಂಧ್ರದ ಸ್ಪಿನ್ ಬೌಲರ್ ಆಕಾಶ್ ಭಂಡಾರಿ 3 ಓವರ್‌ನಲ್ಲಿ ಒಂದೂ ರನ್ ನೀಡದೆ 3 ಮೇಡನ್ ಓವರ್‌ನೊಂದಿಗೆ ಎದುರಾಳಿ ತಂಡದ 4 ವಿಕೆಟ್‌ಗಳನ್ನು ಉಡಾಯಿಸಿ ಹೊಸ ದಾಖಲೆ ಬರೆದರು.
ಹಿಮಾಚಲ ಪ್ರದೇಶದ ಸ್ಕೋರ್ ಟೆಲಿಫೋನ್ ನಂಬರ್‌ನ್ನು ಅಣಕಿಸುವಂತಿತ್ತು. ಗಂಗ್ಟಾ ಬಾರಿಸಿದ್ದ 8 ರನ್ ತಂಡದ ಪರ ದಾಖಲಾದ ಗರಿಷ್ಠ ಸ್ಕೋರ್. ನಾಯಕ ರಿಷಿ ಧವನ್ ಸಹಿತ ಐವರು ಆಟಗಾರರು ಶೂನ್ಯ ಸಂಪಾದಿಸಿದರು. ಡೋಗ್ರ(6), ಸುಮೀತ್ ವರ್ಮ(5), ದಾಗರ್(4) ಒಂದಂಕಿ ಸ್ಕೋರ್ ದಾಖಲಿಸಿದರು.
ಹಿಮಾಚಲ ಪ್ರದೇಶವನ್ನು ಕನಿಷ್ಠ ಮೊತ್ತಕ್ಕೆ ಕಟ್ಟಿಹಾಕಿದ್ದ ಹೈದರಾಬಾದ್ ಕೂಡ ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾಯಿತು. ತಂಡದ ಪರ ಅನಿರುದ್ಧ ಅಜೇಯ 44 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ನಾಯಕ ಬದ್ರಿನಾಥ್ ಶೂನ್ಯಕ್ಕೆ ಔಟಾದರು.
ತಮಿಳುನಾಡು 547/7: ಕಟಕ್‌ನಲ್ಲಿ ನಡೆದ ಎ ಗುಂಪಿನ ಪಂದ್ಯದಲ್ಲಿ ತಮಿಳುನಾಡು ತಂಡ ಮಧ್ಯಪ್ರದೇಶದ ವಿರುದ್ಧ 7 ವಿಕೆಟ್‌ಗಳ ನಷ್ಟಕ್ಕೆ 547 ರನ್ ಗಳಿಸಿದೆ. ಆರಂಭಿಕ ಆಟಗಾರರಾದ ಸುಂದರ್ ಹಾಗೂ ಮುಕುಂದ್ ಶೂನ್ಯಕ್ಕೆ ಔಟಾದಾಗ ಕೌಶಿಕ್ ಗಾಂಧಿ(157), ಜಗದೀಶನ್(ಔಟಾಗದೆ 118), ದಿನೇಶ್ ಕಾರ್ತಿಕ್(95) ಹಾಗೂ ಇಂದ್ರಜಿತ್(68) ಪ್ರಮುಖ ಕಾಣಿಕೆ ನೀಡಿ ತಂಡವನ್ನು ಆಧರಿಸಿದರು.