ವಿಶಾಖಪಟ್ಟಣದಲ್ಲಿ ಧೋನಿ ಮತ್ತೆ ಮಿಂಚುತ್ತಾರೆಯೇ?

Update: 2016-10-28 18:00 GMT

ಹೊಸದಿಲ್ಲಿ, ಅ.29: ಎಪ್ರಿಲ್ 5, 2005 ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ತುಂಬಾ ವಿಶೇಷವಾದ ದಿನ. ಅದೇ ದಿನ ವಿಶಾಖಪಟ್ಟಣದ ಹೊರವಲಯ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯ ನಡೆದಿತ್ತು. ಆ ಪಂದ್ಯದಲ್ಲಿ ಮೊದಲ ಶತಕವನ್ನು ಭಾರತೀಯ ವಿಕೆಟ್‌ಕೀಪರ್ ಒಬ್ಬರು ದಾಖಲಿಸಿದ್ದರು.

ಆ ವ್ಯಕ್ತಿ ಬೇರ್ಯಾರು ಅಲ್ಲ, ಅವರೇ ಭಾರತ ಕಂಡ ಯಶಸ್ವಿ ನಾಯಕ ಎಂಎಸ್ ಧೋನಿ. ಧೋನಿ ತನ್ನ 5ನೆ ಏಕದಿನ ಪಂದ್ಯದಲ್ಲಿ ಶತಕವನ್ನು ಸಿಡಿಸಿ ಗಮನ ಸೆಳೆದಿದ್ದರು.

ಚೊಚ್ಚಲ ಪಂದ್ಯದಲ್ಲಿ ಶೂನ್ಯ ಸಂಪಾದಿಸಿದ್ದ ಧೋನಿ ಆ ನಂತರ 12, 7 ಹಾಗೂ 3 ರನ್ ಗಳಿಸಿದ್ದರು. ವಿಶಾಖಪಟ್ಟಣದಲ್ಲಿ ನಡೆದ ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ 3ನೆ ಕ್ರಮಾಂಕದಲ್ಲಿ ಮುಂಭಡ್ತಿ ಪಡೆದು ಬ್ಯಾಟಿಂಗ್‌ಗೆ ಇಳಿದ ಧೋನಿ ಕೇವಲ 123 ಎಸೆತಗಳಲ್ಲಿ 15 ಬೌಂಡರಿ ಹಾಗೂ 4 ಸಿಕ್ಸರ್‌ಗಳನ್ನು ಬಾರಿಸಿದ್ದರು. ಭಾರತ 9 ವಿಕೆಟ್ ನಷ್ಟಕ್ಕೆ 356 ರನ್ ಗಳಿಸಲು ಭದ್ರಬುನಾದಿ ಹಾಕಿಕೊಟ್ಟಿದ್ದರು. ಆ ಅದ್ಭುತ ಇನಿಂಗ್ಸ್‌ನ ಮೂಲಕ ವಿಶ್ವ ಕ್ರಿಕೆಟ್‌ಗೆ ಧೋನಿಯ ಸಾಮರ್ಥ್ಯ ಬೆಳಕಿಗೆ ಬಂದಿತ್ತು. ಸ್ಟಾರ್ ಆಟಗಾರನೊಬ್ಬನ ಉದಯವಾಗಿತ್ತು. ಆ ನಂತರ ನಡೆದಿರುವುದಿಲ್ಲ್ಲ ಇತಿಹಾಸವಾಗಿದೆ.

 ಆ ಬಳಿಕ ಧೋನಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೂರು ಪಂದ್ಯಗಳನ್ನು ಆಡಿದ್ದರು. ಆ ಪೈಕಿ ಒಂದರಲ್ಲಿ ಶೂನ್ಯಕ್ಕೆ ಔಟಾದರೆ, ಮತ್ತೊಂದು ಪಂದ್ಯದಲ್ಲಿ 40 ಎಸೆತಗಳಲ್ಲಿ ಔಟಾಗದೆ 51 ರನ್ ಗಳಿಸಿದ್ದರು. ಇದೀಗ ಅದೇ ಸ್ಟೇಡಿಯಂನಲ್ಲಿ ಧೋನಿ ನ್ಯೂಝಿಲೆಂಡ್ ವಿರುದ್ಧ ಏಕದಿನ ಸರಣಿಯ 5ನೆ ಹಾಗೂ ಅಂತಿಮ ಏಕದಿನದಲ್ಲಿ ಭಾರತವನ್ನು ನಾಯಕನಾಗಿ ಮುನ್ನಡೆಸುತ್ತಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟರ್ ಆಗಿ ಗುರುತಿಸಿಕೊಂಡ ಸ್ಟೇಡಿಯಂನಲ್ಲಿ ಧೋನಿ ಕೊನೆಯ ಪಂದ್ಯ ಆಡುವ ಸಾಧ್ಯತೆಯಿದೆ.

ಕಿವೀಸ್ ವಿರುದ್ಧದ 3ನೆ ಏಕದಿನ ಪಂದ್ಯದಲ್ಲಿ 4ನೆ ಕ್ರಮಾಂಕದಲ್ಲಿ ಭಡ್ತಿ ಪಡೆದು ಆಡಿದ ಧೋನಿ 91 ಎಸೆತಗಳಲ್ಲಿ 80 ರನ್ ಗಳಿಸಿದ್ದರು. 4ನೆ ಏಕದಿನದಲ್ಲಿ 4ನೆ ಕ್ರಮಾಂಕದಲ್ಲಿ ಆಡಿದ್ದ ಧೋನಿ 31ಎಸೆತಗಳಲ್ಲಿ ಕೇವಲ 11 ರನ್ ಗಳಿಸಿದ್ದರು.

ತವರು ಪಟ್ಟಣ ರಾಂಚಿಯಲ್ಲಿ ದೊಡ್ಡ ಸ್ಕೋರ್ ಗಳಿಸಲು ವಿಫಲರಾಗಿದ್ದ ಧೋನಿ ನೆರೆದಿದ್ದ ಅಭಿಮಾನಿಗಳನ್ನು ನಿರಾಸೆಗೊಳಿಸಿದ್ದರು. ಆದರೆ, ಉತ್ತಮ ವಿಕೆಟ್‌ಕೀಪಿಂಗ್‌ನ ಮೂಲಕ ಮನರಂಜಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News