×
Ad

ಇಂದು ಸೆಮಿಫೈನಲ್‌ನಲ್ಲಿ ಭಾರತಕ್ಕೆ ಕೊರಿಯಾ ಎದುರಾಳಿ

Update: 2016-10-28 23:32 IST

ಕ್ವಾಂಟನ್(ಮಲೇಷ್ಯಾ), ಅ.28: ನಾಲ್ಕನೆ ಆವೃತ್ತಿಯ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಸೆಮಿ ಫೈನಲ್‌ನಲ್ಲಿ ಶನಿವಾರ ದಕ್ಷಿಣ ಕೊರಿಯಾದ ಸವಾಲನ್ನು ಎದುರಿಸಲು ಸಜ್ಜಾಗಿರುವ ಭಾರತ ತಂಡಕ್ಕೆ ನಾಯಕ, ಗೋಲ್‌ಕೀಪರ್ ಶ್ರೀಜೇಶ್ ಮಂಡಿನೋವಿನಿಂದ ಬಳಲುತ್ತಿರುವುದು ಗಂಭೀರ ಸಮಸ್ಯೆಯಾಗಿ ಕಾಡುತ್ತಿದೆ.

ಅಶಿಸ್ತಿನ ವರ್ತನೆಗೆ ಡಿಫೆಂಡರ್ ಸುರೇಂದರ್ ಕುಮಾರ್ ಟೂರ್ನಿಯ ಎರಡು ಪಂದ್ಯಗಳಿಂದ ಅಮಾನತುಗೊಂಡಿರುವುದು ಭಾರತ ಎದುರಿಸುತ್ತಿರುವ ಮತ್ತೊಂದು ಸಮಸ್ಯೆಯಾಗಿದೆ.

2011ರ ಚೊಚ್ಚಲ ಆವೃತ್ತಿಯ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಪ್ರಶಸ್ತಿಯನ್ನು ಜಯಿಸಿದ್ದ ಭಾರತ ಪ್ರಸ್ತುತ ಟೂರ್ನಿಯಲ್ಲಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಕೊರಿಯಾ ಹಾಗೂ ಆತಿಥೇಯ ಮಲೇಷ್ಯಾ ನಡುವಿನ ಕೊನೆಯ ಲೀಗ್ ಪಂದ್ಯದ ತನಕ ಭಾರತದ ಸೆಮಿಫೈನಲ್ ಎದುರಾಳಿ ಯಾರೆಂದು ದೃಢಪಟ್ಟಿರಲಿಲ್ಲ.

 ಅಂಕಪಟ್ಟಿಯಲ್ಲಿ 2ನೆ ಸ್ಥಾನದಲ್ಲಿರುವ ಬಲಿಷ್ಠ ಮಲೇಷ್ಯಾದ ವಿರುದ್ಧ 1-1 ಗೋಲುಗಳಿಂದ ಡ್ರಾ ಸಾಧಿಸಿರುವ ಯುವ ಆಟಗಾರರನ್ನು ಒಳಗೊಂಡ ಕೊರಿಯಾ ಭಾರತಕ್ಕೆ ಸವಾಲಾಗಬಹುದು.

 ‘‘ದಕ್ಷಿಣ ಕೊರಿಯಾ ಶ್ರೇಷ್ಠ ತಂಡ. ಆ ತಂಡ ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದೆ. ಮಲೇಷ್ಯಾ ವಿರುದ್ಧ ಆ ತಂಡದ ಪ್ರದರ್ಶನವನ್ನು ನಾವು ನೋಡಿದ್ದೇವೆ. ಕೊರಿಯಾದ ಡಿಫೆನ್ಸ್ ವಿಭಾಗ ಬಲಿಷ್ಠವಾಗಿದೆ. ಗೋಲ್‌ಕೀಪರ್ ಶ್ರೀಜೇಶ್ ಮಂಡಿನೋವಿನಿಂದ ಚೇತರಿಸಿಕೊಳ್ಳುತ್ತಿದ್ದು, ಕೊರಿಯಾ ವಿರುದ್ಧ ಪಂದ್ಯದಲ್ಲಿ ಆಡುವ ವಿಶ್ವಾಸವಿದೆ. ಆಕಾಶ್ ಚಿಕ್ಟೆ ಉತ್ತಮ ಮೀಸಲು ಗೋಲ್‌ಕೀಪರ್ ಆಗಿದ್ದಾರೆ’’ಎಂದು ಭಾರತದ ಕೋಚ್ ರೊಲ್ಯಾಂಟ್ ಒಲ್ಟಮನ್ಸ್ ಹೇಳಿದ್ದಾರೆ.

  ಭಾರತವು ರೂಪಿಂದರ್ ಪಾಲ್ ಸಿಂಗ್ ಅವರ ಯಶಸ್ವಿ ಪ್ರದರ್ಶನದ ಲಾಭ ಪಡೆಯಲು ಎದುರು ನೋಡುತ್ತಿದೆ. ಸಿಂಗ್ ಟೂರ್ನಿಯಲ್ಲಿ ಈ ತನಕ ಗರಿಷ್ಠ 10 ಗೋಲುಗಳನ್ನು ಬಾರಿಸಿ ಗಮನ ಸೆಳೆದಿದ್ದಾರೆ. ಪಾಕಿಸ್ತಾನದ ಮುಹಮ್ಮದ್ ಅಲೀಮ್ ಬಿಲಾಲ್, ಮಲೇಷ್ಯಾದ ಫೈಝಲ್ ಸಾರಿ ಹಾಗೂ ಜಪಾನ್‌ನ ಕೆಂಟ ಟನಕಾ ತಲಾ 6 ಗೋಲುಗಳನ್ನು ಬಾರಿಸಿ ಎರಡನೆ ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News