ಭಾರತದಲ್ಲಿ ನಡೆಯುವ ಜೂನಿಯರ್ ವಿಶ್ವಕಪ್‌ಗೆ ಪಾಕ್ ಸಿದ್ಧತೆ:ಪಿಎಚ್‌ಎಫ್
ಕ್ವಾಂಟನ್(ಮಲೇಷ್ಯಾ), ಅ.28: ಭಾರತದ ಲಕ್ನೋ ನಗರದಲ್ಲಿ ನಡೆಯಲಿರುವ ಜೂನಿಯರ್ ವಿಶ್ವಕಪ್‌ಗೆ ಸಜ್ಜಾಗಲು ನಮ್ಮ ತಂಡ ಕಠಿಣ ತರಬೇತಿಯಲ್ಲಿ ನಿರತವಾಗಿದೆ. ಆದರೆ, ಟೂರ್ನಿಯಲ್ಲಿ ಭಾಗವಹಿಸಲು ಸರಕಾರದ ಅನುಮತಿಗಾಗಿ ಕಾಯುತ್ತಿದ್ದೇವೆ ಎಂದು ಪಾಕಿಸ್ತಾನ ಹಾಕಿ ಫೆಡರೇಶನ್(ಪಿಎಚ್‌ಎಫ್) ತಿಳಿಸಿದೆ.
‘‘ಡಿ.8 ರಿಂದ 18ರ ತನಕ ಭಾರತದಲ್ಲಿ ನಡೆಯಲಿರುವ ಜೂನಿಯರ್ ಹಾಕಿ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಭಾಗವಹಿಸುವ ಬಗ್ಗೆ ಮಾಧ್ಯಮದಲ್ಲಿ ಅನಗತ್ಯ ವಿವಾದ ಸೃಷ್ಟಿಸಲಾಗಿದೆ. ಟೂರ್ನಿ ಆರಂಭವಾಗಲು ಇನ್ನೂ ಆರು ವಾರ ಬಾಕಿ ಉಳಿದಿದ್ದು, ನಮ್ಮ ತಂಡ ಟೂರ್ನಿಗೆ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ’’ ಎಂದು ನಾಲ್ಕನೆ ಚಾಂಪಿಯನ್ಸ್ ಟ್ರೋಫಿ ನಡೆಯುತ್ತಿರುವ ಮಲೇಷ್ಯಾದಲ್ಲಿರುವ ಪಿಎಚ್‌ಎಫ್ ಕಾರ್ಯದರ್ಶಿ ಶಹಬಾಝ್ ಅಹ್ಮದ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
‘‘ಟೂರ್ನಿ ಆರಂಭವಾಗಲು ಇನ್ನೂ ಒಂದೂವರೆ ತಿಂಗಳು ಬಾಕಿ ಇದ್ದು, ನಾವು ಸರಕಾರದ ಅನುಮತಿಗಾಗಿ ಅರ್ಜಿ ಸಲ್ಲಿಸಿದ್ದೇವೆ. ಟೂರ್ನಿಯಲ್ಲಿ ಭಾಗವಹಿಸಲು ವಿದೇಶಕ್ಕೆ ತೆರಳುವಾಗ ಅರ್ಜಿ ಸಲ್ಲಿಸುವುದು ವಾಡಿಕೆ. ನಮ್ಮ ತಂಡ ತರಬೇತಿಯಲ್ಲಿ ತೊಡಗಿದ್ದು, ಭಾರತಕ್ಕೆ ಪ್ರಯಾಣಿಸುವ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಪಾಕಿಸ್ತಾನ ತಂಡಕ್ಕೆ ವೀಸಾ ಪಡೆಯುವುದು ಸಮಸ್ಯೆಯಾಗಿ ಪರಿಣಮಿಸದು. ಈ ವಿಷಯ ಬೇಗನೆ ಇತ್ಯರ್ಥವಾಗಲಿದೆ’’ ಎಂದು ಮಾಜಿ ನಾಯಕ ಅಹ್ಮದ್ ತಿಳಿಸಿದರು.
1979ರಿಂದ ಆರಂಭವಾಗಿರುವ ಜೂನಿಯರ್ ಹಾಕಿ ವಿಶ್ವಕಪ್‌ನ್ನು ಪಾಕಿಸ್ತಾನ ತಂಡ ಎರಡು ಬಾರಿ ಗೆದ್ದುಕೊಂಡಿದೆ.