×
Ad

ಕಡ್ಡಾಯ ಹಿಜಾಬ್ ವಿರೋಧಿಸಿ ಸ್ಪರ್ಧೆಯಿಂದ ಹಿಂದೆ ಸರಿದ ಹೀನಾ ಸಿಧು

Update: 2016-10-29 15:03 IST

ಬೆಂಗಳೂರು, ಅ.29: ಭಾರತದ ಪ್ರತಿಭಾನ್ವಿತ ಶೂಟರ್ ಹಾಗೂ ಹಾಲಿ ಏಷ್ಯನ್ ಚಾಂಪಿಯನ್ ಹೀನಾ ಸಿದ್ದು ಅವರು ಟೆಹ್ರಾನ್ ನಲ್ಲಿ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಏಷ್ಯನ್ ಏರ್ ಗನ್ ಶೂಟಿಂಗ್ ಚಾಂಪಿಯನ್ ಶಿಪ್ ನಿಂದ ಹಿಂದೆ ಸರಿದಿದ್ದಾರೆ. ಅಲ್ಲಿ ಮಹಿಳಾ ಸ್ಪರ್ಧಿಗಳಿಗೆ ವಸ್ತ್ರ ಸಂಹಿತೆಯ ಭಾಗವಾಗಿ ಹಿಜಬ್ ಧರಿಸುವುದು ಕಡ್ಡಾಯವಾಗಿರುವುದೇ ಅವರ ಈ ನಿರ್ಧಾರಕ್ಕೆ ಕಾರಣ.
‘‘ವಿದೇಶಿ ಸ್ಪರ್ಧಾಳುಗಳಿಗೆ ಹಿಜಬ್ ಧರಿಸುವಂತೆ ಬಲವಂತಪಡಿಸುವುದು ಸರಿಯಲ್ಲ. ಅದಕ್ಕಾಗಿಯೇ ನಾನು ಹಿಂದೆ ಸರಿದೆ’’ ಎಂದು ಹೀನಾ ಹೇಳುತ್ತಾರೆ. ಇತರ ದೇಶದ ಸ್ಪರ್ಧಾಳುಗಳು ಇರಾನ್ ಪದ್ಧತಿಯಂತೆ ಹಿಜಬ್ ಧರಿಸಲು ಒಪ್ಪಿದ್ದಾರಲ್ಲ ಎಂಬ ಪ್ರಶ್ನೆಗೆ, ಇದು ನನ್ನ ವೈಯಕ್ತಿಕ ನಿರ್ಧಾರ ಎಂದರು. ಇನ್ನೊಬ್ಬರ ಧಾರ್ಮಿಕ ಪದ್ಧತಿಗಳನ್ನು ನನ್ನ ಮೇಲೆ ಹೇರುವುದಾದಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ಎರಡು ವರ್ಷಗಳ ಹಿಂದೊಮ್ಮೆ ಕೂಡ ನಾನು ಹೀಗೆಯೇ ಮಾಡಿದ್ದೆ. ಇರಾನ್ ಮಾತ್ರ ಇಂತಹ ವಸ್ತ್ರ ಸಂಹಿತೆ ಪಾಲಿಸಬೇಕೆಂದು ಹೇಳುವ ದೇಶವಾಗಿದೆ ಎಂದು ಹೀನಾ ಹೇಳುತ್ತಾರೆ.
ತಾನು ಈ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಈಗಾಗಲೇ ರಾಷ್ಟ್ರೀಯ ರೈಫಲ್ ಅಸೋಸಿಯೇಶನ್ನಿಗೆ ಮಾಹಿತಿ ನೀಡಿದ್ದಾಗಿ ಹೀನಾ ಹೇಳಿದ್ದಾರೆ.
ತಾನು ಮುಂದೆ ಡಿಸೆಂಬರಿನಲ್ಲಿ ಪುಣೆಯಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಚಾಂಪಿಯನ್ ಶಿಪ್ ಹಾಗೂ ಫೆಬ್ರವರಿಯಲ್ಲಿ ನಡೆಯುವ ವಿಶ್ವ ಕಪ್ ಸ್ಪರ್ಧೆಯ ತಯಾರಿಗಾಗಿ ಹೆಚ್ಚಿನ ಗಮನ ನೀಡುವುದಾಗಿ ಅವರು ತಿಳಿಸಿದ್ದಾರೆ.
ಮಾಜಿ ವಿಶ್ವ ನಂ.1 ಏರ್ ಗನ್ ಶೂಟರ್ ಆಗಿರುವ ಹೀನಾ ಅವರ ಒಲಿಂಪಿಕ್ಸ್ ಸಾಧನೆ ಅಷ್ಟೊಂದು ಹೇಳಿಕೊಳ್ಳುವಂತಹುದ್ದಾಗಿರಲಿಲ್ಲ.
ಹೀನಾ ಹೊರತಾಗಿ ಇರಾನ್ ನಲ್ಲಿನ ಸ್ಪರ್ಧೆಯಲ್ಲಿ ಭಾಗವಹಿಸುವ ಭಾರತದ ಎಲ್ಲಾ ಸ್ಪರ್ಧಾಳುಗಳು ಹಿಜಬ್ ಧರಿಸಲು ಒಪ್ಪಿದ್ದಾರೆ ಎಂದು ರಾಷ್ಟ್ರೀಯ ರೈಫಲ್ ಅಸೋಸಿಯೇಶನ್ ಅಧ್ಯಕ್ಷ ರಾಣೀಂದರ್ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News