ಹಾಕಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ: ಇಂದು ಭಾರತ- ಪಾಕ್ ನಡುವೆ ಫೈನಲ್

Update: 2016-10-30 02:49 GMT

ಕ್ವಾಂಟಾನ್, ಅ.30: ಪ್ರತಿಷ್ಠಿತ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾಗಿರುವ ಭಾರತ ಮತ್ತು ಪಾಕಿಸ್ತಾನ ಮತ್ತೆ ಮುಖಾಮುಖಿಯಾಗಲಿವೆ. ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಕೊರಿಯಾ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ಸೋಲಿಸಿದ ಭಾರತ ತಂಡ ಇಂದು ನಡೆಯುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ.

ಪಂದ್ಯದ ನಿಗದಿ ಅವಧಿ ಮುಗಿದಾಗ ಭಾರತ ಹಾಗೂ ದಕ್ಷಿಣ ಕೊರಿಯಾ ತಲಾ ಎರಡು ಗೋಲುಗಳನ್ನು ಗಳಿಸಿದ್ದವು. ಫಲಿತಾಂಶ ನಿರ್ಧರಿಸಲು ನಡೆದ ಪೆನಾಲ್ಟಿ ಶೂಟೌಟ್‌ನಲ್ಲಿ ಕೊರಿಯಾವನ್ನು 5-4 ಗೋಲುಗಳಿಂದ ಸೋಲಿಸಿ ಭಾರತ ರೋಮಾಂಚಕ ಜಯ ಪಡೆಯಿತು. ಕೊರಿಯಾದ ಕೊನೆಯ ಪ್ರಯತ್ನವನ್ನು ತಡೆಯುವಲ್ಲಿ ಯಶಸ್ವಿಯಾದ ಗೋಲ್‌ಕೀಪರ್ ಪಿ.ಆರ್.ಶ್ರೀಜೇಶ್ ಪಂದ್ಯದ ಹೀರೊ ಎನಿಸಿಕೊಂಡರು. ಮಣಿಗಂಟು ಗಾಯದಿಂದ ಚೇರಿಸಿಕೊಳ್ಳುತ್ತಿದ್ದ ಶ್ರೀಜೇಶ್ ಶನಿವಾರದ ಸೆಮಿಫೈನಲ್ ಪಂದ್ಯದಲ್ಲಿ ಮಿಂಚಿ ಗಮನ ಸೆಳೆದರು. ಅಂತಿಮ ಪ್ರಯತ್ನದಲ್ಲಿ ಕೊರಿಯಾದ ಲೀ ಡಿಯೆ ಯೋಲ್ ಪ್ರಯತ್ನವನ್ನು ವಿಫಲಗೊಳಿಸುವ ಮೂಲಕ ಭಾರತದ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದರು.

ಇನ್ನೊಂದು ಸೆಮಿಫೈನಲ್‌ನಲ್ಲಿ ಮಲೇಷ್ಯಾ ತಂಡವನ್ನು ಸೋಲಿಸಿ ಪಾಕಿಸ್ತಾನ ಫೈನಲ್ ಪ್ರವೇಶಿಸಿದೆ. ಆರಂಭಿಕ ವರ್ಷದ ಏಷ್ಯನ್ ಚಾಂಪಿಯನ್ ಭಾರತ ಇದೀಗ ನಾಲ್ಕನೇ ಚಾಂಪಿಯನ್‌ಶಿಪ್‌ನಲ್ಲೂ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಭಾರತದ ಮೂರನೇ ಬಾರಿ ಫೈನಲ್ ಪ್ರವೇಶಿಸಿದ್ದು, 2012ರಲ್ಲಿ ಪಾಕಿಸ್ತಾನಕ್ಕೆ ಫೈನಲ್‌ನಲ್ಲಿ ಶರಣಾಗಿತ್ತು.

ದಕ್ಷಿಣ ಕೊರಿಯಾ ಯುವಪಡೆ ಭಾರತಕ್ಕೆ ನಿಕಟ ಪೈಪೋಟಿ ನೀಡಿತು. ತಲ್ವೀಂದರ್ ಸಿಂಗ್ 15ನೇ ನಿಮಿಷದಲ್ಲೇ ಭಾರತಕ್ಕೆ ಮುನ್ನಡೆ ಗಳಿಸಿಕೊಟ್ಟರು. 21ನೇ ನಿಮಿಷದಲ್ಲಿ ಸಮಬಲ ಸಾಧಿಸಿದ ಕೊರಿಯಾ, 53ನೇ ನಿಮಿಷದಲ್ಲಿ ಪೆನಾಲ್ಟಿ ಹೊಡೆತವನ್ನು ಗೋಲಾಗಿ ಪರಿವರ್ತಿಸಿ ಮುನ್ನಡೆ ಸಾಧಿಸಿದರು. ರಮಣ್‌ದೀಪ್ ಎರಡೇ ನಿಮಿಷದಲ್ಲಿ ಮತ್ತೊಂದು ಗೋಲು ಸಾಧಿಸಿ ಸಮಬಲ ಸ್ಥಾಪಿಸಿದರು. ಇದರಿಂದ ಶೂಟೌಟ್‌ಗೆ ಮೊರೆಹೋಗಬೇಕಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News