ಸತತ ಎರಡನೆ ವರ್ಷ ನಂ.1 ಸ್ಥಾನ ಕಾಯ್ದುಕೊಂಡ ಸಾನಿಯಾ

Update: 2016-10-31 18:11 GMT

 ಹೈದರಾಬಾದ್, ಅ.31: ಸಿಂಗಾಪುರದಲ್ಲಿ ನಡೆದ ಡಬ್ಲುಟಿಎ ಫೈನಲ್ಸ್ ಟೂರ್ನಿಯಲ್ಲಿ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ವಿಫಲರಾದರೂ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಝಾ ಸತತ ಎರಡನೆ ವರ್ಷ ಮಹಿಳೆಯರ ಡಬಲ್ಸ್ ರ್ಯಾಂಕಿಂಗ್‌ನಲ್ಲಿ ಅಗ್ರಮಾನ್ಯ ಸ್ಥಾನ ಉಳಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ.

ಹಾಲಿ ಚಾಂಪಿಯನ್ ಸಾನಿಯಾ ಹಾಗೂ ಸ್ವಿಸ್‌ನ ಮಾರ್ಟಿನಾ ಹಿಂಗಿಸ್ ರವಿವಾರ ನಡೆದ ಡಬ್ಲುಟಿಎ ಫೈನಲ್ಸ್‌ನ ಸೆಮಿ ಫೈನಲ್ ಪಂದ್ಯದಲ್ಲಿ ಎಕಟೆರಿನಾ ಮಕರೋವಾ ಹಾಗೂ ಎಲೆನಾ ವೆಸ್ನಿನಾ ವಿರುದ್ಧ ಶರಣಾಗಿದ್ದರು.

ಮಕರೋವಾ ಹಾಗೂ ವೆಸ್ನಿನಾ ಜೋಡಿ ಫೈನಲ್‌ನಲ್ಲಿ ಬೆಥಾನಿ ಮ್ಯಾಟೆಕ್ ಸ್ಯಾಂಡ್ಸ್ ಹಾಗೂ ಲೂಸಿ ಸಫರೋವಾರನ್ನು ಮಣಿಸುವ ಮೂಲಕ ಡಬಲ್ಸ್ ಪ್ರಶಸ್ತಿಯನ್ನು ಎತ್ತಿಹಿಡಿದಿದ್ದರು. ಮ್ಯಾಟೆಕ್-ಸ್ಯಾಂಡ್ಸ್‌ಗೆ ಅಗ್ರ ಸ್ಥಾನವನ್ನು ನಿರಾಕರಿಸಿದ್ದರು.

‘‘ನನಗೆ ತುಂಬಾ ಸಂತೋಷವಾಗಿದೆ. ಸತತ ಎರಡನೆ ವರ್ಷ ಡಬಲ್ಸ್‌ನಲ್ಲಿ ನಂ.1 ಸ್ಥಾನ ಪಡೆದಿರುವುದು ಅನನ್ಯ ಗೌರವ. ನನಗೆ ಈ ವರ್ಷ ಒಂದು ಅದ್ಭುತ ಯಾನವಾಗಿತ್ತು’’ ಎಂದು ಸುದ್ದಿಸಂಸ್ಥೆಗೆ ಸಾನಿಯಾ ತಿಳಿಸಿದ್ದಾರೆ.

ಹೈದರಾಬಾದ್‌ನ ಟೆನಿಸ್ ತಾರೆ ಸಾನಿಯಾ ಈ ವರ್ಷ ಹಿಂಗಿಸ್ ಜೊತೆಗೂಡಿ ಆಸ್ಟ್ರೇಲಿಯನ್ ಓಪನ್ ಹಾಗೂ ಬಾರ್ಬೊರ ಸ್ಟೈಕೋವಾರೊಂದಿಗೆ ಸಿನ್ಸಿನಾಟಿ ಮಾಸ್ಟರ್ಸ್‌ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು. ಸಿಂಗಾಪುರದಲ್ಲಿ ನಡೆದ ಡಬ್ಲುಟಿಎ ಫೈನಲ್ಸ್‌ನಲ್ಲಿ ಹಿಂಗಿಸ್‌ರೊಂದಿಗೆ ಮತ್ತೊಮ್ಮೆ ಡಬಲ್ಸ್ ಪಂದ್ಯವನ್ನು ಆಡಿದ್ದರೂ ಪ್ರಶಸ್ತಿ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.

‘‘ನನ್ನ ಪಾಲಿಗೆ ಇದೊಂದು ನಂಬಲಸಾಧ್ಯ ಪ್ರಯಾಣವಾಗಿತ್ತು. ಅಂತಹ ಕನಸು ಕಾಣುವುದು ಕಷ್ಟಕರವಾಗಿತ್ತು. ವಿಶ್ವದಲ್ಲಿ ನಂ.1 ಸ್ಥಾನಕ್ಕೆ ತಲುಪುವುದು ಒಂದು ದೊಡ್ಡ ಸಾಧನೆ. ನಂ.1 ಸ್ಥಾನವನ್ನು ಸತತ ಎರಡನೆ ವರ್ಷ ಕಾಯ್ದುಕೊಂಡಿರುವುದು ಅತ್ಯಂತ ಕಠಿಣ ಕೆಲಸವಾಗಿದೆ. ಮಹಿಳೆಯರ ವಿಭಾಗದಲ್ಲಿ ಮೂವರು ಲೆಜಂಡ್‌ಗಳಾದ ನವ್ರಾಟಿಲೋವಾ, ಬ್ಲಾಕ್ ಹಾಗೂ ಹ್ಯೂಬರ್ ಮಾತ್ರ ಮಹಿಳೆಯರ ಡಬಲ್ಸ್ ಇತಿಹಾಸದಲ್ಲಿ ದೀರ್ಘಕಾಲ ಅಗ್ರ ಸ್ಥಾನದಲ್ಲಿದ್ದರು’’ ಎಂದು ಸತತ 80ನೆ ವಾರ ವಿಶ್ವ ಡಬಲ್ಸ್ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿರುವ ಸಾನಿಯಾ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News