×
Ad

ಶಾರ್ಜಾ ಟೆಸ್ಟ್: ವೆಸ್ಟ್‌ಇಂಡೀಸ್‌ಗೆ ಭರ್ಜರಿ ಜಯ

Update: 2016-11-03 23:26 IST

ಶಾರ್ಜಾ,ನ.3: ಕ್ರೆಗ್ ಬ್ರಾತ್‌ವೈಟ್(ಅಜೇಯ 60) ಹಾಗೂ ಶೇನ್ ಡೌರಿಚ್(ಅಜೇಯ 60) ಆಕರ್ಷಕ ಅರ್ಧಶತಕದ ನೆರವಿನಿಂದ ವೆಸ್ಟ್‌ಇಂಡೀಸ್ ತಂಡ ಪಾಕಿಸ್ತಾನ ವಿರುದ್ಧದ ಮೂರನೆ ಟೆಸ್ಟ್ ಪಂದ್ಯವನ್ನು 5 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ ಪಾಕ್‌ಗೆ ಐತಿಹಾಸಿಕ ಸಾಧನೆಗೆ ಅಡ್ಡಿಯಾಯಿತು.

 ಪಾಕ್ ತಂಡ ವಿಂಡೀಸ್ ವಿರುದ್ಧದ ಟ್ವೆಂಟಿ-20 ಹಾಗೂ ಏಕದಿನ ಸರಣಿಯಲ್ಲಿ 3-0 ಅಂತರದಿಂದ ಕ್ಲೀನ್‌ಸ್ವೀಪ್ ಸಾಧಿಸಿತ್ತು. ಟೆಸ್ಟ್ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದ್ದ ಪಾಕ್ ಹ್ಯಾಟ್ರಿಕ್ ಕ್ಲೀನ್‌ಸ್ವೀಪ್ ಸಾಧಿಸುವ ವಿಶ್ವಾಸದಲ್ಲಿತ್ತು. ಆದರೆ, ವಿಂಡೀಸ್ ಇದಕ್ಕೆ ಅವಕಾಶ ನೀಡಲಿಲ್ಲ.

ವಿಂಡೀಸ್ 2012ರ ಬಳಿಕ ವಿದೇಶಿ ನೆಲದಲ್ಲಿ ದಾಖಲಿಸಿದ ಮೊದಲ ಗೆಲುವು ಇದಾಗಿದೆ. ಈ ಗೆಲುವಿನೊಂದಿಗೆ ವಿಂಡೀಸ್ ತಂಡ ಪಾಕ್ ವಿರುದ್ಧ ಕ್ಲೀನ್‌ಸ್ವೀಪ್ ಮುಖಭಂಗದಿಂದ ಪಾರಾಗಿದೆ. ಮಾತ್ರವಲ್ಲ 14 ಪಂದ್ಯಗಳ ಸೋಲಿನಿಂದ ಹೊರ ಬಂದಿದೆ. ಜೇಸನ್ ಹೋಲ್ಡರ್ ನಾಯಕತ್ವದಲ್ಲಿ ಚೊಚ್ಚಲ ಜಯ ದಾಖಲಿಸಿದೆ.

 ಮೊದಲೆರಡು ಪಂದ್ಯಗಳನ್ನು ಜಯಿಸಿದ್ದ ಪಾಕ್ ಟೆಸ್ಟ್ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ. ಅಜೇಯ 142 ಹಾಗೂ ಅಜೇಯ 60 ರನ್ ಗಳಿಸಿದ ಬ್ರಾತ್‌ವೈಟ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಸರಣಿಯಲ್ಲಿ ಒಟ್ಟು 21 ವಿಕೆಟ್‌ಗಳನ್ನು ಕಬಳಿಸಿದ ಪಾಕ್‌ನ ಲೆಗ್-ಸ್ಪಿನ್ನರ್ ಯಾಸಿರ್ ಷಾ ಸರಣಿಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದಾರೆ.

 ಗೆಲ್ಲಲು 153 ರನ್ ಗುರಿ ಪಡೆದಿದ್ದ ವಿಂಡೀಸ್ 5 ವಿಕೆಟ್ ನಷ್ಟಕ್ಕೆ 114 ರನ್‌ನಿಂದ ಐದನೆ ದಿನದಾಟ ಮುಂದುವರಿಸಿತು. ಬ್ರಾತ್‌ವೈಟ್ ಹಾಗೂ ಡೌರಿಚ್ 6ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 87 ರನ್ ಸೇರಿಸಿದರು. ವಿಂಡೀಸ್ ವಿದೇಶಿ ನೆಲದಲ್ಲಿ ಪಾಕ್ ವಿರುದ್ಧ 26 ವರ್ಷಗಳ ಬಳಿಕ ಚೊಚ್ಚಲ ಗೆಲುವು ದಾಖಲಿಸಿದೆ.

ವಿಂಡೀಸ್ ನಾಲ್ಕನೆ ದಿನದಾಟವಾದ ಬುಧವಾರ 67 ರನ್‌ಗೆ 5 ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ಆಗ ಜೊತೆಯಾದ ಬ್ರಾತ್‌ವೈಟ್-ಡೌರಿಚ್ ಜೋಡಿ ತಂಡಕ್ಕೆ ಅಪರೂಪದ ಗೆಲುವು ತಂದರು.

ವಿಶ್ವದ ನಂ.2ನೆ ತಂಡ ಪಾಕ್ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿರುವ ವಿಂಡೀಸ್‌ಗೆ ಈ ಗೆಲುವು ಹೊಸ ಹುಮ್ಮಸ್ಸು ತಂದಿದೆ.

ಐದನೆ ಹಾಗೂ ಅಂತಿಮ ದಿನದಾಟವಾದ ಗುರುವಾರ ವಿಂಡೀಸ್ ಗೆಲುವಿಗೆ 39 ರನ್ ಅಗತ್ಯವಿತ್ತು. 12ನೆ ಅರ್ಧಶತಕ(60ರನ್, 109 ಎಸೆತ, 6 ಬೌಂಡರಿ) ಬಾರಿಸಿದ ಬ್ರಾತ್‌ವೈಟ್ ವಿಂಡೀಸ್‌ನ್ನು ಗೆಲುವಿನ ದಡ ಸೇರಿಸಿದರು.

ಅಂಕಿ-ಅಂಶ

 1: ಬ್ರಾತ್‌ವೈಟ್ ಟೆಸ್ಟ್ ಕ್ರಿಕೆಟ್‌ನ ಎರಡೂ ಇನಿಂಗ್ಸ್‌ನಲ್ಲಿ ಅಜೇಯವಾಗುಳಿದ ಮೊದಲ ಆರಂಭಿಕ ಬ್ಯಾಟ್ಸ್‌ಮನ್. ಬ್ರಾತ್‌ವೈಟ್ ಮೊದಲ ಇನಿಂಗ್ಸ್‌ನಲ್ಲಿ ಅಜೇಯ 142 ಹಾಗೂ 2ನೆ ಇನಿಂಗ್ಸ್‌ನಲ್ಲಿ ಅಜೇಯ 61 ರನ್ ಗಳಿಸಿದ್ದರು. ಯುಎಇಯಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ.

1990: ವೆಸ್ಟ್‌ಇಂಡೀಸ್ 26 ವರ್ಷಗಳ ಬಳಿಕ ಪಾಕ್ ವಿರುದ್ಧ ವಿದೇಶಿ ನೆಲದಲ್ಲಿ ಟೆಸ್ಟ್ ಪಂದ್ಯ ಜಯಿಸಿತು. 1990ರಲ್ಲಿ ಕೊನೆಯ ಬಾರಿ ಫೈಸ್ಲಾಬಾದ್‌ನಲ್ಲಿ 7 ವಿಕೆಟ್‌ಗಳ ಜಯ ಸಾಧಿಸಿತ್ತು.

3: ಕ್ರೆಗ್ ಬ್ರಾತ್‌ವೈಟ್ ಪಾಕಿಸ್ತಾನ ವಿರುದ್ಧ ವಿದೇಶಿ ನೆಲದಲ್ಲಿ ಶತಕ ಬಾರಿಸಿದ ವಿಂಡೀಸ್‌ನ ಮೂರನೆ ಆರಂಭಿಕ ದಾಂಡಿಗನಾಗಿದ್ದಾರೆ. 2: ಪಾಕ್ ವೇಗಿ ವಹಾಬ್ ರಿಯಾಝ್ ಎರಡನೆ ಬಾರಿ ಐದು ವಿಕೆಟ್ ಗೊಂಚಲು(5/88) ಪಡೆದರು. ಆರು ವರ್ಷಗಳ ಹಿಂದೆ ಇಂಗ್ಲೆಂಡ್ ವಿರುದ್ಧ ಓವಲ್‌ನಲ್ಲಿ ಆಡಿದ್ದ ಚೊಚ್ಚಲ ಪಂದ್ಯದಲ್ಲಿ ಐದು ವಿಕೆಟ್ ಪಡೆದಿದ್ದರು.

4: ಪಾಕಿಸ್ತಾನ ಶಾರ್ಜಾದಲ್ಲಿ ಆಡಿರುವ 9 ಪಂದ್ಯಗಳ ಪೈಕಿ ನಾಲ್ಕನೆ ಬಾರಿ ಸೋತಿದೆ.

ಸಂಕ್ಷಿಪ್ತ ಸ್ಕೋರ್

ಪಾಕಿಸ್ತಾನ ಪ್ರಥಮ ಇನಿಂಗ್ಸ್: 281 ರನ್

ಪಾಕಿಸ್ತಾನ ದ್ವಿತೀಯ ಇನಿಂಗ್ಸ್: 208 ರನ್

ವೆಸ್ಟ್‌ಇಂಡೀಸ್ ಪ್ರಥಮ ಇನಿಂಗ್ಸ್: 337 ರನ್

ವೆಸ್ಟ್‌ಇಂಡೀಸ್ ದ್ವಿತೀಯ ಇನಿಂಗ್ಸ್: 154/5

(ಬ್ರಾತ್‌ವೈಟ್ ಅಜೇಯ 60, ಡೌರಿಚ್ ಅಜೇಯ 60, ಯಾಸಿರ್ ಷಾ 3-40, ರಿಯಾಝ್ 2-46)

ಪಂದ್ಯಶ್ರೇಷ್ಠ: ಬ್ರಾತ್‌ವೈಟ್

ಸರಣಿಶ್ರೇಷ್ಠ: ಯಾಸಿರ್ ಷಾ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News