×
Ad

ಪ್ರಥಮ ಟೆಸ್ಟ್: ಮೊದಲ ದಿನ ಆಸ್ಟ್ರೇಲಿಯ ಮೆರೆದಾಟ

Update: 2016-11-03 23:29 IST

ಪರ್ತ್,ನ.3: ದಕ್ಷಿಣ ಆಫ್ರಿಕ ವಿರುದ್ಧ ಗುರುವಾರ ಇಲ್ಲಿ ಆರಂಭವಾದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಆತಿಥೇಯ ಆಸ್ಟ್ರೇಲಿಯ ಉತ್ತಮ ಪ್ರದರ್ಶನದಿಂದ ಮೆರೆದಾಡಿದೆ.

ಟಾಸ್ ಜಯಿಸಿದ ಆಫ್ರಿಕ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ವೇಗ ಹಾಗೂ ಬೌನ್ಸ್‌ಗೆ ಹೆಸರುವಾಸಿಯಾಗಿರುವ ವಾಕಾ ಪಿಚ್‌ನ ಲಾಭ ಎತ್ತಿದ ಸ್ಟಾರ್ಕ್, ಹೇಝಲ್‌ವುಡ್ ಹಾಗೂ ಪೀಡರ್ ಸಿಡ್ಲ್ ಆಫ್ರಿಕಕ್ಕೆ ಸವಾಲಾದರು. ಆಟ ಆರಂಭವಾಗಿ ಒಂದು ಗಂಟೆಯೊಳಗೆ ಆಫ್ರಿಕದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್‌ಗೆ ಕಳುಹಿಸಿದ ಆಸೀಸ್ ಪ್ರವಾಸಿ ತಂಡವನ್ನು ಕೇವಲ 242 ರನ್‌ಗೆ ಆಲೌಟ್ ಮಾಡಿತು. ಸ್ಟೀಫನ್ ಕುಕ್ ಹಾಗೂ ಹಾಶಿಮ್ ಅಮ್ಲ ಖಾತೆ ತೆರೆಯಲು ವಿಫಲರಾದರು.

ಒಂದು ಹಂತದಲ್ಲಿ 32 ರನ್‌ಗೆ 4 ವಿಕೆಟ್‌ಗಳ ಕಳೆದುಕೊಂಡಿದ್ದ ಆಫ್ರಿಕ ತಂಡದ ಪರ ಕ್ವಿಂಟನ್ ಡಿ ಕಾಕ್(84 ರನ್) ಹಾಗೂ ಟೆಂಬ ಬವುಮ(51) ಅರ್ಧಶತಕ ಬಾರಿಸಿ ತಂಡವನ್ನು ಆಧರಿಸಿದರು. ನಾಯಕ ಎಫ್‌ಡು ಪ್ಲೆಸಿಸ್ 37 ರನ್‌ಗೆ ಔಟಾಗುವ ಮೊದಲು ಬವುಮಾರೊಂದಿಗೆ 49 ರನ್ ಹಾಗೂ ಡಿಕಾಕ್‌ರೊಂದಿಗೆ 71 ರನ್ ಜೊತೆಯಾಟ ನಡೆಸಿದರು.

ಕಾಲಿನ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ವಾಪಸಾಗಿರುವ ಎಡಗೈ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಇನಿಂಗ್ಸ್‌ನ ನಾಲ್ಕನೆ ಎಸೆತದಲ್ಲಿ ಆರಂಭಿಕ ಆಟಗಾರ ಸ್ಟೀಫನ್ ಕುಕ್(0) ವಿಕೆಟ್ ಉಡಾಯಿಸಿದರು. ಸ್ಟಾರ್ಕ್ 71 ರನ್‌ಗೆ ಒಟ್ಟು 4 ವಿಕೆಟ್‌ಗಳನ್ನು ಉರುಳಿಸಿ ಗಮನ ಸೆಳೆದರು.

ಸ್ಟಾರ್ಕ್‌ಗೆ ಸಹ ಆಟಗಾರ ಜೊಶ್ ಹೇಝಲ್‌ವುಡ್(3-70) ಉತ್ತಮ ಸಾಥ್ ನೀಡಿದರು. ಮಾರ್ಷ್ ಸಹೋದರರಾದ ಮಿಚೆಲ್ ಹಾಗೂ ಶಾನ್ ತವರು ಮೈದಾನದಲ್ಲಿ ಆಕರ್ಷಕ ಕ್ಯಾಚ್ ಪಡೆದು ಮಿಂಚಿದರು.

ಆಸ್ಟ್ರೇಲಿಯ ವಿಕೆಟ್ ನಷ್ಟವಿಲ್ಲದೆ 105 ರನ್:

ಮೊದಲ ಇನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯ ಮೊದಲ ದಿನದಾಟದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 105 ರನ್ ಗಳಿಸಿದೆ. ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್( ಅಜೇಯ 73) ಹಾಗೂ ಮಾರ್ಷ್(ಅಜೇಯ 29) ಏಕದಿನ ಶೈಲಿಯಲ್ಲಿ ಬ್ಯಾಟಿಂಗ್ ಮಾಡಿ ಉತ್ತಮ ಆರಂಭ ನೀಡಿದ್ದಾರೆ. ಈ ಜೋಡಿ ಮೊದಲ ವಿಕೆಟ್‌ಗೆ 105 ರನ್ ಸೇರಿಸಿದೆ. ಎಡಗೈ ಬ್ಯಾಟ್ಸ್‌ಮನ್ ವಾರ್ನರ್ 21ನೆ ಟೆಸ್ಟ್ ಅರ್ಧಶತಕ (73 ರನ್, 62 ಎಸೆತ, 13 ಬೌಂಡರಿ, 1 ಸಿಕ್ಸರ್) ಬಾರಿಸಿದರು.

ಸಂಕ್ಷಿಪ್ತ ಸ್ಕೋರ್

ದಕ್ಷಿಣ ಆಫ್ರಿಕ ಪ್ರಥಮ ಇನಿಂಗ್ಸ್:

63.4 ಓವರ್‌ಗಳಲ್ಲಿ 242 ರನ್‌ಗೆ ಆಲೌಟ್

(ಕ್ವಿಂಟನ್ ಡಿಕಾಕ್ 84, ಬವುಮ 51, ಡುಪ್ಲೆಸಿಸ್ 37, ಸ್ಟಾರ್ಕ್ 4-71, ಹೇಝಲ್‌ವುಡ್ 3-70,ಲಿಯೊನ್ 2-38)

ಆಸ್ಟ್ರೇಲಿಯ ಪ್ರಥಮ ಇನಿಂಗ್ಸ್:

21 ಓವರ್‌ಗಳಲ್ಲಿ 105/0

(ವಾರ್ನರ್ ಅಜೇಯ 73, ಮಾರ್ಷ್ ಅಜೇಯ 29)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News