ಒಲಿಂಪಿಕ್ಸ್ ಬಳಿಕ ಸಿಂಧು ಕಳಪೆ ಪ್ರದರ್ಶನ ನೀಡುತ್ತಿರುವುದೇಕೆ?
ಹೈದರಾಬಾದ್, ನ.3: ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧುಗೆ 2016ರ ಆಗಸ್ಟ್ ತಿಂಗಳು ವೃತ್ತಿಜೀವನದಲ್ಲಿ ಮರೆಯಲಾರದ ದಿನ. ಸಿಂಧು ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ ಭಾರತದ ಮೊದಲ ಮಹಿಳಾ ಆಟಗಾರ್ತಿ ಎನಿಸಿಕೊಳ್ಳುವುದರೊಂದಿಗೆ ಹೊಸ ಇತಿಹಾಸ ಬರೆದಿದ್ದರು.
ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಜಯಿಸಿದ್ದ ಸಿಂಧು ಇಡೀ ದೇಶದ ಐಕಾನ್ ಹಾಗೂ ಸ್ಟಾರ್ ಆಟಗಾರ್ತಿಯಾದರು. ಸಿಂಧು ಅವರು ಸೈನಾ ಬಳಿಕ ಒಲಿಂಪಿಕ್ಸ್ ಪದಕ ಜಯಿಸಿದ ಭಾರತದ ಎರಡನೆ ಬ್ಯಾಡ್ಮಿಂಟನ್ ಆಟಗಾರ್ತಿ.
ಒಲಿಂಪಿಕ್ಸ್ ಬಳಿಕ ಸಿಂಧು ಆಡಿರುವ ಎರಡು ಟೂರ್ನಿಗಳಲ್ಲಿ ಎರಡನೆ ಸುತ್ತಿನಲ್ಲಿ ಸೋತು ಭಾರೀ ನಿರಾಸೆಗೊಳಿಸಿದ್ದಾರೆ. ಡೆನ್ಮಾರ್ಕ್ ಓಪನ್ ಸಿಂಧು ಒಲಿಂಪಿಕ್ಸ್ ನಂತರ ಆಡಿದ ಮೊದಲ ಟೂರ್ನಿಯಾಗಿತ್ತು. ಆ ಟೂರ್ನಿಯ ಎರಡನೆ ಸುತ್ತಿನಲ್ಲಿ ಚೀನಾದ ಹೀ ಬಿಂಗ್‌ಜಿಯಾವೊ ವಿರುದ್ಧ 21-14, 21-15 ಗೇಮ್‌ಗಳ ಅಂತರದಿಂದ ಸೋತಿದ್ದರು.
ಫ್ರೆಂಚ್ ಸೂಪರ್ ಸರಣಿಯಲ್ಲೂ ಸಿಂಧು ಮತ್ತೊಮ್ಮೆ ಫ್ಲಾಪ್ ಆದರು. ಎರಡನೆ ಸುತ್ತಿನಲ್ಲಿ ಚೀನಾದ ಬಿಂಗ್‌ಜಿಯಾವೊ ವಿರುದ್ಧ 11-6 ಹಾಗೂ 17-19 ಅಂತರದಿಂದ ಸೋತರು.
ಒಂದೇ ತಿಂಗಳಲ್ಲಿ ಸಿಂಧು ಪ್ರದರ್ಶನದ ಮಟ್ಟ ಇಳಿಮುಖವಾಗಲು ಕಾರಣವೇನೆಂಬ ಪ್ರಶ್ನೆ ಎಲ್ಲರನ್ನು ಕಾಡಲಾರಂಭಿಸಿದೆ. ರಿಯೋ ಒಲಿಂಪಿಕ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಸಿಂಧು ಕಳೆದೆರಡು ಟೂರ್ನಿಗಳಲ್ಲಿ 2ನೆ ಸುತ್ತು ದಾಟಲು ವಿಫಲವಾಗಿದ್ದರು.
ಭಾರತದಲ್ಲಿ ಕ್ರಿಕೆಟ್‌ನ್ನು ಹೊರತುಪಡಿಸಿ ಒಲಿಂಪಿಕ್ಸ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್ ಎರಡು ಮುಖ್ಯ ಟೂರ್ನಿಯಾಗಿದೆ. ಸಿಂಧು ರಿಯೋ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದುಕೊಂಡು ತಾಯ್ನಿಡಿಗೆ ಬಂದಾಗ ದೇಶದೆಲ್ಲೆಡೆ ಸರಣಿಯಾಗಿ ಸನ್ಮಾನ ಸಮಾರಂಭ ಏರ್ಪಡಿಸಲಾಯಿತು.
ಹೈದರಾಬಾದ್ ಹಾಗೂ ಅರುಣಾಚಲ ಪ್ರದೇಶದಲ್ಲಿ ಗೆಲುವಿನ ರ್ಯಾಲಿ ನಡೆಸಿದ್ದ ಸಿಂಧು ಹಲವಾರು ಸನ್ಮಾನ ಕಾರ್ಯಕ್ರಮ ಹಾಗೂ ಸಂದರ್ಶನಗಳಲ್ಲಿ ಭಾಗವಹಿಸಿದ್ದರು. ಕೋಟ್ಯಂತರ ರೂ. ಬಹುಮಾನ ಸ್ವೀಕರಿಸಿದ್ದರು. ಸಚಿನ್ ತೆಂಡುಲ್ಕರ್‌ರಿಂದ ಬಿಎಂಡಬ್ಲು ಕಾರನ್ನು ಉಡುಗೊರೆಯಾಗಿ ಪಡೆದಿದ್ದರು. ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರಿಂದ ಅರ್ಜುನ ಪ್ರಶಸ್ತಿಯನ್ನು ಸ್ವೀಕರಿಸಿದ್ದರು.
ಬಿಡುವಿಲ್ಲದ ಕಾರ್ಯಕ್ರಮಗಳಿಂದ ಸಿಂಧು ಆಯಾಸಗೊಂಡಿದ್ದರು. ಪ್ರಾಕ್ಟೀಸ್‌ನಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಅವರಿಂದ ಸಾಧ್ಯವಾಗಿಲ್ಲ ಎನ್ನಲಾಗಿದೆ.
ಒಲಿಂಪಿಕ್ಸ್ ಅಭಿಯಾನದ ವೇಳೆ ಸಿಂಧು ಕಠಿಣ ಪರಿಸ್ಥಿತಿ ಎದುರಿಸಿದ್ದರು. ಸಿಂಧು ಕೋಚ್ ಪಿ.ಗೋಪಿಚಂದ್ ಒಲಿಂಪಿಕ್ಸ್ ಆರಂಭಕ್ಕೆ ಮೂರು ತಿಂಗಳು ಮುಂಚಿತವಾಗಿ ಫೋನ್ ಬಳಸದಂತೆ ತಾಕೀತು ಮಾಡಿದ್ದರು. ಆಹಾರ ಸೇವನೆಯಲ್ಲೂ ನಿರ್ಬಂಧ ಹೇರಲಾಗಿತ್ತು. ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ಸಿಂಧು ಸಾಕಷ್ಟು ತ್ಯಾಗ ಮಾಡಿದ್ದರು.
ದಣಿವಿನಿಂದ ಹೊರಬರಲು ಸಿಂಧು ಎಲ್ಲ ಕಠಿಣ ತರಬೇತಿಯನ್ನು ಬದಿಗೊತ್ತಿ ವಿಶ್ರಾಂತಿ ಪಡೆದಿದ್ದರು. ಪ್ರತಿಭಾವಂತ ಅಥ್ಲೀಟ್‌ಗಳು ಉತ್ತಮ ಪ್ರದರ್ಶನ ಮುಂದುವರಿಸಬೇಕಾದರೆ ನಿರಂತರವಾಗಿ ತರಬೇತಿ ಹಾಗೂ ಪ್ರಾಕ್ಟೀಸ್‌ನ್ನು ನಡೆಸುತ್ತಿರಬೇಕು. ಹಾಗೇ ಮಾಡದೆ ಇದ್ದರೆ ಇದು ಪ್ರದರ್ಶನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಶಿಸ್ತು ಎನ್ನುವುದು ಎಲ್ಲ ಕ್ರೀಡಾಪಟುಗಳಿಗೆ ಅತ್ಯಂತ ಮುಖ್ಯವಾಗಿದೆ.