ಸಂದೀಪ್, ಸತ್ಯವರ್ತ್, ರಿತುಗೆ ಚಿನ್ನ
ಹೊಸದಿಲ್ಲಿ, ನ.5: ಸಿಂಗಾಪುರದಲ್ಲಿ ನಡೆದ ಕಾಮನ್‌ವೆಲ್ತ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ರಿಯೋ ಒಲಿಂಪಿಯನ್ ಸಂದೀಪ್ ಥೋಮರ್, ಅಮಿತ್ ಧನ್ಕರ್ ಹಾಗೂ ಸತ್ಯವರ್ತ್ ಕಡಿಯನ್ ಪುರುಷರ ಫ್ರಿಸ್ಟೈಲ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡರು.
ಪುರುಷರ 57 ಕೆಜಿ ತೂಕ ವಿಭಾಗದಲ್ಲಿ ಪಾಕಿಸ್ತಾನದ ಮುಹಮ್ಮದ್ ಬಿಲಾಲ್‌ರನ್ನು 6-0 ಅಂತರದಿಂದ ಸೋಲಿಸಿದ ಸಂದೀಪ್ ಚಿನ್ನದ ಪದಕವನ್ನು ಜಯಿಸಿದರು. 70 ಕೆಜಿ ತೂಕ ವಿಭಾಗದಲ್ಲಿ ತಮ್ಮದೇ ದೇಶದ ವಿನೋದ್‌ರನ್ನು ಸೋಲಿಸಿದ ಅಮಿತ್ ಚಿನ್ನದ ಪದಕ ಗೆದ್ದುಕೊಂಡರು.
97 ಕೆಜಿ ತೂಕ ವಿಭಾಗದಲ್ಲಿ ಎದುರಾಳಿ ರೌಬ್ಲಿಜೀತ್ ಗಾಯದ ಸಮಸ್ಯೆಯಿಂದಾಗಿ ಫೈನಲ್ ಪಂದ್ಯದಿಂದ ಹಿಂದೆ ಸರಿದರು. ಈ ಹಿನ್ನೆಲೆಯಲ್ಲಿ ರೌಬ್ಲಿಜೀತ್ ಚಿನ್ನದ ಪದಕ ತನ್ನದಾಗಿಸಿಕೊಂಡರು.
ಮಹಿಳೆಯರ 48 ತೂಕ ವಿಭಾಗದಲ್ಲಿ ಪ್ರಿಯಾಂಕಾರನ್ನು ಮಣಿಸಿದ ರಿತು ಫೋಗಟ್ ಚಿನ್ನದ ಪದಕ ಜಯಿಸಿದ್ದಾರೆ.
63ಕೆಜಿ ತೂಕ ವಿಭಾಗದಲ್ಲಿ ರೇಶ್ಮಾ ಮಾನೆ ಚಿನ್ನದ ಪದಕ ಬಾಚಿಕೊಂಡರು. ಲಲಿತಾ ಹಾಗೂ ಪಿಂಕಿ ಕ್ರಮವಾಗಿ 55ಕೆಜಿ ಹಾಗೂ 69 ಕೆಜಿ ತೂಕ ವಿಭಾಗದಲ್ಲಿ ಮೊದಲ ಸ್ಥಾನ ಪಡೆದರು. ಜ್ಯೋತಿ ಹಾಗೂ ನಿಕ್ಕಿ ಬೆಳ್ಳಿ ಹಾಗೂ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.
58ಕೆಜಿ ತೂಕ ವಿಭಾಗದಲ್ಲಿ ಮನು ಹಾಗೂ ಸೋಮಾಲಿ ಕ್ರಮವಾಗಿ ಮೊದಲನೆ ಹಾಗೂ ಎರಡನೆ ಸ್ಥಾನ ಪಡೆದರು.