×
Ad

ಮೊದಲ ಟೆಸ್ಟ್: ಸುಸ್ಥಿತಿಯಲ್ಲಿ ದಕ್ಷಿಣ ಆಫ್ರಿಕ

Update: 2016-11-05 23:13 IST

ಪರ್ತ್, ನ.5: ಜೆಪಿ ಡುಮಿನಿ ಹಾಗೂ ಡಿಯನ್ ಎಲ್ಗರ್ ಬಾರಿಸಿದ ಆಕರ್ಷಕ ಶತಕದ ನೆರವಿನಿಂದ ದಕ್ಷಿಣ ಆಫ್ರಿಕ ತಂಡ ಆಸ್ಟ್ರೇಲಿಯ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸುಸ್ಥಿತಿಯಲ್ಲಿದೆ.

ಶನಿವಾರ ಇಲ್ಲಿ ನಡೆದ ಮೂರನೆ ದಿನದಾಟದಂತ್ಯಕ್ಕೆ ಪ್ರವಾಸಿ ಆಫ್ರಿಕ ತಂಡ ಎರಡನೆ ಇನಿಂಗ್ಸ್‌ನಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 390 ರನ್ ಗಳಿಸಿದೆ. ಒಟ್ಟಾರೆ 388 ರನ್ ಮುನ್ನಡೆಯಲ್ಲಿದೆ. ವೆರ್ನಾನ್ ಫಿಲ್ಯಾಂಡರ್(23) ಹಾಗೂ ಕ್ವಿಂಟನ್ ಡಿಕಾಕ್(ಅಜೇಯ 16) ಕ್ರೀಸ್ ಕಾಯ್ದುಕೊಂಡಿದ್ದಾರೆ.

ಆಫ್ರಿಕ ತಂಡದ ಕೈಯಲ್ಲಿ ಇನ್ನೂ ನಾಲ್ಕು ವಿಕೆಟ್ ಬಾಕಿಯಿದ್ದರೂ ಗಾಯಾಳು ವೇಗದ ಬೌಲರ್ ಡೇಲ್ ಸ್ಟೇಯ್ನಿ ಬ್ಯಾಟಿಂಗ್ ಮಾಡುವ ನಿರೀಕ್ಷೆಯಿಲ್ಲ.

ಮೂರನೆ ದಿನದಾಟ ಡುಮಿನಿ ಹಾಗೂ ಎಲ್ಗರ್ ಆಕರ್ಷಕ ಶತಕಕ್ಕೆ ಸಾಕ್ಷಿಯಾಯಿತು. ಎರಡನೆ ದಿನದಾಟದಂತ್ಯಕ್ಕೆ ಜೊತೆಯಾಗಿದ್ದ ಈ ಜೋಡಿ ಇಂದು ಆಸ್ಟ್ರೇಲಿಯದ ದಾಳಿಯನ್ನು ಚೆನ್ನಾಗಿ ದಂಡಿಸಿ 3ನೆ ವಿಕೆಟ್‌ಗೆ 250 ರನ್ ಸೇರಿಸಿತು.

ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ಲಂಚ್ ಹಾಗೂ ಟೀ ವಿರಾಮದ ನಡುವೆ ಐದನೆ ಟೆಸ್ಟ್ ಶತಕವನ್ನು ಬಾರಿಸಿದ್ದಾರೆ.

ವೇಗದ ಬೌಲರ್ ಪೀಟರ್ ಸಿಡ್ಲ್(2-47) ವೈಡ್ ಎಸೆತವನ್ನು ಕೆಣಕಲು ಹೋದ ಡುಮಿನಿ 141 ರನ್‌ಗೆ ವಿಕೆಟ್ ಒಪ್ಪಿಸಿದರು. ಎಡಗೈ ಬ್ಯಾಟ್ಸ್‌ಮನ್ ಡುಮಿನಿ 225 ಎಸೆತಗಳನ್ನು ಎದುರಿಸಿದ್ದು 20 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದ್ದಾರೆ.

ಆರಂಭಿಕ ಆಟಗಾರ ಎಲ್ಗರ್ 471 ನಿಮಿಷಗಳ ಬ್ಯಾಟಿಂಗ್‌ನಲ್ಲಿ 316 ಎಸೆತಗಳನ್ನು ಎದುರಿಸಿದ್ದು, ವೇಗಿ ಜೊಶ್ ಹೇಝಲ್‌ವುಡ್‌ಗೆ(2-97) ವಿಕೆಟ್ ಒಪ್ಪಿಸಿದರು. ಔಟಾಗುವ ಮೊದಲು 17 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದರು.

ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡ ಬಳಿಕ ಮೊದಲ ಟೆಸ್ಟ್ ಪಂದ್ಯವನ್ನು ಆಡಿದ ಮಿಚೆಲ್ ಸ್ಟಾರ್ಕ್ 99 ರನ್‌ಗೆ 1 ವಿಕೆಟ್ ಪಡೆಯಲಷ್ಟೇ ಶಕ್ತರಾದರು.

ದಕ್ಷಿಣ ಆಫ್ರಿಕ ತಂಡದ ಚಾಂಪಿಯನ್ ಬೌಲರ್ ಸ್ಟೇಯ್ನಿ ಭುಜದ ಗಂಭೀರ ಸಮಸ್ಯೆ ಎದುರಿಸುತ್ತಿದ್ದ್ದು, ಕನಿಷ್ಠ ಆರು ವಾರ ವಿಶ್ರಾಂತಿ ಪಡೆಯಬೇಕಾಗಿದ್ದು, ಶಸ್ತ್ರಚಿಕಿತ್ಸೆಗೆ ಒಳಪಡುವ ಸಾಧ್ಯತೆಯಿದೆ. ಸ್ಟೇಯ್ನೆ ಆಸ್ಟ್ರೇಲಿಯದ 2ನೆ ಇನಿಂಗ್ಸ್‌ನಲ್ಲಿ ಬೌಲಿಂಗ್ ಮಾಡುವ ಸಾಧ್ಯತೆಯಿಲ್ಲ.

ಟಾಸ್ ಜಯಿಸಿದ್ದ ದಕ್ಷಿಣ ಆಫ್ರಿಕ ಮೊದಲ ಇನಿಂಗ್ಸ್‌ನಲ್ಲಿ 242 ರನ್‌ಗೆ ಆಲೌಟಾಗಿತ್ತು. ಆತಿಥೇಯ ಆಸ್ಟ್ರೇಲಿಯ ತಂಡ ಎರಡನೆ ದಿನದಾಟದ ಲಂಚ್ ವಿರಾಮದ ವೇಳೆ ವಿಕೆಟ್ ನಷ್ಟವಿಲ್ಲದೆ 158 ರನ್ ಗಳಿಸಿ ಬೃಹತ್ ಮೊತ್ತ ಗಳಿಸುವ ವಿಶ್ವಾಸದಲ್ಲಿತ್ತು. ಆದರೆ, ದಿಢೀರ್ ಬ್ಯಾಟಿಂಗ್ ಕುಸಿತ ಕಂಡ ಆಸ್ಟ್ರೇಲಿಯ ಕೇವಲ 244 ರನ್‌ಗೆ ಆಲೌಟಾಗಿ ಕೇವಲ 2 ರನ್ ಮುನ್ನಡೆ ಪಡೆದಿತ್ತು.

ಸಂಕ್ಷಿಪ್ತ ಸ್ಕೋರ್

ದಕ್ಷಿಣ ಆಫ್ರಿಕ: ಪ್ರಥಮ ಇನಿಂಗ್ಸ್ 242 ರನ್

ದಕ್ಷಿಣ ಆಫ್ರಿಕ: ದ್ವಿತೀಯ ಇನಿಂಗ್ಸ್ 390/6

(ಜೆಪಿ ಡುಮಿನಿ 141, ಎಲ್ಗರ್ 127, ಫಿಲ್ಯಾಂಡರ್ ಅಜೇಯ 23, ಹೇಝಲ್‌ವುಡ್ 2-97, ಸಿಡ್ಲ್ 2-47)

ಆಸ್ಟ್ರೇಲಿಯ ಪ್ರಥಮ ಇನಿಂಗ್ಸ್: 70.2 ಓವರ್‌ಗಳಲ್ಲಿ 244

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News