×
Ad

ವಿರಾಟ್ ಕೊಹ್ಲಿ-ಜೋ ರೂಟ್ ಅಂಕಿ-ಅಂಶಗಳ ಅವಲೋಕನ

Update: 2016-11-05 23:26 IST

ಹೊಸದಿಲ್ಲಿ, ನ.5: ಭಾರತ ಹಾಗೂ ಇಂಗ್ಲೆಂಡ್ ಮತ್ತೊಂದು ರೋಚಕ ಸರಣಿಗೆ ಸಜ್ಜಾಗಿವೆ. ಈ ಬಾರಿ ವಿಶ್ವದ ನಂ.1 ಟೆಸ್ಟ್ ತಂಡ ಭಾರತವೇ ಸರಣಿ ಗೆಲ್ಲುವ ಫೇವರಿಟ್ ತಂಡವಾಗಿದೆ.

ಬಾಂಗ್ಲಾದೇಶ ಪ್ರವಾಸದಲ್ಲಿ ಟೆಸ್ಟ್ ಸರಣಿಯನ್ನು 1-1 ರಿಂದ ಡ್ರಾಗೊಳಿಸಿರುವ ಇಂಗ್ಲೆಂಡ್ ಸರಣಿಯಲ್ಲಿ ‘ಅಂಡರ್‌ಡಾಗ್’ ಎನಿಸಿಕೊಂಡಿದೆ. ಉಭಯ ತಂಡದಲ್ಲಿರುವ ವಿರಾಟ್ ಕೊಹ್ಲಿ ಹಾಗೂ ಜೋ ರೂಟ್ ವೈಯಕ್ತಿಕ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಇಬ್ಬರೂ ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ ಬಳಿಕ ಅಮೋಘ ಪ್ರದರ್ಶನದಿಂದ ವಿಶ್ವ ಕ್ರಿಕೆಟ್‌ನ್ನು ತಮ್ಮತ್ತ ಸೆಳೆದಿದ್ದಾರೆ. ಕೊಹ್ಲಿ ಈಗಾಗಲೇ ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಅತ್ಯುತ್ತಮ ದಾಖಲೆಯಿಂದ ಎಲ್ಲರ ಚಿತ್ತ ತನ್ನತ್ತ ಸೆಳೆದಿದ್ದಾರೆ. ರೂಟ್ ಮುಖ್ಯವಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ.

 2016ನೆ ಸಾಲಿನಲ್ಲಿ ಎಲ್ಲ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಒಟ್ಟು 36 ಪಂದ್ಯಗಳನ್ನು ಆಡಿರುವ ರೂಟ್ 50.70ರ ಸರಾಸರಿಯಲ್ಲಿ 2,079 ರನ್ ಗಳಿಸಿದ್ದಾರೆ. ಭಾರತದ ‘ರನ್ ಮೆಷಿನ್’ ಖ್ಯಾತಿಯ ಕೊಹ್ಲಿ 80.83ರ ಸರಾಸರಿಯಲ್ಲಿ 32 ಪಂದ್ಯಗಳಲ್ಲಿ 1,940 ರನ್ ಗಳಿಸಿದ್ದಾರೆ.

ಮುಂಬರುವ 5 ಪಂದ್ಯಗಳ ಟೆಸ್ಟ್ ಸರಣಿಯ ಬಳಿಕ ವರ್ಷಾಂತ್ಯದಲ್ಲಿ ಕೊಹ್ಲಿ ಹಾಗೂ ರೂಟ್‌ರ ಪೈಕಿ ಯಾರು ಗರಿಷ್ಠ ರನ್ ಗಳಿಸುತ್ತಾರೆಂದು ದೃಢವಾಗಲಿದೆ. ಇಬ್ಬರೂ ಆಟಗಾರರು 5 ಟೆಸ್ಟ್‌ನ 10 ಇನಿಂಗ್ಸ್‌ಗಳಲ್ಲಿ ಆಡಲಿದ್ದು ವರ್ಷಾಂತ್ಯದಲ್ಲಿ ಅಗ್ರ ಸ್ಥಾನಿಯಾಗಲು ಉತ್ತಮ ಅವಕಾಶವಿದೆ.

ಸೀಮಿತ ಓವರ್ ಪಂದ್ಯಗಳಲ್ಲಿ ಕೊಹ್ಲಿ ಅವರು ರೂಟ್‌ಗಿಂತ ಉತ್ತಮ ದಾಖಲೆ ಹೊಂದಿದ್ದಾರೆ. ಕೊಹ್ಲಿ ಆರಂಭವನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸಬಲ್ಲರು. ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಕೊಹ್ಲಿ 50ಕ್ಕೂ ಅಧಿಕ ಸರಾಸರಿ ಹೊಂದಿದ್ದಾರೆ.

ರೂಟ್ ಅವರು ಕೊಹ್ಲಿಗಿಂತ ಮೂರು ವರ್ಷ ಕಿರಿಯವರು. ಹೀಗಾಗಿ ರೂಟ್‌ಗೆ ದಾಖಲೆ ನಿರ್ಮಿಸುವ ಅವಕಾಶ ಇನ್ನೂ ಇದೆ.

ಕೊಹ್ಲಿ ಹಾಗೂ ರೂಟ್ ತಲಾ 48 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ರೂಟ್(53.28)ಕೊಹ್ಲಿಗಿಂತ(45.56) ಉತ್ತಮ ಸರಾಸರಿ ಹೊಂದಿದ್ದಾರೆ. ದಿಲ್ಲಿಯ ಕೊಹ್ಲಿ ಟೆಸ್ಟ್‌ನಲ್ಲಿ ಅರ್ಧಶತಕಗಿಂತಲೂ(13) ಹೆಚ್ಚು ಶತಕ(12) ಬಾರಿಸಿದ್ದಾರೆ. ರೂಟ್ 10 ಶತಕ, 23 ಅರ್ಧಶತಕ ಗಳನ್ನು ಬಾರಿಸಿದ್ದಾರೆ.

ವಿದೇಶಿ ನೆಲದಲ್ಲಿ ಕೊಹ್ಲಿ ದಾಖಲೆ ರೂಟ್‌ಗಿಂತ ಉತ್ತಮವಾಗಿದೆ. ಕೊಹ್ಲಿ ವಿದೇಶಿ ನೆಲದಲ್ಲಿ 28 ಪಂದ್ಯಗಳಲ್ಲಿ 9 ಶತಕ ಹಾಗೂ 5 ಅರ್ಧಶತಕ ಬಾರಿಸಿದ್ದಾರೆ.

ನ.9 ರಿಂದ ಆರಂಭವಾಗಲಿರುವ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಹಾಗೂ ರೂಟ್ ವೈಯಕ್ತಿಕ ಪ್ರದರ್ಶನದ ಮೂಲಕ ಫಲಿತಾಂಶದ ಮೇಲೆ ಪ್ರಭಾವ ಬೀರಬಲ್ಲರು. ಮುಂಬರುವ ಟೆಸ್ಟ್ ಸರಣಿಯಲ್ಲಿ ಈ ಇಬ್ಬರು ಆಟಗಾರರ ಮೇಲೆ ಎಲ್ಲರ ಕಣ್ಣಿದೆ.

ಏಕದಿನ

ಆಟಗಾರ       ಪಂದ್ಯ   ಇನಿಂಗ್ಸ್‌ ರನ್‌   ಸರಾಸರಿ 100    50

ಕೊಹ್ಲಿ           176      168      7570    52.93   26       38

                                              

ರೂಟ್          078     073     3017     45.71    08       17

ಟ್ವೆಂಟಿ-20

ಆಟಗಾರ       ಪಂದ್ಯ   ಇನಿಂಗ್ಸ್‌         ರನ್‌     ಸರಾಸರಿ         100      50

ಕೊಹ್ಲಿ           45      41                 1657     57.13              0        16

ರೂಟ್          21       19                 600     37.50             0        04

ಟೆಸ್ಟ್

ಆಟಗಾರ       ಪಂದ್ಯ   ಇನಿಂಗ್ಸ್‌                   ರನ್‌     ಸರಾಸರಿ         100      50

ಕೊಹ್ಲಿ           48      82                3554    45.56            13       12

ರೂಟ್          48      88                4103    53.28             10       23

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News