ಪರ್ತ್ ಟೆಸ್ಟ್: ಆಸ್ಟ್ರೇಲಿಯ ವಿರುದ್ಧ ದಕ್ಷಿಣ ಆಫ್ರಿಕಕ್ಕೆ ಭರ್ಜರಿ ಜಯ
ಪರ್ತ್, ನ.7: ವೇಗದ ಬೌಲರ್ ಕಾಗಿಸೊ ರಬಾಡ ಅವರ ಅತ್ಯುತ್ತಮ ಬೌಲಿಂಗ್(5-92) ಸಹಾಯದಿಂದ ದಕ್ಷಿಣ ಆಫ್ರಿಕ ತಂಡ ಆಸ್ಟ್ರೇಲಿಯ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು 177 ರನ್‌ಗಳ ಅಂತರದಿಂದ ಭರ್ಜರಿಯಾಗಿ ಗೆದ್ದುಕೊಂಡಿದೆ.
ಇಲ್ಲಿನ ವಾಕಾ ಸ್ಟೇಡಿಯಂನಲ್ಲಿ ಐದನೆ ಹಾಗೂ ಅಂತಿಮ ದಿನವಾದ ಸೋಮವಾರ ಆತಿಥೇಯರು ಟೀ ವಿರಾಮದ ಮೊದಲೇ 361 ರನ್‌ಗೆ ಆಲೌಟಾಗಿ ಸೋಲೊಪ್ಪಿಕೊಂಡರು. ವಾಕಾ ಸ್ಟೇಡಿಯಂನಲ್ಲಿ 2008 ಹಾಗೂ 2012ರ ಬಳಿಕ ಸತತ ಮೂರನೆ ಜಯ ಸಾಧಿಸಿದ ಹರಿಣ ಪಡೆ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.
ಶನಿವಾರ ಹೊಬರ್ಟ್‌ನಲ್ಲಿ ಎರಡನೆ ಪಂದ್ಯ ಆಡಲಿರುವ ಆಫ್ರಿಕ ಅಡಿಲೇಡ್ ಓವಲ್‌ನಲ್ಲಿ ಹಗಲು-ರಾತ್ರಿ ಪಂದ್ಯವನ್ನು ಆಡಲಿದೆ.
539 ರನ್ ಕಠಿಣ ಗುರಿ ಪಡೆದಿದ್ದ ಆಸ್ಟ್ರೇಲಿಯ 4 ವಿಕೆಟ್ ನಷ್ಟದಲ್ಲಿ 169 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿತು. 21ರ ಹರೆಯದ ರಬಾಡ ದಾಳಿಗೆ ಉತ್ತರಿಸಲು ವಿಫಲವಾದ ಆಸ್ಟ್ರೆಲಿಯದ ಆಟಗಾರರು 361 ರನ್‌ಗೆ ಹೋರಾಟ ಕೊನೆಗೊಳಿಸಿದರು.
ತಂಡದ ಪ್ರಮುಖ ವೇಗಿ ಡೇಲ್ ಸ್ಟೇಯ್ನೆ ಗಾಯಗೊಂಡ ಕಾರಣ ಅವರ ಅನುಪಸ್ಥಿತಿಯಲ್ಲಿ ಬೌಲಿಂಗ್ ದಾಳಿ ನೇತೃತ್ವವನ್ನು ವಹಿಸಿದ್ದ ರಬಾಡ ತನ್ನ 9ನೆ ಟೆಸ್ಟ್ ಪಂದ್ಯದಲ್ಲಿ 4ನೆ ಬಾರಿ ಐದು ವಿಕೆಟ್ ಗೊಂಚಲು ಕಬಳಿಸಿದರು.
ಐದನೆ ದಿನದಾಟವಾದ ಸೋಮವಾರ ಭೋಜನ ವಿರಾಮಕ್ಕೆ ಮೊದಲೇ ಉಸ್ಮಾನ್ ಖ್ವಾಜಾ, ಮಿಚೆಲ್ ಮಾರ್ಷ್ ಹಾಗೂ ಮಿಚೆಲ್ ಸ್ಟಾರ್ಕ್ ವಿಕೆಟ್ ಒಪ್ಪಿಸಿದರು. ವಿಕೆಟ್‌ಕೀಪರ್ ಪೀಟರ್ ನೆವಿಲ್ ಅಜೇಯ 60 ರನ್ ಗಳಿಸಿದರು.
ನೆವಿಲ್ ಹಾಗೂ ಜೊಶ್ ಹೇಝಲ್‌ವುಡ್ 9ನೆ ವಿಕೆಟ್‌ಗೆ 65 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಲು ಯತ್ನಿಸಿದರು. ಆದರೆ, ಹೇಝಲ್‌ವುಡ್ 29 ರನ್‌ಗೆ ಟೆಂಬಾ ಬವುಮಾಗೆ ವಿಕೆಟ್ ಒಪ್ಪಿಸಿದರು.
ಇದಕ್ಕೆ ಮೊದಲು ಅಜೇಯ 58 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಅಗ್ರ ಕ್ರಮಾಂಕದ ಎಡಗೈ ಬ್ಯಾಟ್ಸ್‌ಮನ್ ಖ್ವಾಜಾ(97 ರನ್, 182 ಎಸೆತ, 11 ಬೌಂಡರಿ, 3 ಸಿಕ್ಸರ್) ಕೇವಲ 3 ರನ್‌ನಿಂದ 5ನೆ ಶತಕದಿಂದ ವಂಚಿತರಾದರು.
ಪಾರ್ಟ್‌ಟೈಮ್ ಸ್ಪಿನ್ನರ್ ಜೆಪಿ ಡುಮಿನಿ ಬೀಸಿದ ಎಲ್‌ಬಿಡಬ್ಲು ಬಲೆಗೆ ಬಿದ್ದ ಖ್ವಾಜಾ ಇನಿಂಗ್ಸ್‌ನುದ್ದಕ್ಕೂ ಆಸ್ಟ್ರೇಲಿಯದ ಪರ ಏಕಾಂಗಿ ಹೋರಾಟವನ್ನು ನೀಡಿದ್ದರು.
ಪಂದ್ಯದಲ್ಲಿ ಒಟ್ಟು 7 ವಿಕೆಟ್‌ಗಳನ್ನು ಕಬಳಿಸಿದ್ದ ರಬಾಡ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.
ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕ ಪ್ರಥಮ ಇನಿಂಗ್ಸ್: 242 ರನ್
ದಕ್ಷಿಣ ಆಫ್ರಿಕ ದ್ವಿತೀಯ ಇನಿಂಗ್ಸ್: 540/8 ಡಿಕ್ಲೇರ್
ಆಸ್ಟ್ರೇಲಿಯ ಪ್ರಥಮ ಇನಿಂಗ್ಸ್: 244 ರನ್
ಆಸ್ಟ್ರೇಲಿಯ ದ್ವಿತೀಯ ಇನಿಂಗ್ಸ್: 119.1 ಓವರ್‌ಗಳಲ್ಲಿ 361 ರನ್‌ಗೆ ಆಲೌಟ್
(ಉಸ್ಮಾನ್ ಖ್ವಾಜಾ 97, ನೆವಿಲ್ ಅಜೇಯ 60, , ವಾರ್ನರ್ 35, ಸ್ಮಿತ್ 34, ರಬಾಡ 5-92)
ಪಂದ್ಯಶ್ರೇಷ್ಠ: ಕಾಗಿಸೊ ರಬಾಡ.
ದ್ವಿತೀಯ ಟೆಸ್ಟ್‌ಗೆ ಮಾರ್ಷ್ ಅಲಭ್ಯ
ಪರ್ತ್, ನ.7: ಆಸ್ಟ್ರೇಲಿಯ ಆರಂಭಿಕ ಆಟಗಾರ ಶಾನ್ ಮಾರ್ಷ್ ಬೆರಳು ಮುರಿತಕ್ಕೆ ಒಳಗಾದ ಕಾರಣ ದಕ್ಷಿಣ ಆಫ್ರಿಕ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ.
ಮಾರ್ಷ್‌ಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ಮಾರ್ಷ್ ಬದಲಿಗೆ ಶನಿವಾರದಿಂದ ಹೊಬರ್ಟ್‌ನಲ್ಲಿ ಆರಂಭವಾಗಲಿರುವ ದ್ವಿತೀಯ ಟೆಸ್ಟ್‌ಗೆ ಜೋ ಬರ್ನ್ಸ್ ಹಾಗೂ ಕಲುಮ್ ಫೆರ್ಗುಸನ್ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯ ಹೇಳಿದೆ.
ಬರ್ನ್ಸ್ ಅವರು ಡೇವಿಡ್ ವಾರ್ನರ್‌ರೊಂದಿಗೆ ಇನಿಂಗ್ಸ್ ಆರಂಭಿಸುವುದು ಬಹುತೇಕ ದೃಢಪಟ್ಟಿದೆ. ಫರ್ಗ್ಯೂಸನ್ ಅವರು ಸ್ನಾಯು ಸೆಳೆತದಿಂದ ಬಳಲುತ್ತಿರುವ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆ್ಯಡಮ್ ವೋಗ್ಸ್ ಬದಲಿಗೆ ತಂಡ ಸೇರಿಕೊಂಡಿದ್ದಾರೆ.
ಆಸ್ಟ್ರೇಲಿಯ ಮೊದಲ ಟೆಸ್ಟ್‌ನಲ್ಲಿ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಿಲ್ಲ. ಮೊದಲ ದಿನವೇ ದಕ್ಷಿಣ ಆಫ್ರಿಕವನ್ನು 242 ರನ್‌ಗೆ ಆಲೌಟ್‌ಮಾಡಿದ್ದ ಆಸ್ಟ್ರೇಲಿಯ ಮೊದಲ ಇನಿಂಗ್ಸ್‌ನಲ್ಲಿ ಒಂದು ಹಂತದಲ್ಲಿ ವಿಕೆಟ್ ನಷ್ಟವಿಲ್ಲದೆ 158 ರನ್ ಗಳಿಸಿತ್ತು. ಆದರೆ, 86 ರನ್‌ಗೆ ಉಳಿದ 10 ವಿಕೆಟ್‌ಗಳನ್ನು ಕಳೆದುಕೊಂಡಿತ್ತು.