ರಣಜಿ: ವಿದರ್ಭ ವಿರುದ್ಧ ಕರ್ನಾಟಕ ಜಯಭೇರಿ
ವಡೋದರ, ಅ.7: ನಾಯಕ ವಿನಯಕುಮಾರ್ ಅವರ ಆಲ್‌ರೌಂಡ್ ಪ್ರದರ್ಶನದ(56 ರನ್, 28 ರನ್‌ಗೆ 5 ವಿಕೆಟ್)ಸಹಾಯದಿಂದ ಕರ್ನಾಟಕ ತಂಡ ವಿದರ್ಭ ವಿರುದ್ಧದ ರಣಜಿ ಟ್ರೋಫಿಯ ಬಿ ಗುಂಪಿನ ಪಂದ್ಯವನ್ನು 189 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ ಆರು ಅಂಕವನ್ನು ಗಳಿಸಿದೆ.
ಒಟ್ಟು 23 ಅಂಕ ಗಳಿಸಿದ ಕರ್ನಾಟಕ ‘ಬಿ’ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.
ಇಲ್ಲಿನ ಮೋತಿ ಬಾಘ್ ಸ್ಟೇಡಿಯಂನಲ್ಲಿ ಗೆಲ್ಲಲು 301 ರನ್ ಗುರಿ ಪಡೆದಿದ್ದ ವಿದರ್ಭ ತಂಡ ಯಾವ ಹಂತದಲ್ಲೂ ಹೋರಾಟವನ್ನೇ ನೀಡದೇ 36.4 ಓವರ್‌ಗಳಲ್ಲಿ 111 ರನ್‌ಗೆ ಆಲೌಟಾಗಿ ಸುಲಭವಾಗಿ ಶರಣಾಯಿತು.
ವಿನಯಕುಮಾರ್(5-28), ಎಸ್.ಅರವಿಂದ್(2-28) ಹಾಗೂ ಗೌತಮ್(2-7) ಸಂಘಟಿಸಿದ್ದ ಶಿಸ್ತುಬದ್ಧ ದಾಳಿಗೆ ನಿರುತ್ತರವಾದ ವಿದರ್ಭದ ಪರ ಜಿತೇಶ್ ಶರ್ಮ(61 ರನ್, 78 ಎಸೆತ, 10 ಬೌಂಡರಿ) ಏಕಾಂಗಿ ಹೋರಾಟವನ್ನು ನೀಡಿದರು. ಅವರಿಗೆ ತಂಡದ ಉಳಿದ ಸದಸ್ಯರಿಂದ ಸ್ವಲ್ಪವೂ ಸಾಥ್ ಸಿಗಲಿಲ್ಲ. ಜಿತೇಶ್ ಪಂದ್ಯದಲ್ಲಿ ಎರಡನೆ ಅರ್ಧಶತಕ ಬಾರಿಸಿದರು.
ಕರ್ನಾಟಕ 209 ರನ್‌ಗೆ ಆಲೌಟ್: ಇದಕ್ಕೆ ಮೊದಲು 3 ವಿಕೆಟ್‌ಗಳ ನಷ್ಟಕ್ಕೆ 108 ರನ್‌ನಿಂದ ಎರಡನೆ ಇನಿಂಗ್ಸ್ ಆರಂಭಿಸಿದ್ದ ಕರ್ನಾಟಕ ತಂಡ ಶ್ರೀಕಾಂತ್ ವಾಗ್(4-59) ಹಾಗೂ ಲಲಿತ್ ಯಾದವ್(3-90) ದಾಳಿಗೆ ತತ್ತರಿಸಿ 58.4 ಓವರ್‌ಗಳಲ್ಲಿ 209 ರನ್‌ಗೆ ಆಲೌಟಾಯಿತು.
45 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಸಮರ್ಥ್ ನಿನ್ನೆಯ ಮೊತ್ತಕ್ಕೆ 2 ರನ್ ಗಳಿಸುವಷ್ಟರಲ್ಲಿ ಲಲಿತ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು.
ಸಮರ್ಥ್ ಔಟಾದ ಬೆನ್ನಿಗೆ ವಿಕೆಟ್‌ಕೀಪರ್ ಸಿಎಂ ಗೌತಮ್ ಖಾತೆ ತೆರೆಯದೇ ಪೆವಿಲಿಯನ್ ಸೇರಿದರು. ಕೇವಲ 2 ರನ್‌ಗೆ 3 ವಿಕೆಟ್‌ಗಳನ್ನು ಕಳೆದುಕೊಂಡ ಕರ್ನಾಟಕ 141 ರನ್‌ಗೆ 7 ವಿಕೆಟ್ ಕಳೆದುಕೊಂಡಿತು.
ಆಗ ಕೆಳ ಕ್ರಮಾಂಕದಲ್ಲಿ ನಾಯಕ ವಿನಯಕುಮಾರ್(56 ರನ್, 86 ಎಸೆತ, 8 ಬೌಂಡರಿ) ಮತ್ತೊಮ್ಮೆ ತಂಡದ ನೆರವಿಗೆ ಬಂದರು. ಅರ್ಧಶತಕ ಬಾರಿಸಿದ ಕುಮಾರ್ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ವಿದರ್ಭದ ಗೆಲುವಿಗೆ 301 ರನ್ ಗುರಿ ನೀಡಲು ನೆರವಾದರು.
ತಮಿಳುನಾಡಿಗೆ ಬೋನಸ್ ಅಂಕ: ರಾಯ್‌ಪುರದಲ್ಲಿ ನಡೆದ ರಣಜಿ ಪಂದ್ಯದಲ್ಲಿ ಬರೋಡದ ವಿರುದ್ಧ ಇನಿಂಗ್ಸ್ ಹಾಗೂ 44 ರನ್‌ಗಳ ಅಂತರದಿಂದ ಜಯ ಸಾಧಿಸಿರುವ ತಮಿಳುನಾಡು ತಂಡ ಬೋನಸ್ ಅಂಕ ಗಳಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಬರೋಡ ತಂಡ ವ್ನಿೇಶ್(5-23) ಹಾಗೂ ಅಶ್ವಿನ್ ಕ್ರಿಸ್ಟ್(4-39) ದಾಳಿಗೆ ಸಿಲುಕಿ ಕೇವಲ 93 ರನ್‌ಗೆ ಆಲೌಟಾಯಿತು.
ಇದಕ್ಕೆ ಉತ್ತರವಾಗಿ ತಮಿಳುನಾಡು ತಂಡ ಅಭಿನವ್ ಮುಕುಂದ್ ಶತಕ(100), ಬಾಬಾ ಅಪರಾಜಿತ್(68) ಅರ್ಧಶತಕದ ನೆರವಿನಿಂದ ಮೊದಲ ಇನಿಂಗ್ಸ್‌ನಲ್ಲಿ 337 ರನ್ ಗಳಿಸಿತು. ಎರಡನೆ ಇನಿಂಗ್ಸ್‌ನಲ್ಲಿ 200 ರನ್‌ಗೆ ಆಲೌಟಾಗಿರುವ ಬರೋಡಾ ಇನಿಂಗ್ಸ್ ಹಾಗೂ 44 ರನ್‌ಗಳ ಸೋಲು ಅನುಭವಿಸಿತು.
ಮೈಸೂರಿನಲ್ಲಿ ರೈಲ್ವೇಸ್ ವಿರುದ್ದ ಮುಂಬೈ ಮೇಲುಗೈ: ಮೈಸೂರಿನಲ್ಲಿ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ತಂಡ ರೈಲ್ವೇಸ್‌ನ ವಿರುದ್ಧ 50 ರನ್ ಮುನ್ನಡೆಯಲ್ಲಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ 345 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ರೈಲ್ವೇಸ್ 160 ರನ್ ಗಳಿಸಿ ಫಾಲೋ-ಆನ್‌ಗೆ ಸಿಲುಕಿತು. 2ನೆ ಇನಿಂಗ್ಸ್ ಆರಂಭಿಸಿರುವ ರೈಲ್ವೇಸ್ 3ನೆ ದಿನದಾಟದಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿದೆ.
3 ವಿಕೆಟ್‌ಗೆ 76 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ರೈಲ್ವೇಸ್ ತಂಡ ವಿಜಯ್ ಗೊಹಿಲ್(5-64) ದಾಳಿಗೆ ತತ್ತರಿಸಿ 160 ರನ್‌ಗೆ ಆಲೌಟಾಯಿತು. ಫಾಲೋಆನ್‌ಗೆ ಸಿಲುಕಿದ ರೈಲ್ವೇಸ್‌ಗೆ ಆರಂಭಿಕ ಆಟಗಾರರು ಎಚ್ಚರಿಕೆ ಆರಂಭ ನೀಡಿದರೂ ದಿನದಾಟದಂತ್ಯಕ್ಕೆ 135 ರನ್‌ಗೆ 4 ವಿಕೆಟ್ ಕಳೆದುಕೊಂಡಿದೆ.
ಸಂಕ್ಷಿಪ್ತ ಸ್ಕೋರ್
ಕರ್ನಾಟಕ ಪ್ರಥಮ ಇನಿಂಗ್ಸ್: 267
ಕರ್ನಾಟಕ ದ್ವಿತೀಯ ಇನಿಂಗ್ಸ್: 209
(ವಿನಯ್ ಕುಮಾರ್ 56,ಆರ್.ಸಮರ್ಥ್ 47, ಮನೀಷ್ ಪಾಂಡೆ 35, ವಾಘ್ 4-59, ಲಲಿತ್ ಯಾದವ್ 3-90)
ವಿದರ್ಭ ಪ್ರಥಮ ಇನಿಂಗ್ಸ್: 176 ರನ್‌ಗೆ ಆಲೌಟ್
ವಿದರ್ಭ ದ್ವಿತೀಯ ಇನಿಂಗ್ಸ್: 36.4 ಓವರ್‌ಗಳಲ್ಲಿ 111 ರನ್‌ಗೆ ಆಲೌಟ್
(ಜಿತೇಶ್ ಶರ್ಮ 61, ಆರ್. ವಿನಯ್‌ಕುಮಾರ್ 5-28, ಎಸ್.ಅರವಿಂದ್ 2-28, ಗೌತಮ್ 2-7)