ಆರ್ಥಿಕ ನಷ್ಟಕ್ಕೆ ಪರಿಹಾರ ನೀಡಿ: ಬಿಸಿಸಿಐಗೆ ಪಿಸಿಬಿ ಮನವಿ
ಕರಾಚಿ, ನ.9: ಭಾರತ ನಿಗದಿತ ಸರಣಿಯನ್ನು ಆಡಲು ನಿರಾಕರಿಸುತ್ತಿರುವ ಹಿನ್ನೆಲೆಯಲ್ಲಿ ನಮಗೆ ಆಗಿರುವ ಆರ್ಥಿಕ ನಷ್ಟಕ್ಕೆ ಪರಿಹಾರ ನೀಡುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಬಿಸಿಸಿಐ ಹಾಗೂ ಐಸಿಸಿಗೆ ಬೇಡಿಕೆ ಇಟ್ಟಿದೆ.
‘‘ಇತ್ತೀಚೆಗೆ ನಡೆದ ಸಭೆಯಲ್ಲಿ ನಾವು ಬಿಸಿಸಿಐ ಹಾಗೂ ಐಸಿಸಿ ಬಳಿ ತಮಗಾದ ಆರ್ಥಿಕ ನಷ್ಟಕ್ಕೆ ಪರಿಹಾರವನ್ನು ನೀಡುವಂತೆ ಬೇಡಿಕೆ ಇಟ್ಟಿದ್ದೇವೆ’’ಎಂದು ‘ಡಾನ್’ಪತ್ರಿಕೆಗೆ ಪಿಸಿಬಿ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ನಜಮ ಸೇಥಿ ತಿಳಿಸಿದ್ದಾರೆ.
ಮುಂಬರುವ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡವನ್ನು ಒಂದೇ ಗ್ರೂಪ್‌ನಲ್ಲಿ ಬರದಂತೆ ನೋಡಿಕೊಳ್ಳಬೇಕು ಎಂದು ಐಸಿಸಿಗೆ ಬಿಸಿಸಿಐ ಅಧ್ಯಕ್ಷ ಅನುರಾತ್ ಠಾಕೂರ್ ಇತ್ತೀಚೆಗೆ ಮನವಿ ಮಾಡಿದ್ದರು.
‘‘ಭಾರತೀಯ ಸರಕಾರ ಪಾಕಿಸ್ತಾನವನ್ನು ಏಕಾಂಗಿಯಾಗಿಸಲು ಯೋಜನೆ ರೂಪಿಸುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ನಾವು ಐಸಿಸಿ ಬಳಿ ಭಾರತ ಹಾಗೂ ಪಾಕಿಸ್ತಾನವನ್ನು ಒಂದೇ ಗ್ರೂಪ್‌ನಲ್ಲಿ ಬರದಂತೆ ನೋಡಿಕೊಳ್ಳುವಂತೆ ಮನವಿ ಮಾಡಿದ್ದೇವೆ’’ ಠಾಕೂರ್ ಹೇಳಿದ್ದರು.
ಸೆ.29 ರಂದು ಭಾರತೀಯ ಸೇನೆ ಗಡಿ ನಿಯಂತ್ರಣ ರೇಖೆ(ಎಲ್‌ಒಸಿ)ಯಲ್ಲಿ ನಡೆಸಿದ ಸೀಮಿತ ದಾಳಿಯ ಬಳಿಕ ಉಭಯ ದೇಶಗಳ ನಡುವಿನ ಸಂಬಂಧ ತೀರಾ ಹದಗೆಟ್ಟಿದೆ.