ದಕ್ಷಿಣ ಆಫ್ರಿಕದ ಪೀಟರ್ಸನ್ ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ

Update: 2016-11-09 17:23 GMT

ಜೋಹಾನ್ಸ್‌ಬರ್ಗ್, ನ.9: ದಕ್ಷಿಣ ಆಫ್ರಿಕದ ಆಲ್‌ರೌಂಡರ್ ರಾಬಿನ್ ಪೀಟರ್ಸನ್ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ.

2002ರ ಚಾಂಪಿಯನ್ಸ್ ಟ್ರೋಫಿಯ ವೇಳೆ ದಕ್ಷಿಣ ಆಫ್ರಿಕದ ಕ್ರಿಕೆಟ್‌ಗೆ ಪಾದಾರ್ಪಣೆಗೈದಿರುವ ಪೀಟರ್ಸನ್ 15 ಟೆಸ್ಟ್, 79 ಏಕದಿನ ಹಾಗೂ 21 ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದಾರೆ. ಎಲ್ಲ ಮೂರು ಪ್ರಕಾರದ ಪಂದ್ಯಗಳಲ್ಲಿ ಒಟ್ಟು 137 ವಿಕೆಟ್‌ಗಳನ್ನು ಉರುಳಿಸಿರುವ ಪೀಟರ್ಸನ್ ನಾಲ್ಕು ಅರ್ಧಶತಕ ಬಾರಿಸಿದ್ದಾರೆ.

 37ರ ಪ್ರಾಯದ ಪೀಟರ್ಸನ್ ಶಿಸ್ತುಬದ್ಧ ಎಡಗೈ ಸ್ಪಿನ್ ಬೌಲಿಂಗ್ ಹಾಗೂ ಕೆಳ ಕ್ರಮಾಂಕದಲ್ಲಿ ಅಬ್ಬರದ ಬ್ಯಾಟಿಂಗ್‌ನ ಮೂಲಕ ಆಫ್ರಿಕ ತಂಡದ ಉಪಯುಕ್ತ ಆಟಗಾರನಾಗಿದ್ದರು.

2012ರಲ್ಲಿ ಪರ್ತ್‌ನಲ್ಲಿ ನಡೆದ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್‌ನಲ್ಲಿ ಆರು ವಿಕೆಟ್‌ಗಳನ್ನು ಕಬಳಿಸಿದ್ದ ಪೀಟರ್ಸನ್ ದಕ್ಷಿಣ ಆಫ್ರಿಕ ತಂಡ ಸರಣಿ ಜಯಿಸಲು ಪ್ರಮುಖ ಪಾತ್ರವಹಿಸಿದ್ದರು. 2013ರ ಡಿಸೆಂಬರ್‌ನಲ್ಲಿ ಡರ್ಬನ್‌ನಲ್ಲಿ ನಡೆದ ಭಾರತ ವಿರುದ್ಧದ ಟೆಸ್ಟ್‌ನಲ್ಲಿ ಆಲ್‌ರೌಂಡ್ ಪ್ರದರ್ಶನ(61 ರನ್ ಹಾಗೂ 74 ರನ್‌ಗೆ 4 ವಿಕೆಟ್) ನೀಡಿದ್ದ ಪೀಟರ್ಸನ್ ಆಫ್ರಿಕಕ್ಕೆ ಗೆಲುವು ತಂದುಕೊಟ್ಟಿದ್ದರು.

2011ರ ವಿಶ್ವಕಪ್‌ನಲ್ಲಿ 15 ವಿಕೆಟ್‌ಗಳನ್ನು ಕಬಳಿಸಿದ್ದ ಪೀಟರ್ಸನ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕ ಪರ ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಿದ್ದರು.

‘‘ಭಾವೋದ್ವೇಗ ಹಾಗೂ ಸ್ಮರಣೀಯ ನೆನಪುಗಳೊಂದಿಗೆ ವೃತ್ತಿಪರ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲು ಬಯಸುವೆ. ನನ್ನ ವೃತ್ತಿಬದುಕಿ ಅದ್ಭುತ ಪಯಣವಾಗಿತ್ತು. ಪಯಣದ ವೇಳೆ ಹಲವು ಮಂದಿನ ಬೆಂಬಲ ಹಾಗೂ ಉತ್ತೇಜನ ನೀಡಿದ್ದಾರೆ. ಮೊತ್ತ ಮೊದಲಿಗೆ ಸಹ ಆಟಗಾರರಿಗೆ ಕೃತಜ್ಞತೆ ಸಲ್ಲಿಸುವೆ. ನನ್ನ ಬೆಳವಣಿಗೆಗೆ ಸಹಕರಿಸಿದ್ದ ಕೋಚ್‌ಗಳಿಗೂ ಋಣಿಯಾಗಿರುವೆ’’ ಎಂದು ಪೀಟರ್ಸನ್ ಹೇಳಿದ್ದಾರೆ.

ರಾಬಿನ್ ಪೀಟರ್ಸನ್

ಜನನ: ಆ.4, 1979(37 ವರ್ಷ)

ಜನ್ಮಸ್ಥಳ:ಪೋರ್ಟ್ ಎಲಿಜಬೆತ್

ಬ್ಯಾಟಿಂಗ್ ಶೈಲಿ: ಎಡಗೈ

ಬೌಲಿಂಗ್ ಶೈಲಿ: ಎಡಗೈ ಸ್ಪಿನ್

ವೃತ್ತಿಜೀವನದ ಮಾಹಿತಿ

ಚೊಚ್ಚಲ ಟೆಸ್ಟ್: 2003ರಲ್ಲಿ ಬಾಂಗ್ಲಾದೇಶದ ವಿರುದ್ಧ

ಕೊನೆಯ ಟೆಸ್ಟ್: 2014ರಲ್ಲಿ ಆಸ್ಟ್ರೇಲಿಯದ ವಿರುದ್ಧ

ಚೊಚ್ಚಲ ಏಕದಿನ: 2002ರಲ್ಲಿ ಭಾರತದ ವಿರುದ್ಧ

ಕೊನೆಯ ಏಕದಿನ: 2014ರಲ್ಲಿ ಆಸ್ಟ್ರೇಲಿಯದ ವಿರುದ್ಧ

ಚೊಚ್ಚಲ ಟಿ-20: 2006ರಲ್ಲಿ ಆಸ್ಟ್ರೇಲಿಯದ ವಿರುದ್ಧ

ಕೊನೆಯ ಟಿ-20: 2014ರಲ್ಲಿ ಆಸ್ಟ್ರೇಲಿಯದ ವಿರುದ್ಧ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News