ಇಂಗ್ಲೆಂಡ್ ಕೌಂಟಿಯಲ್ಲಿ ಆಮಿರ್‌ಗೆ ಅವಕಾಶ

Update: 2016-11-09 17:26 GMT

ಲಂಡನ್, ನ.9: ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡು ಜೈಲು ಸಜೆ ಅನುಭವಿಸಿ, ಐದು ವರ್ಷಗಳ ಕಾಲ ನಿಷೇಧಕ್ಕೆ ಗುರಿಯಾಗಿದ್ದ ಪಾಕಿಸ್ತಾನದ ವೇಗದ ಬೌಲರ್ ಮುಹಮ್ಮದ್ ಆಮಿರ್ ಮುಂದಿನ ಋತುವಿನಲ್ಲಿ ಇಂಗ್ಲೀಷ್ ಕೌಂಟಿ ಎಸ್ಸೆಕ್ಸ್ ಕ್ಲಬ್‌ನಲ್ಲಿ ಆಡಲು ಸಜ್ಜಾಗಿದ್ದಾರೆ.

ಎಡಗೈ ವೇಗದ ಬೌಲರ್ ಆಮಿರ್ ನಿಷೇಧದ ಅವಧಿ ಕೊನೆಗೊಂಡ ಬಳಿಕ ಕಳೆದ ವರ್ಷ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ವಾಪಸಾಗಿದ್ದರು. ಇದೀಗ ಅವರು ಮುಂದಿನ ವರ್ಷದ ಜೂನ್19 ರಿಂದ ಎಸ್ಸೆಕ್ಸ್ ತಂಡದಲ್ಲಿ ಆಡಲಿದ್ದಾರೆ.

2017ರ ಋತುವಿನಲ್ಲಿ ಮುಹಮ್ಮದ್ ಆಮಿರ್ ನಮ್ಮ ತಂಡವನ್ನು ಸೇರಿಕೊಳ್ಳಲು ನಿರ್ಧರಿಸಿರುವ ವಿಚಾರದಿಂದ ನಮಗೆ ರೋಮಾಂಚನವಾಗಿದೆ. ಅವರು ಈಗಲೂ ಯುವ ಆಟಗಾರ. ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ ಎಂದು ಎಸ್ಸೆಕ್ಸ್ ಕ್ಲಬ್‌ನ ಮುಖ್ಯ ಕೋಚ್ ಕ್ರಿಸ್ ಸಿಲ್ವರ್‌ವುಟ್ ಕ್ಲಬ್‌ನ ವೆಬ್‌ಸೈಟ್‌ಗೆ ತಿಳಿಸಿದ್ದಾರೆ.

24ರ ಪ್ರಾಯದ ಆಮಿರ್ ವಿಶ್ವ ಕ್ರಿಕೆಟ್‌ನ ಪ್ರತಿಭಾವಂತ ವೇಗದ ಬೌಲರ್.2010ರಲ್ಲಿ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಸಿಕ್ಕಿಕೊಳ್ಳುವ ಮೊದಲೇ 18ರ ಹರೆಯದಲ್ಲಿ ಉತ್ತಮ ಬೌಲಿಂಗ್‌ನಿಂದ ವಿಶ್ವದ ಗಮನ ಸೆಳೆದಿದ್ದರು.

ಲಾರ್ಡ್ಸ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ನಾಲ್ಕನೆ ಟೆಸ್ಟ್‌ನ ವೇಳೆ ಉದ್ದೇಶಪೂರ್ವಕವಾಗಿ ನೋಬಾಲ್ ಎಸೆದ ಪ್ರಕರಣಕ್ಕೆ ಸಂಬಂಧಿಸಿ ಆಮಿರ್ ಸೇರಿದಂತೆ ಇನ್ನಿಬ್ಬರು ಪಾಕ್ ಆಟಗಾರರು ನ.2011ರಲ್ಲಿ ಜೈಲುಪಾಲಾಗಿದ್ದರು. ಆಮಿರ್ 3 ತಿಂಗಳು ಜೈಲು ಸಜೆ ಅನುಭವಿಸಿದ್ದು, 2015 ಜನವರಿಯ ತನಕ ಎಲ್ಲ ಮಾದರಿ ಕ್ರಿಕೆಟ್‌ನಲ್ಲಿ ಆಡದಂತೆ ನಿಷೇಧಕ್ಕೆ ಒಳಗಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News