×
Ad

ಬೃಹತ್ ಮೊತ್ತ ದಾಖಲಿಸಿದ ಇಂಗ್ಲೆಂಡ್

Update: 2016-11-10 22:35 IST

ರಾಜ್‌ಕೋಟ್, ನ.10: ಇಲ್ಲಿ ನಡೆಯುತ್ತಿರುವ ಮೊದಲ ಕ್ರಿಕೆಟ್ ಟೆಸ್ಟ್‌ನಲ್ಲಿ ಭಾರತ ದ ವಿರುದ್ಧ ಇಂಗ್ಲೆಂಡ್ ನಿರೀಕ್ಷೆಯಂತೆ ಮೊದಲ ಇನಿಂಗ್ಸ್‌ನಲ್ಲಿ ಬೃಹತ್ ಮೊತ್ತ ದಾಖಲಿಸಿದೆ.
ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದ ಎರಡನೆ ದಿನವಾಗಿರುವ ಇಂದು ಇಂಗ್ಲೆಂಡ್‌ಗೆ ಮೊಯಿನ್ ಅಲಿ ಮತ್ತು ಬೆನ್ ಸ್ಟೋಕ್ಸ್ ಶತಕದ ಕೊಡುಗೆ ನೀಡಿದರು.
 ಮೊದಲ ದಿನದಾಟದಂತ್ಯಕ್ಕೆ ಇಂಗ್ಲೆಂಡ್ 93 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 311 ರನ್ ಗಳಿಸಿತ್ತು. ಆಟ ಮುಂದುವರಿಸಿ ಈ ಮೊತ್ತಕ್ಕೆ 226 ರನ್ ಸೇರಿಸಿತು. 99 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದ ಮೊಯಿನ್ ಅಲಿ ಮತ್ತು 19 ರನ್ ಗಳಿಸಿ ಔಟಾಗದೆ ಉಳಿದಿದ್ದ ಬೆನ್ ಸ್ಟೋಕ್ಸ್ ಶತಕ ದಾಖಲಿಸಿದರು. ಇದರೊಂದಿಗೆ ಇಂಗ್ಲೆಂಡ್‌ನ ಮೂವರು ಶತಕ ದಾಖಲಿಸಿದ್ದಾರೆ. ಮೊದಲ ದಿನ ಜೋ ರೂಟ್ ಶತಕ ದಾಖಲಿಸಿದ್ದರು.
ಎರಡನೆ ದಿನದ ಆಟ ಕೊನೆಗೊಂಡಾಗ ಭಾರತ 23 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 63 ರನ್ ಗಳಿಸಿತ್ತು. ಫಾಲೋ ಆನ್ ತಪ್ಪಿಸಲು 275 ರನ್ ದಾಖಲಿಸಬೇಕಾಗಿದೆ.
ಆರಂಭಿಕ ಆಟಗಾರರಾದ ಮುರಳಿ ವಿಜಯ್(25) ಮತ್ತು ಗೌತಮ್ ಗಂಭೀರ್(28) ಔಟಾಗದೆ ಕ್ರೀಸ್‌ನಲ್ಲಿದ್ದಾರೆ.
ಇಂಗ್ಲೆಂಡ್ 537: ಇಂಗ್ಲೆಂಡ್ ತಂಡ 159.3 ಓವರ್ ಗಳಲ್ಲಿ 537 ರನ್ ದಾಖಲಿಸುವಷ್ಟರಲ್ಲಿ ಆಲೌಟಾಗಿದೆ. ಇದರೊಂದಿಗೆ ಇಂಗ್ಲೆಂಡ್ ಭಾರತದಲ್ಲಿ ಮೂರನೆ ಗರಿಷ್ಠ ರನ್ ದಾಖಲಿಸಿದೆ.
 ಇಂಗ್ಲೆಂಡ್ ತಂಡದ ದಾಂಡಿಗರು ಭಾರತದ ಬೌಲರ್‌ಗಳ ಬೆವರಿಳಿಸಿದ್ದಾರೆ. ಭಾರತದ ಸ್ಪಿನ್ನರ್‌ಗಳನ್ನು ಚೆನ್ನಾಗಿ ದಂಡಿಸಿದ್ದಾರೆ. ನಂ.1 ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 2 ವಿಕೆಟ್ ಉಡಾಯಿಸಿದ್ದರೂ, 46 ಓವರ್‌ಗಳಲ್ಲಿ 167 ರನ್ ನೀಡಿದ್ದಾರೆ. ಉಮೇಶ್ ಯಾದವ್ 112ಕ್ಕೆ 2 ವಿಕೆಟ್ ಪಡೆದಿದ್ದಾರೆ.

   ಅಮಿತ್ ಮಿಶ್ರಾ 1 ವಿಕೆಟ್ ಪಡೆಯಲು 23.3 ಓವರ್‌ಗಳಲ್ಲಿ 98 ರನ್ ಬಿಟ್ಟುಕೊಟ್ಟಿದ್ದಾರೆ. ಮುಹಮ್ಮದ್ ಶಮಿ(65ಕ್ಕೆ 2) ಮತ್ತು ರವೀಂದ್ರ ಜಡೇಜ(86ಕ್ಕೆ 4) ಸ್ವಲ್ಪ ಮಟ್ಟಿಗೆ ನಿಯಂತ್ರಣ ಸಾಧಿಸಿದ್ದಾರೆ.

ಸ್ಟೋಕ್ಸ್ ಶತಕ: ನ್ಯೂಝಿಲೆಂಡ್ ಮೂಲದ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಮತ್ತು ಮೊಯಿನ್ ಅಲಿ 4ನೆ ಟೆಸ್ಟ್ ಶತಕ ಪೂರ್ಣಗೊಳಿಸಿದ್ದಾರೆ. ಇವರು ಐದನೆ ವಿಕೆಟ್‌ಗೆ 62 ರನ್‌ಗಳ ಜೊತೆಯಾಟ ನೀಡಿದರು.
  ಮೊಯಿನ್ ಅಲಿ 195 ಎಸೆತಗಳಲ್ಲಿ 9 ಬೌಂಡರಿಗಳ ಸಹಾಯದಿಂದ ಶತಕ ದಾಖಲಿಸಿದರು. ಅವರು 117 ರನ್(213ಎ, 13) ಗಳಿಸಿ ಮುಹಮ್ಮದ್ ಶಮಿ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.
  ಸ್ಟೋಕ್ಸ್ ಲಂಚ್ ವಿರಾಮದ ಬಳಿಕ ಶತಕ ಪೂರ್ಣಗೊಳಿಸಿದರು. 173 ಎಸೆತಗಳಲ್ಲಿ 12 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಲ್ಲಿ ಶತಕ ತಲುಪಿದರು. ಸ್ಟೋಕ್ಸ್ ಅವರು 128 ರನ್(235ಎ, 13ಬೌ,2ಸಿ) ಗಳಿಸಿ ಔಟಾದರು. ಇದು ಸ್ಟೋಕ್ಸ್ ಅವರ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ.
99 ರನ್‌ಗಳ ಜೊತೆಯಾಟ: ಸ್ಟೋಕ್ಸ್ ಮತ್ತು ಬೈರ್‌ಸ್ಟೋವ್ 6ನೆ ವಿಕೆಟ್‌ಗೆ 99 ರನ್‌ಗಳ ಜೊತೆಯಾಟ ನೀಡಿದರು. ಬೈರ್‌ಸ್ಟೋವ್ 46 ರನ್ ಗಳಿಸಿ ಶಮಿ ಎಸೆತದಲ್ಲಿ ವಿಕೆಟ್ ಕೀಪರ್ ವೃದ್ದಿಮಾನ್ ಸಹಾಗೆ ಕ್ಯಾಚ್ ನೀಡಿದರು. ಆಗ ತಂಡದ ಸ್ಕೋರ್ 120.5 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 442 ರನ್ ತಲುಪಿತ್ತು.
ವೋಕೆಸ್ (4) ಮತ್ತು ರಶೀದ್ (5) ಅವರನ್ನು ಜಡೇಜ ಬೇಗನೆ ಪೆವಿಲಿಯನ್‌ಗೆ ಅಟ್ಟಿದರು. ಜಾಫರ್ ಅನ್ಸಾರಿ 32 ರನ್ ಗಳಿಸಿ ತಂಡದ ಮೊತ್ತ ಐನೂರ ಗಡಿ ದಾಟಲು ನೆರವಾದರು.
ಭಾರತಕ್ಕೆ ಕಠಿಣ ದಿನ:  ಮೊದಲ ಟೆಸ್ಟ್‌ನ ಎರಡನೆ ದಿನ ಇಂಗ್ಲೆಂಡ್ ವಿರುದ್ಧ ಭಾರತ ಕಠಿಣ ಸವಾಲನ್ನು ಎದುರಿಸುವಂತಾಯಿತು. ಇಂಗ್ಲೆಂಡ್ ದಾಂಡಿಗರು ನಿನ್ನೆಯ ಮೊತ್ತಕ್ಕೆ 226 ರನ್ ಸೇರಿಸಿದರು.
 2012ರ ಬಳಿಕ ಭಾರತದಲ್ಲಿ ಪ್ರವಾಸಿ ತಂಡ ಇದೇ ಮೊದಲ ಬಾರಿ 500ಕ್ಕೂ ಅಧಿಕ ರನ್ ದಾಖಲಿಸಿದೆ. ನಾಲ್ಕು ವರ್ಷಗಳ ಹಿಂದೆ ಇಂಗ್ಲೆಂಡ್ ಮುಂಬೈನಲ್ಲಿ ಭಾರತದ ವಿರುದ್ಧ 500ಕ್ಕೂ ಅಧಿಕ ರನ್ ದಾಖಲಸಿತ್ತು. ಬೇರೆ ಯಾವುದೇ ಪ್ರವಾಸಿ ತಂಡ ಈ ಸಾಧನೆ ಮಾಡಿರಲಿಲ್ಲ.
 ಭಾರತದ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಇಂದು ಆಟದಲ್ಲಿ ಕೆಲವು ಕೆಟ್ಟ ಕ್ಷಣಗಳನ್ನು ಎದುರಿಸುವಂತಾಯಿತು.113 ಮತ್ತು 115ನ ಓವರ್‌ಗಳಲ್ಲಿ ಎರಡು ಕ್ಯಾಚ್‌ಗಳನ್ನು ಕೈ ಚೆಲ್ಲಿದರು.
 ಬೆನ್ ಸ್ಟೋಕ್ಸ್ 2014ರಲ್ಲಿ ಭಾರತ ವಿರುದ್ಧದ ಸರಣಿಯಲ್ಲಿ ಸತತ ಮೂರು ಬಾರಿ ಸೊನ್ನೆ ಸುತ್ತಿದ್ದರು. ಆದರೆ ಬಾರಿ ಶತಕದೊಂದಿಗೆ ಶುಭಾರಂಭ ಮಾಡಿದ್ದಾರೆ.
ಐಸಿಸಿ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿರುವ ರವಿಚಂದ್ರನ್ ಅಶ್ವಿನ್ ಇಂದಿನ ಪಂದ್ಯದಲ್ಲಿ ಸಮಸ್ಯೆ ಎದುರಿಸಿದರು. ಇಂಗ್ಲೆಂಡ್‌ನ ದಾಂಡಿಗರನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸುವಲ್ಲಿ ಅವರು ವಿಫಲರಾದರು.

ಸ್ಕೋರ್ ವಿವರ

ಇಂಗ್ಲೆಂಡ್ ಪ್ರಥಮ ಇನಿಂಗ್ಸ್

159.3 ಓವರ್‌ಗಳಲ್ಲಿ 537

ಅಲೆಸ್ಟೈರ್ ಕುಕ್ ಎಲ್‌ಬಿಡಬ್ಲು ಜಡೇಜ 21

ಹಮೀದ್ ಎಲ್‌ಬಿಡಬ್ಲು ಬಿ ಅಶ್ವಿನ್ 31

ಜೋ ರೂಟ್ ಸಿ ಮತ್ತು ಬಿ ಯಾದವ್ 124

ಡಕೆಟ್ ಸಿ ರಹಾನೆ ಬಿ ಅಶ್ವಿನ್ 13

ಮೊಯಿನ್ ಅಲಿ ಬಿ ಶಮಿ 117

ಸ್ಟೋಕ್ಸ್ ಸಿ ಸಹಾ ಬಿ ಯಾದವ್ 128

ಬೈರ್‌ಸ್ಟೋ ಸಿ ಸಹಾ ಬಿ ಶಮಿ 46

ವೋಕ್ಸ್ ಸಿ ಸಹಾ ಬಿ ಜಡೇಜ 04

ರಶೀದ್ ಸಿ ಯಾದವ್ ಬಿ ಜಡೇಜ 05

ಅನ್ಸಾರಿ ಎಲ್‌ಬಿಡಬ್ಲು ಬಿ ಮಿಶ್ರಾ 32

ಬ್ರಾಡ್ ಅಜೇಯ 06

ಇತರ 10

ವಿಕೆಟ್ ಪತನ: 1-47, 2-76, 3-102, 4-281,5-343, 6-442, 7-451, 8-465, 9-517, 10-537.

ಬೌಲಿಂಗ್ ವಿವರ:

ಮುಹಮ್ಮದ್ ಶಮಿ 28.1-5-65-2

 ಉಮೇಶ್ ಯಾದವ್ 31.5-3-112-2

ಆರ್.ಅಶ್ವಿನ್ 46-3-167-2

ರವೀಂದ್ರ ಜಡೇಜ 30-04-86-3

ಅಮಿತ್ ಮಿಶ್ರಾ 23.3-3-98-1

ಭಾರತ ಪ್ರಥಮ ಇನಿಂಗ್ಸ್: 23 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 63

ಮುರಳಿ ವಿಜಯ್ ಅಜೇಯ 25

ಗೌತಮ್ ಗಂಭೀರ್ ಅಜೇಯ 28

ಇತರ 10

ಬೌಲಿಂಗ್ ವಿವರ: ಬ್ರಾಡ್ 5-1-20-0

ವೋಕ್ಸ್ 7-2-17-0

ಅಲಿ 6-2-6-0

ಅನ್ಸಾರಿ 3-0-3-0

ರಶೀದ್ 2-0-8-0

ಭಾರತ-ಇಂಗ್ಲೆಂಡ್ ಟೆಸ್ಟ್: 2ನೆ ದಿನದ ಅಂಕಿ-ಅಂಶ

 2009: ಈ ಹಿಂದೆ 2009ರಲ್ಲಿ ಭಾರತದಲ್ಲಿ ಪ್ರವಾಸಿ ತಂಡದ ಮೂವರು ಬ್ಯಾಟ್ಸ್‌ಮನ್‌ಗಳು ಒಂದೇ ಇನಿಂಗ್ಸ್‌ನಲ್ಲಿ ಮೂರು ಶತಕ ಬಾರಿಸಿದ್ದರು. ಇದೀಗ ಇಂಗ್ಲೆಂಡ್ ರಾಜ್‌ಕೋಟ್‌ನಲ್ಲಿ ಆ ಸಾಧನೆಯನ್ನು ಪುನರಾವರ್ತಿಸಿದೆ. 2008-09ರಲ್ಲಿ ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾದ ತಿಲಕರತ್ನೆ ದಿಲ್ಶನ್, ಮಹೇಲ ಜಯವರ್ಧನೆ ಹಾಗೂ ಪ್ರಸನ್ನ ಜಯವರ್ಧನೆ ಶತಕ ಬಾರಿಸಿದ್ದರು. 1990ರ ಬಳಿಕ ಭಾರತದಲ್ಲಿ ಪ್ರವಾಸಿ ತಂಡದ ಮೂವರು ಬ್ಯಾಟ್ಸ್‌ಮನ್ ಶತಕ ಬಾರಿಸಿದ್ದಾರೆ.

02: ಇಂಗ್ಲೆಂಡ್ ತಂಡ ಎರಡನೆ ಬಾರಿ ಉಪಖಂಡದ ಪಿಚ್‌ನಲ್ಲಿ ಒಂದೇ ಇನಿಂಗ್ಸ್‌ನಲ್ಲಿ 3 ಶತಕ ಬಾರಿಸಿದೆ. 1961-62ರಲ್ಲಿ ಭಾರತದ ವಿರುದ್ಧವೇ ಕಾನ್ಪುರದಲ್ಲಿ ಮೊದಲ ಬಾರಿ ಇಂಗ್ಲೆಂಡ್ ಈ ಸಾಧನೆ ಮಾಡಿತ್ತು.

2011: ಕಾರ್ಡಿಫ್‌ನಲ್ಲಿ 2011ರಲ್ಲಿ ಶ್ರೀಲಂಕಾದ ವಿರುದ್ಧ ಇಂಗ್ಲೆಂಡ್‌ನ ಮೂವರು ಬ್ಯಾಟ್ಸ್‌ಮನ್‌ಗಳು ಒಂದೇ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದರು. 2009 ಹಾಗೂ 2011ರ ನಡುವೆ ನಾಲ್ಕು ಬಾರಿ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಈ ಸಾಧನೆ ಮಾಡಿದ್ದರು. 01: ಬೆನ್ ಸ್ಟೋಕ್ಸ್ ಭಾರತ ವಿರುದ್ಧ ಈ ಮೊದಲು ಆಡಿರುವ ಮೂರು ಇನಿಂಗ್ಸ್‌ನಲ್ಲಿ ಮೂರು ಶೂನ್ಯ ಸುತ್ತಿದ್ದರು. ಇದೀಗ ಶತಕ ಬಾರಿಸಿ ರನ್ ಬರ ನೀಗಿಸಿಕೊಂಡಿದ್ದಾರೆ. 2014ರಲ್ಲಿ ಭಾರತದ ವಿರುದ್ಧ ಟ್ರೆಂಟ್‌ಬಿಡ್ಜ್ ಹಾಗೂ ಲಾರ್ಡ್ಸ್ ಸ್ಟೇಡಿಯಂಗಳಲ್ಲಿ ಸ್ಟೋಕ್ಸ್ ಸತತ ಮೂರು ಬಾರಿ ಶೂನ್ಯ ಸುತ್ತಿದ್ದರು.

04: ಸ್ಟೋಕ್ಸ್ ವೃತ್ತಿಜೀವನದಲ್ಲಿ ನಾಲ್ಕನೆ ಬಾರಿ ಶತಕ ಬಾರಿಸಿದ್ದಾರೆ. ಸ್ಟೋಕ್ಸ್ 4 ಶತಕಗಳನ್ನು ಆಫ್ರಿಕ, ಏಷ್ಯಾ, ಯುರೋಪ್ ಹಾಗೂ ಆಸ್ಟ್ರೇಲಿಯ ನೆಲದಲ್ಲಿ ದಾಖಲಿಸಿದ್ದಾರೆ.

  139: ಇಂಗ್ಲೆಂಡ್ ಎರಡನೆ ದಿನದಾಟದ ಬೆಳಗ್ಗಿನ ಹೊತ್ತಿನಲ್ಲಿ 30 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 139 ರನ್ ಕಲೆ ಹಾಕಿದೆ. ಮೊದಲ ದಿನದ ಲಂಚ್ ಹಾಗೂ ಟೀ ವಿರಾಮದ ನಡುವೆ 31.3 ಓವರ್‌ಗಳಲ್ಲಿ 107 ರನ್ ಗಳಿಸಿತ್ತು. 1985: ಇಂಗ್ಲೆಂಡ್ ತಂಡ 1985ರಲ್ಲಿ ಭಾರತದ ವಿರುದ್ಧ ಗರಿಷ್ಠ ಮೊತ್ತವನ್ನು ದಾಖಲಿಸಿತ್ತು. 1984-85ರ ಪ್ರವಾಸದ ವೇಳೆ ಚೆನ್ನೈನಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 652 ರನ್ ಗಳಿಸಿತ್ತು. ರಾಜ್‌ಕೋಟ್‌ನಲ್ಲಿ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ ಗಳಿಸಿರುವ 537 ರನ್ ಭಾರತ ವಿರುದ್ಧ ದಾಖಲಿಸಿರುವ ಮೂರನೆ ಗರಿಷ್ಠ ಸ್ಕೋರ್. ಇಂಗ್ಲೆಂಡ್ 2012-13ರಲ್ಲಿ ಕೋಲ್ಕತಾದಲ್ಲಿ 523 ರನ್ ಗಳಿಸಿತ್ತು. ಆ ಬಳಿಕ ಭಾರತಕ್ಕೆ ಭೇಟಿ ನೀಡಿರುವ ಯಾವ ಪ್ರವಾಸಿ ತಂಡವೂ 500ರ ಗಡಿ ದಾಟಿಲ್ಲ.

 08: ಇಂಗ್ಲೆಂಡ್ ಕಳೆದ 10 ಇನಿಂಗ್ಸ್‌ಗಳಲ್ಲಿ 8ನೆ ಬಾರಿ 6ನೆ ವಿಕೆಟ್‌ಗೆ 50 ಹಾಗೂ ಅದಕ್ಕಿಂತ ಹೆಚ್ಚು ರನ್ ಜೊತೆಯಾಟ ನಡೆಸಿದೆ. 13: ಸ್ಟೋಕ್ಸ್ ಹಾಗೂ ಜಾನಿ ಬೈರ್‌ಸ್ಟೋ ಸೇರಿಸಿದ 99 ರನ್ ಈ ವರ್ಷ ಇಂಗ್ಲೆಂಡ್ ತಂಡ ಆರನೆ ವಿಕೆಟ್‌ಗೆ ಸೇರಿಸಿದ 13ನೆ ಫಿಫ್ಟಿ ಪ್ಲಸ್ ಜೊತೆಯಾಟವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News